ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣ; ಪ್ರಕರಣದಲ್ಲಿ ನಾವು ಭಾಗಿಯಾದ್ದರೆ ನಮ್ಮ ಕುಟುಂಬವೇ ನಾಶವಾಗಲಿ ಎಂದು ಬರೆದುಕೊಂಡ ಹನುಮೇಶ್ ನಾಯಕ್‌ ಕುಟುಂಬ

ಹನುಮೇಶ್ ನಾಯಕ್ ಸಹೋದರ ರಮೇಶ್ ನಾಯಕ್ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹರಿಬಿಟ್ಟಿದ್ದು‌, ನಮ್ಮ ಕುಟುಂಬ ಮಾಡದ ತಪ್ಪನ್ನು ನಮ್ಮ ಮೇಲೆ ಹೋರಿಸಿದ್ದಾರೆ, ಈಗಲೂ ಜನ ನಮಗೆ ತೊಂದರೆ ಕೊಡುತ್ತಿದ್ದಾರೆ, ಅವರಿಗೆ ಒಳ್ಳೆಯದಾಗಲಿ, ತಿಮ್ಮಪ್ಪ ಅವರಿಗೆ ಬುದ್ಧಿ ಕೊಡಲಿ ಎಂದು ಬರೆದುಕೊಂಡಿದ್ದಾರೆ.

ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣ; ಪ್ರಕರಣದಲ್ಲಿ ನಾವು ಭಾಗಿಯಾದ್ದರೆ ನಮ್ಮ ಕುಟುಂಬವೇ ನಾಶವಾಗಲಿ ಎಂದು ಬರೆದುಕೊಂಡ ಹನುಮೇಶ್ ನಾಯಕ್‌ ಕುಟುಂಬ
ತಿರುಪತಿಯ ದರ್ಶನ ಪಡೆದ ಹನುಮೇಶ್ ನಾಯಕ್‌ ಕುಟುಂಬ
Follow us
TV9 Web
| Updated By: guruganesh bhat

Updated on: Jul 30, 2021 | 9:53 PM

ಕೊಪ್ಪಳ: ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣ ಮುಗಿದುಹೋಗಿತ್ತು. ಕೊಲೆ ಮಾಡಿದ ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದರು. ಇತ್ತ ಮಗಳನ್ನು ಕಳೆದುಕೊಂಡ ತಾಯಿ, ಪ್ರಕರಣಕ್ಕೆ ಸಂಬಂಧಿಸಿ ಹೋರಾಟ ಮಾಡಿದ ಹೋರಾಟಗಾರರೆಲ್ಲ ಸೈಲೆಂಟ್ ಆಗಿದ್ದರು. ಸದ್ಯ ಯಲ್ಲಾಲಿಂಗನ ಕೊಲೆ ಕೇಸ್ ನ್ಯಾಯಾಲಯದಲ್ಲಿದೆ. ಆದರೆ ಒಂದು ಮದುವೆ ಆ ಕೇಸ್ ಮುನ್ನೆಲೆಗೆ ಬರುವಂತೆ ಮಾಡಿದೆ,ಅಲ್ಲದೆ ಇದೀಗ ಆ ಕೇಸ್ ತಿರುಪತಿ ಮುಟ್ಟಿದೆ. ಅರೇ, ಇದೇನಿದು ಮದುವೆ, ತಿರುಪತಿ ಎಂದಿರಾ? ಈ ಸುದ್ದಿ ಓದಿ.

ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಕನಕಾಪೂರ ನಿವಾಸಿ ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಕಳೆದ 2015 ಜನವರಿ 11 ರಲ್ಲಿ ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆಯಾಗಿತ್ತು.ಕೊಪ್ಪಳ ರೇಲು ನಿಲ್ದಾಣದ ಬಳಿ ವಿದ್ಯಾರ್ಥಿ ಯಲ್ಲಾಲಿಂಗ ಕೊಲೆಯಾಗಿದ್ದ. ಮೊದಲು ಇದೊಂದು ಅಸಹಜ ಸಾವು ಇರಬಹುದು ಅಂದುಕೊಂಡ ಜಿಲ್ಲೆಯ ಜನರ ಕೆಲ ದಿನಗಳ ಬಳಿಕ ಶಾಕ್ ಆಗಿದ್ದರು. ಇದೊಂದು ಅಸಹಜ ಸಾವು ಅಲ್ಲ ಬದಲಾಗಿ ಇದೊಂದು ಕೊಲೆ ಎಂದು ಬಯಲಾಗಿತ್ತು.

ಅಂದಿನ ಸಚಿವ ಶಿವರಾಜ್ ತಂಗಡಗಿ ಆಪ್ತ ಹನುಮೇಶ್ ನಾಯಕ್ ಸೇರಿ 9 ಜನರ ಮೇಲೆ ವಿದ್ಯಾರ್ಥಿ ಯಲ್ಲಾಲಿಂಗನನ್ನು ಕೊಲೆ ಮಾಡಿದ ಆರೋಪ ಕೇಳಿ ಬಂದಿತ್ತು. 9 ಜನರನ್ನು ಬಂಧಿಸಲಾಗಿತ್ತು. ಖಾಸಗಿ ವಾಹಿನಿಗೆ ಗ್ರಾಮದ ಸಮಸ್ಯೆ ಹೇಳಿದ್ದಕ್ಕೆ ವಿದ್ಯಾರ್ಥಿ ಯಲ್ಲಾಲಿಂಗನ ಹತ್ಯೆಯಾಗಿದೆ ಎಂಬುದು ಪೊಲೀಸರ ತನಿಖೆ ವೇಳೆ ಬಯಲಾಗಿತ್ತು. ಮೊದಲು ಪೊಲೀಸರು ಹನುಮೇಶ್ ನಾಯಕ್ ಮಗ ಸೇರಿ ಕೊಲೆ ಪ್ರಕರಣದಲ್ಲಿ ಭಾಗಿಯಾದ 8 ಜನರನ್ನು ಬಂಧಿಸಿದ್ದರು. ಹನುಮೇಶ್ ನಾಯಕ್ ಬಂಧಿಸಲ್ಪಟ್ಟಿರಲಿಲ್ಲ ಜಿಲ್ಲೆಯಲ್ಲಿ ಯಲ್ಲಾಲಿಂಗ ಕೊಲೆ ಖಂಡಿಸಿ ಜನ ಬೀದಿಗಿಳಿದು ಹೋರಾಟ ಮಾಡಿದ್ದರು.ಕೊನೆಗೆ ಅಂದಿನ ವಿರೋಧ ಪಕ್ಷದ ನಾಯಕ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಘಟಾನುಘಟಿ ನಾಯಕರು ಜಿಲ್ಲೆಯಲ್ಲಿ ಹನುಮೇಶ್ ನಾಯಕ್ ಬಂಧನಕ್ಕೆ ಆಗ್ರಹಿಸಿ ಹೋರಾಟ ಮಾಡಿದ್ದರು.ಕೊನೆಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಲೆ ಕೇಸ್​ನ್ನು CID ಗೆ ವರ್ಗಾವಣೆ ಮಾಡಿದ್ದರು. ವರ್ಗಾವಣೆ ಮಾಡಿದ ಬಳಿಕ ಹನುಮೇಶ್ ನಾಯಕ್ ಬಂಧನವಾಗಿತ್ತು. ಅಲ್ಲದೇ ಶಿವರಾಜ್ ತಂಗಡಗಿ ಸಚಿವ ಸ್ಥಾನ ಕಳೆದುಕೊಂಡಿದ್ದರು. ಇದಾದ ಬಳಿಕ ಪ್ರಕರಣ ಒಂದು ಹಂತಕ್ಕೆ ಮುಚ್ಚಿ ಹೋಗಿತ್ತು. ಜೈಲಿನಲ್ಲಿರಬೇಕಾದ ಹನುಮೇಶ್ ನಾಯಕ್ ಆಸ್ಪತ್ರೆ ಸೇರಿ ಸಾಕ್ಷಿ ಡೀಲ್ ಮಾಡುತ್ತಿರುವುದನ್ನು ಟಿವಿ9 ಕನ್ನಡ ರಹಸ್ಯ ಕಾರ್ಯಾಚರಣೆ ಮೂಲಕ ಪ್ರಕರಣ ಬಯಲಿಗೆಳೆದಿತ್ತು. ಆಸ್ಪತ್ರೆಯಲ್ಲಿ ಕೂತು ಪ್ರಕರಣದ ಸಾಕ್ಷಿಗಳನ್ನು ಬೆದರಿಕೆ ಹಾಕಿ, ಹಣದ ಆಸೆ ತೋರಿಸಿ ಡೀಲ್ ಮಾಡಲಾಗುತ್ತಿತ್ತು. ಸ್ವತಃ ಯಲ್ಲಾಲಿಂಗನ ತಾಯಿ ಕೆಂಚಮ್ಮ ಕೂಡಾ ಇಲ್ಲಿ ಡೀಲ್ ಆಗಿದ್ದರು ಎಂಬ ಮಾಹಿತಿಯಿತ್ತು. ಹೀಗಾಗಿ ಬಹುತೇಕ ಕೇಸ್ ಮುಚ್ಚಿ ಹೋಯಿತು ಎನ್ನಲಾಗಿತ್ತು. ಕೊನೆಗೆ ಆರೋಪಿಗಳು ಜಾಮೀನು ಪಡೆದುಕೊಂಡು ಹೊರಬಂದಿದ್ದರು.

