ಗ್ರಾಮಸ್ಥರಿಂದಲೇ ರಸ್ತೆ ದುರಸ್ತಿ; ಗಣೇಶ ಮೂರ್ತಿ ಮೆರವಣಿಗೆಯ ಡಿಜೆ ಹಣವನ್ನ ರಸ್ತೆ ರಿಪೇರಿಗೆ ಬಳಸಲು ಮುಂದಾದ ಜನ

ಅದು ಸರ್ಕಾರ ಮಾಡಬೇಕಾಗಿದ್ದ ಕೆಲಸ. ಹತ್ತಾರು ಬಾರಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ತಮ್ಮೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿ ಮಾಡಿ ಎಂದು ಜನರು ಹೇಳುತ್ತಲೇ ಇದ್ದರು. ಆದ್ರೆ, ಯಾರೂ ಕೂಡ ಹೊಸ ರಸ್ತೆ ನಿರ್ಮಾಣವಾಗಲಿ, ಒಂದು ಬುಟ್ಟಿ ಮಣ್ಣು ಕೂಡ ಹಾಕಿಸಿರಲಿಲ್ಲ. ಹೀಗಾಗಿ ವಾಹನ ಸವಾರರು ಪ್ರತಿನಿತ್ಯ ಪರದಾಡುತ್ತಿದ್ದರು. ಆದ್ರೆ ಇದೀಗ ಗ್ರಾಮದ ಜನರೇ ರಸ್ತೆ ದುರಸ್ಥಿ ಕೆಲಸ ಆರಂಭಿಸಿದ್ದಾರೆ. ಹೌದು, ಗಣಪತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಸಮಯದಲ್ಲಿ ಡಿಜೆಗೆ ಬಳಸುವ ಹಣವನ್ನು ರಸ್ತೆ ರಿಪೇರಿಗೆ ಬಳಸಿಕೊಳ್ಳೋ ಮೂಲಕ ಮಾದರಿ ಕೆಲಸಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ.

ಗ್ರಾಮಸ್ಥರಿಂದಲೇ ರಸ್ತೆ ದುರಸ್ತಿ; ಗಣೇಶ ಮೂರ್ತಿ ಮೆರವಣಿಗೆಯ ಡಿಜೆ ಹಣವನ್ನ ರಸ್ತೆ ರಿಪೇರಿಗೆ ಬಳಸಲು ಮುಂದಾದ ಜನ
ಗಣೇಶ ಮೂರ್ತಿ ಮೆರವಣಿಗೆಯ ಡಿಜೆ ಹಣವನ್ನ ರಸ್ತೆ ರಿಪೇರಿಗೆ ಬಳಸಲು ಮುಂದಾದ ಕಿನ್ನಾಳ ಗ್ರಾಮದ ಜನ
Edited By: ಕಿರಣ್ ಹನುಮಂತ್​ ಮಾದಾರ್

Updated on: Sep 10, 2024 | 4:15 PM

ಕೊಪ್ಪಳ, ಸೆ.10: ರಾಜ್ಯದಲ್ಲಿ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಗಣೇಶ ಪ್ರತಿಷ್ಠಾಪನೆಯ ಸಮಯದಲ್ಲಿ ಮತ್ತು ವಿಸರ್ಜನೆ ವೇಳೆ ಅನೇಕ ಕಡೆ ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ ಡಿಜೆ ಹಚ್ಚಿ ಗಣೇಶನ ಭಕ್ತರು ಕುಣಿದು ಕುಪ್ಪಳಿಸಿದ್ದಾರೆ. ಅದೇ ರೀತಿ ಕೊಪ್ಪಳ(Koppal) ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಕೂಡ ಹಿಂದೂ ಮಹಾಗಣಪತಿ ಕಾಮನಕಟ್ಟೆ ಗೆಳೆಯರ ಬಳಗದಿಂದ ಗಣೇಶ ವಿಗ್ರಹದ ಪ್ರತಿಷ್ಠಾಪನೆ ಮಾಡಲಾಗಿದೆ. ಕಳೆದ ಒಂಬತ್ತು ವರ್ಷಗಳಿಂದ ಈ ತಂಡ ಗ್ರಾಮದಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡುತ್ತಾ ಬಂದಿದೆ.

ಗಣೇಶ ವಿಗ್ರಹ ಮೆರವಣಿಗೆ ಕಾರ್ಯಕ್ರಮದ ಡಿಜೆಗೆ ಬ್ರೇಕ್

ಪ್ರತಿವರ್ಷ ಅದ್ದೂರಿಯಾಗಿ ಗಣೇಶ ಹಬ್ಬವನ್ನು ಆಚರಣೆ ಮಾಡುತ್ತಿರುವ ಗ್ರಾಮದ ಜನರು, ಗಣೇಶ ಪ್ರತಿಷ್ಠಾಪನೆಯ ಸಮಯದಲ್ಲಿ ಮತ್ತು ವಿಸರ್ಜನೆಯ ಸಮಯದಲ್ಲಿ ಡಿಜೆ ತಂದು, ಇಡೀ ಗ್ರಾಮದ ಜನರು ಕುಣಿದು ಕುಪ್ಪಳಿಸುತ್ತಿದ್ದರು. ಆದ್ರೆ, ಡಿಜೆ ಹಚ್ಚಿದರೆ ಅದರ ಆನಂದ ಇರುವುದು ಕೇವಲ ನಾಲ್ಕೈದು ಗಂಟೆ ಮಾತ್ರ. ಆದ್ರೆ, ಇದನ್ನು ಹೊರತುಪಡಿಸಿ ಏನಾದರೂ ಸಮಾಜಮುಖಿ ಕೆಲಸ ಮಾಡೋಣ ಎಂದು ಗೆಳೆಯರ ಬಳಗದ ಸದಸ್ಯರು ನಿರ್ಧರಿಸಿದರು. ಅದರಂತೆ ಕಿನ್ನಾಳ ಗ್ರಾಮದಿಂದ ಕೊಪ್ಪಳ ನಗರಕ್ಕೆ ಹೋಗುವ ರಸ್ತೆ ದುರಸ್ಥಿಯನ್ನು ಮಾಡಲು ಮುಂದಾಗಿದ್ದು, ಇಂದು ಮುಂಜಾನೆಯಿಂದ ರಸ್ತೆ ದುರಸ್ಥಿ ಕೆಲಸವನ್ನು ಆರಂಭಿಸಿದ್ದಾರೆ.

ಇದನ್ನೂ ಓದಿ:ಹುಬ್ಬಳ್ಳಿ ಈದ್ಗಾ ಮೈದಾನ ರಾಮಾವತಾರ ಗಣೇಶ ಮೆರವಣಿಗೆಯ ವಿಡಿಯೋ ನೋಡಿ

ಜನಹಿತಸ್ಕೋಸ್ಕರ ಜನರಿಂದಲೇ ರಸ್ತೆ ದುರಸ್ಥಿ ಕೆಲಸ

ಕಿನ್ನಾಳ ಗ್ರಾಮದಿಂದ ಕೊಪ್ಪಳ ನಗರಕ್ಕೆ ಬರಲು ಪ್ರಯಾಣಿಕರು ಹರಸಾಹಸ ಪಡಬೇಕಾಗಿತ್ತು. ರಸ್ತೆಯಲ್ಲಿ ಬಹುತೇಕ ತಗ್ಗುಗುಂಡಿಗಳೇ ಇವೆ. ಹೀಗಾಗಿ ಹತ್ತು ಕಿಲೋ ಮೀಟರ್​ ಪ್ರಯಾಣಕ್ಕೆ ಒಂದು ಗಂಟೆ ಸಮಯಾವಕಾಶ ಬೇಕಾಗಿತ್ತು. ತಮ್ಮೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕಳೆದ ಅನೇಕ ವರ್ಷಗಳಿಂದ ನಿರ್ಮಿಸಿಲ್ಲ. ಇರುವ ರಸ್ತೆ ಕೂಡ ಹಾಳಾಗಿ ಹೋಗಿದ್ದರಿಂದ ಗ್ರಾಮದ ಜನರು ಹೊಸದಾಗಿ ರಸ್ತೆ ನಿರ್ಮಾಣ ಮಾಡಿ, ಇಲ್ಲವೇ ರಸ್ತೆಯನ್ನು ರಿಪೇರಿಯಾದರೂ ಮಾಡಿ ಎಂದು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿದ್ದರು.

ಆದರೂ ಯಾರೂ ಕೂಡ ಜನರ ಸಮಸ್ಯೆಗೆ ಸ್ಪಂಧಿಸುವ ಕೆಲಸ ಮಾಡಿರಲಿಲ್ಲ. ಹೀಗಾಗಿ ಡಿಜೆ ಗಾಗಿ ಬಳಸಲು ಉದ್ದೇಶಿಸಲಾಗಿದ್ದ ಎರಡು ಲಕ್ಷಕ್ಕೂ ಅಧಿಕ ಹಣವನ್ನು, ಡಿಜೆ ಬದಲಾಗಿ ರಸ್ತೆ ರಿಪೇರಿ ಮಾಡಲು ನಿರ್ಧಿರಿಸಿದ್ದಾರೆ. ಅದರಂತೆ ಕಿನ್ನಾಳ ಗ್ರಾಮದಿಂದ ಸರಿಸುಮಾರು ಎಂಟರಿಂದ ಒಂಬತ್ತು ಕಿಲೋ ಮೀಟರವರಗೆ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವುದರ ಜೊತೆಗೆ ಮುರುಮ್ ಹಾಕಿ, ಸಮತಟ್ಟು ಮಾಡುವ ಕೆಲಸವನ್ನು ಗ್ರಾಮಸ್ಥರು ಆರಂಭಿಸಿದ್ದಾರೆ.

ಜನರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡುವ ಕೆಲಸವನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾಡಬೇಕು. ಆದ್ರೆ, ಅವರು ತಾವು ಮಾಡುವ ಕೆಲಸವನ್ನು ಮರೆತಿದ್ದರಿಂದ, ಜನರು ಅನಿವಾರ್ಯವಾಗಿ ಇದೀಗ ತಾವೇ ರಸ್ತೆ ದುರಸ್ಥಿ ಮಾಡಲು ಆರಂಭಿಸಿದ್ದಾರೆ. ಜೊತೆಗೆ ಡಿಜೆ ಗಾಗಿ ಬಳಸಲು ಮುಂದಾಗಿದ್ದ ಹಣವನ್ನು ತಮ್ಮೂರ ರಸ್ತೆ ರಿಪೇರಿಗೆ ಬಳಸಲು ಮುಂದಾಗಿರೋದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಂಜಯ್ಯಾ ಚಿಕ್ಕಮಠ

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್​ನಿಂದ ಆರಂಭವಾದ ವೃತ್ತಿ ಬದುಕು, ಕಲಬುರಗಿ, ಕೊಪ್ಪಳದಿಂದ ಇದೀಗ ಹುಬ್ಬಳ್ಳಿಗೆ ಬಂದಿದ್ದು, ಉತ್ತರ ಕರ್ನಾಟಕ ಪ್ರಮುಖ ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
Loading...
Unable to load recommendations.
Follow Us