ಕೊಪ್ಪಳ, ಜನವರಿ 3: ಬೆಟ್ಟದಲ್ಲಿನ ಕಿರಿದಾದ ಸ್ಥಳದಲ್ಲಿ ಬಂಡೆ ಹತ್ತಲು ಭಕ್ತರ ಸಾಹಸ, ಹನುಮಂತನ ದರ್ಶನಕ್ಕೆ ಬೆಟ್ಟದ ಮೇಲೆ ಕಿಕ್ಕಿರಿದು ಸೇರಿರುವ ಭಕ್ತಸಾಗರ. ಮತ್ತೊಂದೆಡೆ, ಕಾಡಿನ ನಡುವೆ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವ ಯುವತಿ. ಇದೆಲ್ಲ ಕೊಪ್ಪಳದ ಅಂಜನಾದ್ರಿಯಲ್ಲಿ ಗುರುವಾರ ಸಂಜೆ ಕಂಡು ಬಂದ ದೃಶ್ಯಗಳು.
ಹನುಮಂತನ ಜನ್ಮಸ್ಥಳ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಐತಿಹಾಸಿಕ ಸ್ಥಳವಾಗಿದೆ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರ್ತಾರೆ. 525 ಮೆಟ್ಟಿಲುಗಳನ್ನು ಹತ್ತಿ, ಬೆಟ್ಟದ ಮೇಲಿರುವ ಆಂಜನೇಯನ ದರ್ಶನ ಪಡೆದು ಪುನೀತರಾಗುತ್ತಾರೆ. ಬೆಟ್ಟದ ಹಿಂಬಾಗದಲ್ಲಿರುವ ಬಂಡೆಗಲ್ಲಿನ ಮೇಲೆ ನಿಂತು ಕೆಲವರು ಸೆಲ್ಪಿ ಪೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಇದೇ ರೀತಿ ಆಂಜನೇಯನ ದರ್ಶನ ಪಡೆಯುಲು ಬೆಟ್ಟ ಹತ್ತಿದ್ದ ಯುವತಿಯೊಬ್ಬಳು ಬೆಟ್ಟದಿಂದ ಇಳಿಯುವ ಮೊದಲೇ ಆಪತ್ತಿಗೆ ಸಿಲುಕಿದ್ದಾಳೆ. ಬೆಟ್ಟದ ಮೇಲಿರುವ ಬಂಡೆಗಲಿನ ಮೇಲಿಂದ 30 ರಿಂದ 40 ಅಡಿ ಕೆಳಗೆ ಬಿದ್ದಿದ್ದಾಳೆ. ಕೆಳಕ್ಕೆ ಬೀಳುತ್ತಿದ್ದಂತೆ ಜೋರಾಗಿ ಕಿರುಚಾಡಿದ್ದಾಳೆ. ಸದ್ದು ಕೇಳಿದ ಭಕ್ತರು ದೇವಸ್ಥಾನದ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ.
ದುರ್ಗಮವಾಗಿರುವ ಬೆಟ್ಟದಲ್ಲಿ ಇಳಿದು ದೇವಾಲಯದ ಸಿಬ್ಬಂದಿ ಯುವತಿ ಬಳಿ ಹೋಗಿದ್ದಾರೆ. ಆಕೆ ಜೀವಂತ ಇದ್ದಿದ್ದರಿಂದ ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ ಮಾಡಲಾಯಿತು. ಸರಿಸುಮಾರು ಎರಡು ಗಂಟೆ ಕಾರ್ಯಾಚರಣೆ ಬಳಿಕ ಬೆಟ್ಟದಿಂದ ಯುವತಿಯನ್ನು ಹೊರಗೆ ತರಲಾಯಿತು. ಮೊದಲಿಗೆ ಗಂಗಾವತಿ ತಾಲೂಕು ಆಸ್ಪತ್ರೆಗೆ ಹಾಗೂ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಯುವತಿ ಪೋಟೋ ಕ್ಲಿಕ್ಕಿಸಿಕೊಳ್ಳಲು ಹೋಗಿ ಬಂಡೆಯಿಂದ ಜಾರಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಯುವತಿ ರಾಯಚೂರು ಮೂಲದ ಅಶ್ವಿನಿ ಎಂಬುದು ಗೊತ್ತಾಗಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಕೊಪ್ಪಳ ಜಿಲ್ಲಾ ಎಸ್‌ಪಿ ಡಾ. ರಾಮ್ ಎಲ್ ಅರಸಿದ್ದಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ಬೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಸದ್ಯ ಅರೆಪ್ರಜ್ಞಾವಸ್ಥೆಯಲ್ಲಿರುವ ಯುವತಿಗೆ ಚಿಕಿತ್ಸೆ ಮುಂದುವರಿದಿದೆ. ಗುಣಮುಖವಾದ ನಂತರ ಘಟನೆಗೆ ನಿಖರ ಕಾರಣ ಏನು ಎಂಬದು ತಿಳಿಯಲಿದೆ.
ಇದನ್ನೂ ಓದಿ: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ, ಮಗು ಸಾವು
ಅಂಜನಾದ್ರಿ ಬೆಟ್ಟ ಹತ್ತಲು ಕೆಲವರು ಮೆಟ್ಟಿಲಲ್ಲಿ ಹೋಗದೆ ಕಿಷ್ಕಿಂದೆಯಂತಹ ಬಂಡೆಗಳನ್ನು ಏರುವ ದುಸ್ಸಾಹಸ ಮಾಡುತ್ತಾರೆ. ಸ್ವಲ್ಪ ಯಾಮಾರಿದರೂ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಇನ್ನು ಮುಂದಾದರೂ ದೇವಾಲಯದ ಸಿಬ್ಬಂದಿ ಇದಕ್ಕೆ ಕಡಿವಾಣ ಹಾಕಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