ಮದುವೆಯಿಂದ ಮುನ್ನಲೆಗೆ ಬಂದ ಯಲ್ಲಾಲಿಂಗ ಕೊಲೆ ಪ್ರಕರಣ ಜುಲೈ 18 ರಂದು ಯಲ್ಲಾಲಿಂಗ ಕೊಲೆ ಪ್ರಕರಣದ ಆರೋಪಿಯಾದ ಹನುಮೇಶ್ ನಾಯಕ್ ಮಗ ಮಹಾಂತೇಶ್ ನಾಯಕ್ ಮದುವೆಯಾಗುತ್ತದೆ. ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಹುಲಿ ಹೈದರ್ ಗ್ರಾಮದಲ್ಲಿ ಮಹಾಂತೇಶ್ ನಾಯಕ್‌ ಮದುವೆ ಇತ್ತು. ಮಹಾಂತೇಶ್ ನಾಯಕ್ ಯಲ್ಲಾಲಿಂಗ ಕೊಲೆ ಪ್ರಕರಣದ ಆರೋಪಿ‌ ನಂಬರ್ 3, ಈ ಪ್ರಕರಣದಕ್ಕೆ ಕೊಪ್ಪಳ ಜಿಲ್ಲೆ ಗಂಗಾವತಿಯ DYSP ರುದ್ರೇಶ್ ಉಜ್ಜನಕೊಪ್ಪ, ಗಂಗಾವತಿ ಗ್ರಾಮೀಣ ಠಾಣೆ CPI ಉದಯರವಿ,ಕನಕಗಿರಿ PSI ತಾರಾಬಾಯಿ ಮದುವೆಗೆ ಹೋಗಿದ್ದರು. ಕೊಲೆ ಪ್ರಕರಣದ ಆರೋಪಿ ಪ್ರಕರಣದಲ್ಲಿ ಪೋಲಿಸರು ಭಾಗಿಯಾಗಿದ್ದಕ್ಕೆ ಜಿಲ್ಲೆಯ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಅದು ಪೊಲೀಸ್ ಸಮವಸ್ತ್ರದಲ್ಲಿ ಮೂವರು ಅಧಿಕಾರಿಗಳು ಹೋಗಿ ಹೂವಿನ ಹಾರ ಹಾಕಿಸಿಕೊಂಡು‌ ಫೋಟೊ ತೆಗೆಸಿಕೊಂಡಿದ್ದರು. ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಅಧಿಕಾರಗಳು ಮೂವರನ್ನು ಕಡ್ಡಾಯ ರಜೆಯಲ್ಲಿ ಕಳಿಸಿದ್ದರು. ಸದ್ಯ ಇದೀಗ ಮೂವರು ಅಧಿಕಾರಿಗಳ ವಾಪಸ್ ಬಂದು ಕೆಲಸಕ್ಕೆ ಹಾಜರಾಗಿದ್ದಾರೆ‌. ಕಡ್ಢಾಯ ರಜೆ ಮೇಲೆ ಹೋದ ಅಧಿಕಾರಿಗಳು ಅದೇ ಪೊಲೀಸ್ ಠಾಣೆಗೆ ಬಂದು ಕರ್ತವ್ಯಕ್ಕೆ ಹಾಜರಾಗಿದ್ದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.ರಾ ಜಕಾರಣಿಗಳ ಬೆಂಬಲದಿಂದ ಮತ್ತೆ ಅದೇ ಠಾಣೆಗೆ ಬಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮದುವೆಗೆ ಬಂದು ಪೊಲೀಸರಿಗೆ ಶಿಕ್ಷೆಯಾಗುತ್ತಲೇ ಹನುಮೇಶ್ ನಾಯಕ್ ಕುಟುಂಬಕ್ಕೆ ಇದು ಆಘಾತ ತಂದಿತ್ತು. ಅಲ್ಲದೇ ಹನುಮೇಶ್ ನಾಯಕ್‌ ಕುಟುಂಬದ ಮಾನಸಿಕ ನೆಮ್ಮದಿಯನ್ನೂ ಹಾಳು ಮಾಡಿತ್ತು.

