ಉತ್ತರಾದಿಮಠ vs ರಾಯರಮಠ: ನವವೃಂದಾವನದಲ್ಲಿ ಇಂದು ಪದ್ಮನಾಭ ತೀರ್ಥರ ಮಧ್ಯಾರಾಧನೆ, ವಿವಾದವಿಲ್ಲದಿರುವುದೇ ವಿಶೇಷ

ಪ್ರತಿವರ್ಷ ಎರಡೂ ಮಠಗಳ ವಿವಾದದ ನಡುವೆಯೇ ಆರಾಧನೆ ನಡೆಯುತ್ತಿತ್ತು. ಈ ಬಾರಿ ಯಾವುದೇ ವಿವಾದ ಇಲ್ಲದೆ ಆರಾಧನೆ ನಡೆಯುತ್ತಿದೆ.

ಉತ್ತರಾದಿಮಠ vs ರಾಯರಮಠ: ನವವೃಂದಾವನದಲ್ಲಿ ಇಂದು ಪದ್ಮನಾಭ ತೀರ್ಥರ ಮಧ್ಯಾರಾಧನೆ, ವಿವಾದವಿಲ್ಲದಿರುವುದೇ ವಿಶೇಷ
ನವವೃಂದಾವನದಲ್ಲಿ ಪದ್ಮನಾಭ ತೀರ್ಥರ ಆರಾಧನೆ (ಸಂಗ್ರಹ ಚಿತ್ರ)
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Nov 22, 2022 | 8:18 AM

ಕೊಪ್ಪಳ: ಹಂಪಿ ಸಮೀಪದ ಆನೆಗೊಂದಿಯಲ್ಲಿ ತುಂಗಭದ್ರಾ ನದಿ ಮಧ್ಯದ ಸುಂದರ ದ್ವೀಪದಲ್ಲಿರುವ ನವವೃಂದಾವನ ನಡುಗಡ್ಡೆಯಲ್ಲಿ ಆಚಾರ್ಯ ಮಧ್ವರ ನೇರ ಶಿಷ್ಯರಾದ ಪದ್ಮನಾಭ ತೀರ್ಥರ ಮಧ್ಯಾರಾಧನೆ ಮಂಗಳವಾರ (ನ 22) ನಡೆಯಲಿದೆ. ನವವೃಂದಾವನದಲ್ಲಿ ನಿನ್ನೆ ಪೂರ್ವಾರಾಧನೆ ನಡೆದಿತ್ತು. ಪದ್ಮನಾಭ ತೀರ್ಥರ ಆರಾಧನೆಯಂದು ಯಾರು ಪೂಜೆ ಸಲ್ಲಿಸಬೇಕು ಎಂಬ ಬಗ್ಗೆ ಮಾಧ್ವ ಪರಂಪರೆಯ ಎರಡು ಪ್ರಮುಖ ಮಠಗಳ ಉತ್ತರಾದಿ ಮಠ ಹಾಗೂ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠಗಳ ನಡುವೆ ಸುದೀರ್ಘ ವಿವಾದವಿದೆ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಎರಡೂ ಮಠಗಳಿಗೆ ತಲಾ ಒಂದೂವರೆ ದಿನಗಳ ಅವಧಿಗೆ ಆರಾಧನೆ ನಡೆಸುವ ಅವಕಾಶವನ್ನು ನ್ಯಾಯಾಲಯ ನೀಡಿದೆ.

ಮಂತ್ರಾಲಯ ರಾಘವೇಂದ್ರ ಮಠದ ಸುಬುಧೇಂದ್ರ ತೀರ್ಥರು ಪದ್ಮನಾಭ ತೀರ್ಥರ ವೃಂದಾವನಕ್ಕೆ ಮಧ್ಯಾರಾಧನೆಯ ಪೂಜೆ ಸಲ್ಲಿಸಲಿದ್ದಾರೆ. ಪ್ರತಿವರ್ಷ ಎರಡೂ ಮಠಗಳ ವಿವಾದದ ನಡುವೆಯೇ ಆರಾಧನೆ ನಡೆಯುತ್ತಿತ್ತು. ಈ ಬಾರಿ ಯಾವುದೇ ವಿವಾದ ಇಲ್ಲದೆ ಆರಾಧನೆ ನಡೆಯುತ್ತಿದೆ. ಮೊದಲ ಒಂದೂವರೆ ದಿನ ರಾಯರ ಮಠಕ್ಕೆ, ಇನ್ನುಳಿದ ಒಂದೂವರೆ ದಿನ ಉತ್ತರಾದಿ ಮಠಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ರಾಯರ ಮಠದ ಪೂಜೆಯ ಅವಧಿ ಮುಕ್ತಾಯವಾಗಲಿದೆ.

