ಮಲೆನಾಡ ಮಳೆಗೆ ತುಂಬಿ ಹರಿಯುತ್ತಿರೋ ತುಂಗಭದ್ರೆ; ಇತ್ತ ಡ್ಯಾಂ ಕೆಳಭಾಗದ ಜನರಿಗೆ ನೆರೆ ಹೊಡೆತ

ಕೊಪ್ಪಳ ಜಿಲ್ಲೆಯ ಬಹುತೇಕ ಭಾಗದ ಜನರು ತೀವ್ರ ಮಳೆ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಆದ್ರೆ, ಮಲೆನಾಡಿನ ಮಳೆಗೆ ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವುದರಿಂದ ಡ್ಯಾಂ ಕೆಳಭಾಗದ ಜನರು ನೆರೆಯ ಸಂಕಷ್ಟ ಅನುಭವಿಸುವಂತಾಗಿದೆ. ಹೌದು, ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಬಿಟ್ಟಿದ್ದರಿಂದ ಡ್ಯಾಂ ಕೆಳಭಾಗದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಮಲೆನಾಡ ಮಳೆಗೆ ತುಂಬಿ ಹರಿಯುತ್ತಿರೋ ತುಂಗಭದ್ರೆ; ಇತ್ತ ಡ್ಯಾಂ ಕೆಳಭಾಗದ ಜನರಿಗೆ ನೆರೆ ಹೊಡೆತ
ಮಲೆನಾಡ ಮಳೆಗೆ ತುಂಬಿ ಹರಿಯುತ್ತಿರೋ ತುಂಗಭದ್ರೆ
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 02, 2024 | 10:36 PM

ಕೊಪ್ಪಳ, ಆ.02: ಮಲೆನಾಡಿನ ಮಳೆಗೆ ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವುದರಿಂದ ಕೊಪ್ಪಳ ಜಿಲ್ಲೆಯಲ್ಲಿ ತುಂಗಭದ್ರಾ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ನಿನ್ನೆ(ಆ.01) ಸಂಜೆಯಿಂದ ತುಂಗಭದ್ರಾ ಡ್ಯಾಂ(Tungabhadra Dam) ನಿಂದ ನದಿಗೆ 1.70 ಲಕ್ಷ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಡ್ಯಾಂ ಗೆ ಸರಿಸುಮಾರು ಎರಡು ಲಕ್ಷ ಕ್ಯೂಸೆಕ್ ನೀರಿನ ಒಳಹರಿವು ಇದೆ. 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಡ್ಯಾಂನಲ್ಲಿ ಸದ್ಯ 98 ಟಿಎಂಸಿ ನೀರನ್ನು ಸಂಗ್ರಹಿಸಿಡಲಾಗಿದೆ. ಇನ್ನು ತುಂಗಾ, ಭದ್ರಾ, ವರದಾ ನದಿಗಳಿಂದ ಅಪಾರ ಪ್ರಮಾಣದ ನೀರು ಜಲಾಶಯಕ್ಕೆ ಬಂದು ಸೇರುತ್ತಿರುವುದರಿಂದ ಹೆಚ್ಚಿನ ಪ್ರಮಾಣದ ನೀರನ್ನು ಡ್ಯಾಂನಿಂದ ನದಿಗೆ ಹರಿಸಲಾಗುತ್ತಿದೆ.

ಡ್ಯಾಂನಿಂದ ಹೆಚ್ಚಿನ ಪ್ರಮಾಣದ ನೀರು ಬಿಡುತ್ತಿರುವುದು ನದಿ ಪಾತ್ರದ ಜನರ ಸಂಕಷ್ಟ ಹೆಚ್ಚಿಸುತ್ತಿದೆ. ಹೌದು, ತುಂಗಭದ್ರಾ ನದಿಯ ಅಕ್ಕಪಕ್ಕದ ಕೃಷಿ ಜಮೀನಿನಲ್ಲಿ ರೈತರು ಭತ್ತ, ಬಾಳೆ ಸೇರಿದಂತೆ ಅನೇಕ ಬೆಳೆಗಳನ್ನು ಬೆಳೆದಿದ್ದರು. ಕೆಲ ದಿನಗಳ ಹಿಂದಷ್ಟೇ ಭತ್ತದ ನಾಟಿಯನ್ನು ಮಾಡಿದ್ದರು. ಆದ್ರೆ, ಸಾವಿರಾರು ರೂಪಾಯಿ ಖರ್ಚು ಮಾಡಿ ಮಾಡಿದ್ದ ಭತ್ತದ ನಾಟಿ, ನೀರು ಪಾಲಾಗಿದೆ.

ಇದನ್ನೂ ಓದಿ:ತುಂಗಭದ್ರಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ: ನೀರು ಹೆಚ್ಚಾದ್ರೆ ನಡುಗಡ್ಡೆಯಲ್ಲಿರುವ ಬಾಬಾಗಳಿಗೆ ಸಂಕಷ್ಟ

ಕೊಪ್ಪಳ ತಾಲೂಕಿನ ಹುಲಗಿ, ಗಂಗಾವತಿ ತಾಲೂಕಿನ ಆನೆಗೊಂದಿ, ಚಿಕ್ಕ ಜಂತಗಲ್ ಸೇರಿದಂತೆ ಅನೇಕ ಗ್ರಾಮಗಳಲ್ಲಿನ ನೂರಾರು ಹೆಕ್ಟೇರ್ ಕೃಷಿ ಜಮೀನಿನಲ್ಲಿ ಬೆಳದಿದ್ದ ಬೆಳೆ ಸಂಪೂರ್ಣವಾಗಿ ನೀರು ಪಾಲಾಗಿದೆ. ಇದು ರೈತರ ಸಂಕಷ್ಟ ಹೆಚ್ಚಿಸಿದೆ. ಜಿಲ್ಲೆಯಲ್ಲಿ ಒಂದೆಡೆ ರೈತರು ಮಳೆ ಕೊರತೆಯಿಂದ ಬೆಳೆ ಕಳೆದುಕೊಂಡಿದ್ದರೆ, ಇನ್ನೊಂದಡೆ ನದಿ ಪಾತ್ರದ ಜನರು ಇದೀಗ ನೆರೆಯಿಂದ ಬೆಳೆ ಕಳೆದುಕೊಳ್ಳುತ್ತಿದ್ದಾರೆ. ಇನ್ನು ಪ್ರವಾಹ ಪೀಡಿತ ಪ್ರದೇಶಕ್ಕೆ ಇಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಕೊಪ್ಪಳ ಜಿಲ್ಲೆಯಲ್ಲಿ ಒಂದೆಡೆ ಬರದ ಛಾಯೆ ಇದ್ರೆ, ಇನ್ನೊಂದೆಡೆ ಮಲೆನಾಡ ಮಳೆಯಿಂದ ನೆರೆಯ ಸ್ಥಿತಿ ಕೂಡ ನಿರ್ಮಾಣವಾಗಿದೆ. ಆದರೆ ಎರಡರಿಂದಲೂ ಕೂಡ ಜಿಲ್ಲೆಯ ರೈತರು ಬೆಳೆ ಕಳೆದುಕೊಳ್ಳುತ್ತಿರುವುದು ಮಾತ್ರ ದುರ್ದೈವದ ಸಂಗತಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