ಮನಃಶಾಂತಿಗಾಗಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಹನುಮೇಶ್ ನಾಯಕ್‌ ಕುಟುಂಬ ಮದುವೆ‌ಯಿಂದ ಯಲ್ಲಾಲಿಂಗ ಕೊಲೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದ ಕಾರಣ ಹನುಮೇಶ್ ನಾಯಕ್ ಕುಟುಂಬ ಸಹಜವಾಗಿ ಮಾನಸಿಕ ತೊಂದರೆ ಅನುಭವಿಸಿದ್ದರು. ಮದುವೆಗೆ ಹೋಗಿದ್ದಕ್ಕೆ ನಮಗೆ ಶಿಕ್ಷೆಯಾಯ್ತು ಎಂದು ಪೊಲೀಸರು ಮಾತಾನಾಡಿದ್ದು ಹನುಮೇಶ್ ನಾಯಕ್ ಮನಸ್ಸಿಗೆ ಕಿರಿಕಿರಿ ಉಂಟು ಮಾಡಿತ್ತು. ಇದರಿಂದ ಹನುಮೇಶ್ ನಾಯಕ್ ದೇವರ ದರ್ಶನ ಮಾಡಲು ಹೊರಟಿದ್ದರು. ತಪ್ಪಿನ ಪ್ರಾಯಶ್ಚಿತ್ತಕ್ಕೋ, ತಪ್ಪಿನ ಅರಿವಿಗೋ, ಅಥವಾ ಮದುವೆಯಿಂದ ಪೊಲೀಸರಿಗೆ ಶಿಕ್ಷೆಯಾಯ್ತೋ ಎಂಬ ಕಾರಣಕ್ಕೋ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಿದ್ದಾರೆ. ಮಾಜಿ ಸಚಿವ ಶಿವರಾಜ್ ತಂಗಡಗಿ ಆಪ್ತ ಹನುಮೇಶ್ ನಾಯಕ್ ಸಹೋದರ ರಮೇಶ್ ನಾಯಕ್ ಹಾಗೂ ಅಳಿಯ‌ ಮಾರುತಿ ತೋಟಗಂಟಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಅಲ್ಲಿಂದಲೇ ಸಂದೇಶವೊಂದನ್ನು ರವಾನಿಸಿದ್ದರು.