ಜಯತೀರ್ಥರ ಆರಾಧನೆ ವಿವಾದ

ಆನೆಗೊಂದಿಯಲ್ಲಿರುವ ನವವೃಂದಾವನ ಗಡ್ಡೆಯಲ್ಲಿ ಕಳೆದ ಜುಲೈ ತಿಂಗಳಲ್ಲಿಯೂ ರಾಯರಮಠ ಹಾಗೂ ಉತ್ತರಾದಿಮಠಗಳ ನಡುವಣ ವಿವಾದ ತಾರರಕ್ಕೇರಿತ್ತು. ಎರಡೂ ಮಠಗಳ ನಡುವೆ ಸಮನ್ವಯ ಮೂಡಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತವು ನಿಷೇಧಾಜ್ಞೆ ಜಾರಿ ಮಾಡಿತ್ತು. ಇದನ್ನು ಕರ್ನಾಟಕ ಹೈಕೋರ್ಟ್​ನ ಧಾರವಾಡ ಪೀಠದಲ್ಲಿ ರಾಯರ ಮಠವು ಪ್ರಶ್ನಿಸಿತ್ತು. ಹೈಕೋರ್ಟ್​ ಈ ಅರ್ಜಿಯನ್ನು ವಜಾ ಮಾಡಿತ್ತು.

ಒಂದೇ ವೃಂದಾವನವನ್ನು ಉತ್ತರಾದಿ ಮಠದವರು ರಘುವರ್ಯ ತೀರ್ಥರು ಎಂದು, ರಾಯರ ಮಠದವರು ಜಯತೀರ್ಥರು ಎಂದು ಪ್ರತಿಪಾದಿಸುತ್ತಿದ್ದರು. ಜಯತೀರ್ಥರ ಆರಾಧನೆ ಮಾಡೋದಾಗಿ ರಾಯರ ಮಠ ವಾದ ಮಾಡಿದರೇ, ರಘುವರ್ಯತೀರ್ಥರ ಆರಾಧನೆಗೆ ಉತ್ತರಾದಿ ಮಠ ಪಟ್ಟು ಹಿಡದಿತ್ತು. ಆರಾಧನೆಗೆ ಅವಕಾಶ ನೀಡಬೇಕು ಎಂದು ಎರಡೂ ಮಠಗಳ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಸಂಬಂಧ ಉಪವಿಭಾಗಾಧಿಕಾರಿ ನೇತೃತ್ವದ ಸಭೆಯಲ್ಲಿ ಎರಡೂ ಮಠಗಳ ಪ್ರತಿನಿಧಿಗಳು ಒಮ್ಮತಕ್ಕೆ ಬರಲಿಲ್ಲ. ಹೀಗಾಗಿ ಜಿಲ್ಲಾಡಳಿತವು ನವಬೃಂದಾವನ ಗಡ್ಡೆಯಲ್ಲಿ ಆರಾಧನೆಗೆ ನಿರ್ಬಂಧ ವಿಧಿಸುವ ತೀರ್ಮಾನ ತೆಗೆದುಕೊಂಡಿತು.

ಜುಲೈ 13 ರಿಂದ 21 ರ ವರೆಗೂ 144 ಸೆಕ್ಷನ್ ಜಾರಿ ಮಾಡಿ ತಹಶೀಲ್ದಾರ್ ಆದೇಶ ಹೊರಡಿಸಿದ್ದರು. ಈ ಸಂಬಂಧ ರಾಯರ ಮಠ 144 ಸೆಕ್ಷನ್ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದು, ಜಯತೀರ್ಥರ ಆರಾಧನೆಗೆ ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡಿತ್ತು. ಆದರೆ ಹೈಕೋರ್ಟ್​​ ಜಿಲ್ಲಾಡಳಿತದ ನಿರ್ಧಾರವನ್ನು ಎತ್ತಿ ಹಿಡಿಯುವ ಮೂಲಕ ರಾಯರ ಮಠದ ಅರ್ಜಿಯನ್ನು ವಜಾಗೊಳಿಸಿತ್ತು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada