ಅಪ್ಪನ ಸಾಲ ಮಗ ತೀರಿಸಬೇಕಲ್ಲ; ಯುಪಿಎ ಸರ್ಕಾರ ಮಾಡಿದ್ದನ್ನ ನಾವು ತೀರಿಸ್ತಾ ಇದೀವಿ; ಎಲ್‌ಪಿಜಿ ಬೆಲೆ ಏರಿಕೆಗೆ ಸಂಗಣ್ಣ ಕರಡಿ ಉತ್ತರ
UPA ಸರ್ಕಾರ ಇದ್ದಾಗ ತೈಲ ಕಂಪನಿಗಳಿಗೆ ಬಾಂಡ್ ಕೊಟ್ಟಿದ್ರು, ನಮ್ಮ ಸರ್ಕಾರ 59 ಸಾವಿರ ಕೋಟಿ ರೂಪಾಯಿ ಹಾಗೂ 35 ಸಾವಿರ ಕೋಟಿ ರೂಪಾಯಿ ಸಾಲ ತುಂಬಿದೆ. ಇನ್ನು ಒಂದು ಲಕ್ಷ ಕೋಟಿ ರೂ. ಬಾಕಿ ಇದೆ: ಸಂಸದ ಸಂಗಣ್ಣ ಕರಡಿ

ಕೊಪ್ಪಳ: ಬೆಲೆ ಏರಿಕೆಯಿಂದ ಮೊದಲೇ ಕಂಗೆಟ್ಟಿರುವ ಜನ ಸಾಮಾನ್ಯರಿಗೆ ಸೆಪ್ಟೆಂಬರ್ ತಿಂಗಳ ಮೊದಲ ದಿನವೇ ಶಾಕ್ ಕೊಡಲಾಗಿದ್ದು, ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್ಗೆ 25 ರೂಪಾಯಿ ಏರಿಕೆ ಮಾಡಲಾಗಿದೆ. ಆದರೆ, ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ಪ್ರಶ್ನೆ ಮಾಡಿದಾಗ ಸಂಸದ ಸಂಗಣ್ಣ ಕರಡಿ ಉಡಾಫೆಯಾಗಿ ಮಾತನಾಡಿದ್ದು, ಸಾಲ ಮಾಡಿಯಾಗಿದೆ, ಈಗ ಸಾಲ ಹರಿಬೇಕಲ್ಲ ಎಂದು ಹೇಳುವ ಮೂಲಕ ಬೆಲೆ ಏರಿಕೆಯನ್ನೂ ಸಮರ್ಥಿಸಿಕೊಂಡಂತೆ ಕಾಣುತ್ತಿದೆ.
UPA ಸರ್ಕಾರ ಇದ್ದಾಗ ತೈಲ ಕಂಪನಿಗಳಿಗೆ ಬಾಂಡ್ ಕೊಟ್ಟಿದ್ರು, ನಮ್ಮ ಸರ್ಕಾರ 59 ಸಾವಿರ ಕೋಟಿ ರೂಪಾಯಿ ಹಾಗೂ 35 ಸಾವಿರ ಕೋಟಿ ರೂಪಾಯಿ ಸಾಲ ತುಂಬಿದೆ. ಇನ್ನು ಒಂದು ಲಕ್ಷ ಕೋಟಿ ರೂ. ಬಾಕಿ ಇದೆ ಎಂದಿದ್ದಾರೆ. ಹಾಗಾದರೆ ಇದಕ್ಕೆಲ್ಲಾ ಯುಪಿಎ ಸರ್ಕಾರ ಕಾರಣ ಅಂತ ಹೇಳ್ತೀರಾ ಎಂದು ಕೇಳಿದಾಗ ಸಿಡಿಮಿಡಿಯಾದ ಅವರು, ನಿಮ್ಮಪ್ಪ ಸಾಲ ಮಾಡಿದ್ರೆ ಮಗನಾಗಿ ನೀನು ಸಾಲ ತೀರಿಸ್ತೀಯಾ ಇಲ್ವಾ? ನಾವು ಕೂಡಾ ಹಂಗೆ ಸಾಲ ತೀರಿಸ್ತಿದಿವಿ ಎಂದು ಹೇಳಿದ್ದಾರೆ.
