
ಕೊಪ್ಪಳ, ನವೆಂಬರ್ 26: ಕುಕನೂರು ತಾಲೂಕಿನ ಶಾಲೆಯ ವಸತಿನಿಲಯದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ಪ್ರಕರಣವನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಆಯೋಗ
ಸ್ವಯಂ ಪ್ರೇರಿತ ದೂರು ದಾಖಲಿಸಕೊಂಡಿದ್ದು, ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಪತ್ರ ಬರೆದಿದ್ದಾರೆ. ಪ್ರಕರಣದ ಕುರಿತು ಮೂರು ದಿನಗಳ ಒಳಗೆ ಆಯೋಗಕ್ಕೆ ಮಾಹಿತಿ ನೀಡಲು ಸೂಚಿಸಲಾಗಿದೆ.
ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿಯೇ ವಿದ್ಯಾರ್ಥಿನಿಗೆ ಹೆರಿಗೆಯಾಗಿದ್ದು, ಬಳಿಕ ತಾಯಿ ಹಾಗೂ ನವಜಾತ ಶಿಶುವನ್ನ ಆಸ್ಪತ್ರೆಗೆ ದಾಖಲಿಸಾಗಿದೆ. ಸದ್ಯ ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಘಟನೆ ಸಂಬಂಧ ವಸತಿ ನಿಲಯದ ಸಿಬ್ಬಂದಿ ನಿರ್ಲಕ್ಷ್ಯ ಎದ್ದು ಕಾಣುತ್ತಿರುವ ಹಿನ್ನಲೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ ಎನ್ನಲಾಗಿದೆ. ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿರುವ ಬಗ್ಗೆ ಈಗಾಗಲೇ ಕುಕನೂರ ಪೊಲೀಸ್ ಠಾಣೆಯಲ್ಲಿ ಪೊಕ್ಸೋ ಕೇಸ್ ಕೂಡ ದಾಖಲಾಗಿದೆ. ಪ್ರಕರಣ ಸಂಬಂಧ ಯಲಬುರ್ಗಾ ಶಾಸಕ ಬಸವರಾಜ್ ರಾಯರೆಡ್ಡಿ ಪ್ರತಿಕ್ರಿಯಿಸಿದ್ದು, ಈಗಾಗಲೇ ವಾರ್ಡನ್ ಅವರನ್ನು ಅಮಾನತ್ತು ಮಾಡಲಾಗಿದೆ. ಘಟನೆಗೆ ಕಾರಣವಾದ ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಗುವಿಗೆ ಜನ್ಮ ನೀಡಿದ 10 ನೇ ತರಗತಿ ವಿದ್ಯಾರ್ಥಿನಿ; ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು
ಕುಕನೂರು ತಾಲೂಕಿನ ಶಾಲೆಯಲ್ಲಿ ಓದುತ್ತಿದ್ದ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ದಿಢೀರ್ ಹೊಟ್ಟೆನೋವಿನಿಂದ ನರಳಾಡಿದ್ದಾಳೆ. ಬಳಿಕ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಘಟನೆ ಇಡೀ ಜಿಲ್ಲೆಯನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಅಪ್ರಾಪ್ತೆಯು ಮಗುವಿಗೆ ಜನ್ಮ ನೀಡಿದ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ದಿ ತಕ್ಷಣವೇ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಅಲ್ಲದೇ ಕುಕನೂರು ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿದ್ದು, ಬಾಲಕಿಯ ಈ ಸ್ಥಿತಿಗೆ ಕಾರಣನಾದ ಯುವಕನನ್ನು ಬಂಧಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.