ನಾವು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರೆ ನಮ್ಮ ಕುಟುಂಬ ಸರ್ವನಾಶವಾಗಲಿ ಎಂದು ಹನುಮೇಶ್ ನಾಯಕ್ ಕುಟುಂಬ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದೆ. ಹನುಮೇಶ್ ನಾಯಕ್ ಸಹೋದರ ರಮೇಶ್ ನಾಯಕ್ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹರಿಬಿಟ್ಟಿದ್ದು‌, ನಮ್ಮ ಕುಟುಂಬ ಮಾಡದ ತಪ್ಪನ್ನು ನಮ್ಮ ಮೇಲೆ ಹೋರಿಸಿದ್ದಾರೆ, ಈಗಲೂ ಜನ ನಮಗೆ ತೊಂದರೆ ಕೊಡುತ್ತಿದ್ದಾರೆ, ಅವರಿಗೆ ಒಳ್ಳೆಯದಾಗಲಿ, ತಿಮ್ಮಪ್ಪ ಅವರಿಗೆ ಬುದ್ಧಿ ಕೊಡಲಿ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ಈ ಪ್ರಕರಣದಲ್ಲಿ ನಮ್ಮ ಅಣ್ಣ ಅಥವಾ ಅಣ್ಣನ ಮಗ ಭಾಗಿಯಾಗಿದ್ದರೆ ನಮ್ಮ ಕುಟುಂಬ ಸರ್ವನಾಶವಾಗಲಿ ಎಂದು ಬರೆದುಕೊಂಡಿದ್ದು, ಇದೀಗ ಸಾಕಷ್ಟು ಕುತೂಹಲ ಮೂಡಿಸಿದೆ.

ಹನುಮೇಶ್ ನಾಯಕ್ ಸಹೋದರ ರಮೇಶ್ ನಾಯಕ್ ಟಿವಿ9 ಕನ್ನಡ ಡಿಜಿಟಲ್​ಗೆ ಪ್ರತಿಕ್ರಿಯಿಸಿ, ‘ನಾವು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬಂದಿದ್ದೇವೆ. ನಮಗೂ ಯಲ್ಲಾಲಿಂಗನ ಕೊಲೆಗೆ ಸಂಬಂಧವಿಲ್ಲ. ನಮಗೆ ಕಿರಿಕಿರಿ ಮಾಡುವವರಿಗೆ ಒಳ್ಳೆಯ ಬುದ್ದಿ ಕೊಡಲಿ’ ಎಂದು ತಿರುಪತಿ ತಿಮ್ಮಪ್ಪನಲ್ಲಿ ಕೇಳಿಕೊಂಡಿದ್ದೇವೆ’ ಎಂದು ತಿಳಿಸಿದ್ದಾರೆ.

ವಿಶೇಷ ವರದಿ – ಶಿವಕುಮಾರ್ ಪತ್ತಾರ

ಇದನ್ನೂ ಓದಿ: ಯಲ್ಲಾಲಿಂಗ ಕೊಲೆ ಪ್ರಕರಣದ ಆರೋಪಿ ಮದುವೆಯಲ್ಲಿ ಪೊಲೀಸರು ಭಾಗಿ

ಕೊಲೆ ಆರೋಪಿಯ ಮದುವೆಯಲ್ಲಿ ಭಾಗಿ; ಕೊಪ್ಪಳದ ಮೂವರು ಪೊಲೀಸ್ ಅಧಿಕಾರಿಗಳಿಗೆ ಕಡ್ಡಾಯ ರಜೆ ಶಿಕ್ಷೆ

(Yallaling murder case Hanumesh Nayak family wrote that if they involved in the case their family would be destroyed in social media)