ಬಡವರಿಗೆ ಏನ್ ಸಹಾಯ ಮಾಡಬೇಕೋ ಮಾಡಿದೀವಿ. ಜನರು ಸಾಲ ಮಾಡಬೇಕಾ ಅಂತಾ ಕೇಳಿದ್ರೆ ಏನ್ ಹೇಳೋದು. ದೇಶ ಒತ್ತೆ ಇಡಬೇಕಾ ನಾವು? ಬಡವರ ಬಗ್ಗೆ ನೀವು ಕೇಳೋದನ್ನು ನಾನು ಒಪ್ಕೋತಿನಿ. ಆದರೆ, ಸರ್ಕಾರ ನಡೆಸಬೇಕಲ್ಲ ನಾವು, ಕೊವಿಡ್ನಿಂದ ಸರ್ಕಾರಕ್ಕೆ ಏನೂ ಆದಾಯ ಇಲ್ಲ ಎಂದು ಸಮಜಾಯಿಷಿ ಕೊಟ್ಟಿದ್ದಾರೆ.
ಸತತ ಬೆಲೆ ಏರಿಕೆ ಸಬ್ಸಿಡಿ ರಹಿತ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಸಿಲಿಂಡರ್ ಬೆಲೆಯ ಏರಿಕೆ ಆದೇಶವು ಇಂದಿನಿಂದಲೇ (ಸೆಪ್ಟೆಂಬರ್ 1, 2021) ಜಾರಿಗೆ ಬರಲಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ಗೆ ಈಗ 884.50 ರೂಪಾಯಿ ನೀಡಬೇಕಿದೆ. ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಹದಿನೈದು ದಿನಗಳ ಹಿಂದೆಯಷ್ಟೇ ಅಂದರೆ ಆಗಸ್ಟ್ 17 ರಿಂದ ಜಾರಿಗೆ ಬರುವ ರೀತಿಯಲ್ಲಿ ಪ್ರತಿ ಸಿಲಿಂಡರ್ಗೆ 25 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಅಲ್ಲದೇ ಈ ಹಿಂದೆ ಜುಲೈ 1ನೇ ತಾರೀಕಿನಂದು ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 25.50 ರೂಪಾಯಿ ಹೆಚ್ಚಿಸಲಾಗಿತ್ತು.
ಎಲ್‌ಪಿಜಿ ಅಡುಗೆ ಸಿಲಿಂಡರ್ ಬೆಲೆ ಜನವರಿ 1ರಿಂದ ಸೆಪ್ಟೆಂಬರ್ 1ರವರೆಗೆ 190 ರೂಪಾಯಿ ಹೆಚ್ಚಳವಾಗಿದೆ. ಈಗ ಬೆಂಗಳೂರಿನಲ್ಲಿ 862 ರೂ ಇದ್ದ ಅಡುಗೆ ಸಿಲಿಂಡರ್ ಬೆಲೆ 887 ರೂ.ಗೆ ಏರಿಕೆಯಾಗಿದೆ. 15 ದಿನಗಳ ಅಂತರದಲ್ಲಿ 50 ರೂಪಾಯಿ ಏರಿಕೆಯಾಗಿರುವುದು ಜನ ಸಾಮಾನ್ಯರನ್ನು ಚಿಂತೆಗೆ ನೂಕಿದೆ.
ಇದನ್ನೂ ಓದಿ: LPG Cylinder Price: ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೆ 25 ರೂಪಾಯಿ ಏರಿಕೆ; ಗ್ಯಾಸ್ ಬಲುಭಾರ
Financial Changes: ಪಿಎಫ್ನಿಂದ ಎಲ್‌ಪಿಜಿ ದರದ ತನಕ ಸೆಪ್ಟೆಂಬರ್ 1ರಿಂದ 5 ಪ್ರಮುಖ ಬದಲಾವಣೆಗಳಿವು
(MP Sanganna Karadi reaction over LPG price hike)