ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಮುಂದೆ ಮದ್ಯಪ್ರೀಯರ ಪ್ರತಿಭಟನೆ; ಕೂಡಲೇ ಬಾರ್​ ಓಪನ್​ ಮಾಡುವಂತೆ ಮನವಿ

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು, ಬಾರ್ ಬೇಡ ಎಂದು ಪ್ರತಿಭಟನೆ ಮಾಡುವುದನ್ನು ನಾವು ನೋಡದ್ದೇವೆ. ಆದರೆ, ಇಲ್ಲೊಂದು ಊರಲ್ಲಿ ನಮಗೆ ಮಧ್ಯಂಗಡಿ ಬೇಕೆಂದು ಪ್ರತಿಭಟನೆ ನಡೆಸಿರುವ ಅಪರೂಪದ ಪ್ರಕರಣವೊಂದು ನಡೆದಿದೆ.‌ ಅಷ್ಟಕ್ಕೂ ಇಂತಹದೊಂದು ಅಪರೂಪದ ಪ್ರತಿಭಟನೆ ನಡೆದಿದ್ದು ಎಲ್ಲಿ ಅಂತೀರಾ? ಇಲ್ಲಿದೆ ನೋಡಿ.

ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಮುಂದೆ ಮದ್ಯಪ್ರೀಯರ ಪ್ರತಿಭಟನೆ; ಕೂಡಲೇ ಬಾರ್​ ಓಪನ್​ ಮಾಡುವಂತೆ ಮನವಿ
ಮದ್ಯಪ್ರೀಯರ ಪ್ರತಿಭಟನೆ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 19, 2023 | 6:19 PM

ಕೊಪ್ಪಳ, ಸೆ.19: ಒಂದೆಡೆ ನಮಗೆ ಎಣ್ಣೆ ಹೊಡೆಯಲು ಬಾರ್ ಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದರೆ., ಇನ್ನೊಂದೆಡೆ ಬಾರ್​ಗೆ ಅನುಮತಿ ನೀಡಬೇಕೆಂದು ಎಸಿಗೆ ಮನವಿ ಸಲ್ಲಿಸುತ್ತಿರುವ ಮದ್ಯಪ್ರೀಯರು. ಈ ದೃಶ್ಯಗಳು ಕಂಡುಬಂದಿದ್ದು ಕೊಪ್ಪಳ(Koppala)ದಲ್ಲಿ. ಹೌದು, ನಗರದ ಜಿಲ್ಲಾ ಆಡಳಿತ ಭವನದ ಎದುರು ಇಂದು(ಸೆ.19) ವಿಭಿನ್ನ ಹಾಗೂ ಅಪರೂಪದ ಪ್ರತಿಭಟನೆಯೊಂದು ಜರುಗಿತು. ಅಷ್ಟಕ್ಕೂ ಈ ಪ್ರತಿಭಟನೆ ನಡೆದದ್ದು ಯಾವುದೋ ಗ್ರಾಮದ ರಸ್ತೆ ಸರಿಯಿಲ್ಲ, ಅಥವಾ ಸಮಸ್ಯೆ ಬಗೆಹರಿಸಿ ಎಂದಲ್ಲ. ಬದಲಾಗಿ ನಮಗೆ ದಿನವೂ ಎಣ್ಣೆ ಹೊಡೆಯಲು ಮಧ್ಯದಂಗಡಿ ಆರಂಭ ಮಾಡಿ ಎಂದು ಮಧ್ಯಪ್ರಿಯರು ಪ್ರತಿಭಟನೆ ನಡೆಸಿ ಅಚ್ಚರಿಗೆ ಕಾರಣರಾದರು.

ಅಂದಹಾಗೇ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದ ಮಧ್ಯಪ್ರಿಯರಿಗೆ ತಮ್ಮೂರಲ್ಲಿ ಬಾರ್​ಗಳಲ್ಲಿದೆ ಇರುವುದರಿಂದ ಎಣ್ಣೆ ಹೊಡೆಯಲು ಬಾರಿ ತೊಂದೆರೆಯಾಗುತ್ತಿದ್ದು, ಅಲ್ಲದೇ ಬೇರೆ ಊರುಗಳಿಂದ ಎಣ್ಣೆ ತರುವುದಕ್ಕೆ ಹೋದರೆ, ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರಂತೆ. ಜೊತೆಗೆ ನಮಗೆ ಅಲ್ಲಿಗೆ ಹೋಗಿ ಬರೋಕೆ ಸಮಯ ವ್ಯರ್ಥವಾಗುತ್ತಿದೆ ಎನ್ನುತ್ತಿದ್ದಾರೆ. ಇನ್ನು ಗ್ರಾಮದಲ್ಲಿ ಒಂದು ಬಾರ್ ಓಪನ್ ಆಗುತ್ತಿತ್ತು. ಆದರೆ, ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರಿಂದ ಬಾರ್ ಇನ್ನೂ ಓಪನ್ ಆಗಿಲ್ಲ. ಹೀಗಾಗಿ ಈ ಕೂಡಲೇ ಬಾರ್ ಆರಂಭಿಸಬೇಕೆಂದು ಒತ್ತಾಯಿಸಿ ಮದ್ಯಪ್ರೀಯರು ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ:ಶಿವಮೊಗ್ಗದಲ್ಲಿ ಮದ್ಯ ನೀಡಲು ನಿರಾಕರಿಸಿದ್ದಕ್ಕೆ ಬಾರ್​ ಸಿಬ್ಬಂದಿ ಮೇಲೆ ಹಲ್ಲೆ

ಇನ್ನು ಶ್ರೀ ಲಿಕ್ಕರ್ಸ್ ಎನ್ನೋ ಬಾರ್ ಆರಂಭಕ್ಕೆ ಕುದರಿಮೋತಿ ಗ್ರಾಮದಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ಶಾಸಕ ಬಸವರಾಜ ರಾಯರೆಡ್ಡಿ ಸಹ ಬಾರ್ ಬೇಡವೆಂದು ಪತ್ರ ಬರೆದಿದ್ದಾರೆ. ಹೀಗಾಗಿ ಬಾರ್ ಇನ್ನೂ ಆರಂಭವಾಗಿಲ್ಲ.‌ ಇದರಿಂದ ನಾವು ಬೇರೆ ಗ್ರಾಮಕ್ಕೆ ಹೋಗಿ ಹೆಚ್ಚಿನ ಹಣಕ್ಕೆ ಮದ್ಯ ಖರೀಸಿಸಬೇಕೆನ್ನುವುದು ಮದ್ಯಪ್ರೀಯರ ಅಳಲಾಗಿದೆ. ಈ ಹಿನ್ನಲೆಯಲ್ಲಿ ಶೀಘ್ರವೇ ಬಾರ್ ಆರಂಭಿಸಲು ಒತ್ತಾಯಿಸಿ ಸಹಾಯಕ ಆಯುಕ್ತ ಮಹೇಶ್ ಮಾಲಗಿತ್ತಿ ಅವರಿಗೂ ಸಹ ಮದ್ಯಪ್ರೀಯರು ಮನವಿ ಸಲ್ಲಿಸಿದರು.

ಈಗಾಗಲೇ ಗ್ರಾಮದಲ್ಲಿ ಎಲ್ಲೆಂದರಲ್ಲಿ ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆಯಂತೆ.‌ ಹಾಗೊಂದು ವೇಳೆ ಬಾರ್ ಆರಂಭವಾದರೆ, ಅದಕ್ಕೆಲ್ಲ ಬ್ರೇಕ್ ಬಿಳಲಿದೆ. ಈ ಕಾರಣಕ್ಕೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಬಾರ್ ಆರಂಭಿಸಲು ಬಿಡುತ್ತಿಲ್ಲ ಎನ್ನುವುದು ಮದ್ಯಪ್ರೀಯರ ಆರೋಪ. ಒಟ್ಟಿನಲ್ಲಿ ಅದೇನೇ ಇರಲಿ ಬಾರ್ ಆರಂಭಿಸಲು ಒತ್ತಾಯಿಸಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದು ಮಾತ್ರ ಅಚ್ಚರಿಯೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