ಕೊಲೆ ಆರೋಪಿಯ ಮದುವೆಯಲ್ಲಿ ಭಾಗಿ; ಕೊಪ್ಪಳದ ಮೂವರು ಪೊಲೀಸ್ ಅಧಿಕಾರಿಗಳಿಗೆ ಕಡ್ಡಾಯ ರಜೆ ಶಿಕ್ಷೆ

2 ದಿನದ ಹಿಂದೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಆರೋಪಿ ಮಹಾಂತೇಶ್ ನಾಯಕ್ ವಿವಾಹ ಜರುಗಿದ್ದು, ಈ ಮದುವೆಯಲ್ಲಿ ಪೊಲೀಸ್ ಸಿಬ್ಬಂದಿಗಳು ಭಾಗಿಯಾಗಿದ್ದ ಬಗ್ಗೆ ಟಿವಿ9 ವರದಿ ಮಾಡಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಎಚ್ಛೇತ್ತುಕೊಂಡ ಅಧಿಕಾರಿಗಳು ಮೂವರಿಗೆ ಕಡ್ಡಾಯ ರಜೆ ಶಿಕ್ಷೆ ನೀಡಿದ್ದಾರೆ.

ಕೊಲೆ ಆರೋಪಿಯ ಮದುವೆಯಲ್ಲಿ ಭಾಗಿ; ಕೊಪ್ಪಳದ ಮೂವರು ಪೊಲೀಸ್ ಅಧಿಕಾರಿಗಳಿಗೆ ಕಡ್ಡಾಯ ರಜೆ ಶಿಕ್ಷೆ
ಯಲ್ಲಾಲಿಂಗ ಕೊಲೆ ಆರೋಪಿ ಮಹಾಂತೇಶ್ ನಾಯಕ ಮದುವೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರು

ಕೊಪ್ಪಳ: ಕೊಲೆ ಆರೋಪಿಯ ಮದುವೆಯಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳಿಗೆ ಕಡ್ಡಾಯ ರಜೆ ಶಿಕ್ಷೆ ನೀಡಲಾಗಿದೆ. ಕೊಪ್ಪಳ ಜಿಲ್ಲೆ ಗಂಗಾವತಿಯ ಡಿವೈಎಸ್​ಪಿ ರುದ್ರೇಶ್ ಉಜ್ಜನಕೊಪ್ಪ,ಗಂಗಾವತಿಯ ಸಿಪಿಐ ಉದಯರವಿ, ಕನಕಗಿರಿಯ ಪಿಎಸ್​ಐ ತಾರಾಬಾಯಿಗೆ ಕಡ್ಡಾಯ ರಜೆ ಶಿಕ್ಷೆ ನೀಡಿ ಎಸ್‌ಪಿ ಟಿ.ಶ್ರೀಧರ್ ಆದೇಶ ಹೊರಡಿಸಿದ್ದಾರೆ.

2015ರ ಜನವರಿ 11 ರಂದು ಯಲ್ಲಾಲಿಂಗನ ಹತ್ಯೆ ಪ್ರಕರಣದಲ್ಲಿ 9 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಸದ್ಯ ಜಾಮೀನಿನ ಮೇಲೆ ಆರೋಪಿಗಳು ಹೊರಬಂದಿದ್ದಾರೆ. 2 ದಿನದ ಹಿಂದೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಆರೋಪಿ ಮಹಾಂತೇಶ್ ನಾಯಕ್ ವಿವಾಹ ಜರುಗಿದ್ದು, ಈ ಮದುವೆಯಲ್ಲಿ ಪೊಲೀಸ್ ಸಿಬ್ಬಂದಿಗಳು ಭಾಗಿಯಾಗಿದ್ದ ಬಗ್ಗೆ ಟಿವಿ9 ವರದಿ ಮಾಡಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಎಚ್ಛೇತ್ತುಕೊಂಡ ಅಧಿಕಾರಿಗಳು ಮೂವರಿಗೆ ಕಡ್ಡಾಯ ರಜೆ ಶಿಕ್ಷೆ ನೀಡಿದ್ದಾರೆ.

ಏನಿದು ಯಲ್ಲಾಲಿಂಗ ಪ್ರಕರಣ‌?
ಜನವರಿ 11, 2015ರಲ್ಲಿ ಕೊಪ್ಪಳ ರೈಲು ನಿಲ್ದಾಣದಲ್ಲಿ ವಿದ್ಯಾರ್ಥಿಯೊಬ್ಬನ ಶವ ಪತ್ತೆಯಾಗಿತ್ತು. ಮೊದಲು ಸಾಮಾನ್ಯವಾಗಿ ಯಾರೋ ಹುಡುಗ ರೇಲ್ವೆ ಹಳಿಗೆ ಬಿದ್ದು ಸಾವನ್ನಪ್ಪಿರಬಹುದು ಎಂದು ಪೊಲೀಸರು ಅನುಮಾನಿಸಿದ್ದರು. ನಂತರದ ದಿನಗಳಲ್ಲಿ ಇದು ಆತ್ಮಹತ್ಯೆಯಲ್ಲ, ಕೊಲೆ ಎಂಬ ಅನುಮಾನಗಳು ದಟ್ಟವಾಗಿದ್ದವು. ಇದೊಂದು ವ್ಯವಸ್ಥಿತ ಕೊಲೆ ಎನ್ನುವುದು ಬೆಳಕಿಗೆ ಬಂದ ನಂತರ ಪ್ರಕರಣದ ತನಿಖೆಯ ಹೊಣೆ ಗದಗ ರೈಲ್ವೆ ಪೊಲೀಸ್ ಠಾಣೆಯಿಂದ ಕೊಪ್ಪಳ ನಗರ ಠಾಣೆಗೆ ವರ್ಗಾವಣೆಯಾಯಿತು. ಯಲ್ಲಾಲಿಂಗನ ಮನೆಯವರೂ ಇದು ‌ಕೊಲೆ ಎಂದು ಅನುಮಾನಿಸಿದ್ದರು. ಕೊಲೆ ಪ್ರಕರಣದ ತನಿಖೆ ಚುರುಕಾದಂತೆ ಹಲವು ವಿಚಾರಗಳು ಬಯಲಾದವು.

ಯಲ್ಲಾಲಿಂಗ ಯಾರು?
ಕೊಪ್ಪಳ ಜಿಲ್ಲೆ ಕನಕಗಿರಿ ತಾಲ್ಲೂಕಿನ ಕನಕಾಪೂರ ನಿವಾಸಿ. ತಮ್ಮ ಗ್ರಾಮದ ಸಮಸ್ಯೆಯನ್ನು ಖಾಸಗಿ ವಾಹಿನಿ ಮುಂದೆ ಹೇಳಿದ್ದಕ್ಕೆ ಯಲ್ಲಾಲಿಂಗನ ಹತ್ಯೆ ಮಾಡಲಾಗಿತ್ತು. ಮಾಜಿ ಸಚಿವ ಶಿವರಾಜ್ ತಂಗಡಗಿ ಆಪ್ತ ಹನುಮೇಶ್ ನಾಯಕ ಮತ್ತು ಅವರ ಮಗ ಮಹಾಂತೇಶ ನಾಯಕ ಸೇರಿ 9 ಜನರ ಮೇಲೆ ಕೊಲೆ ಆರೋಪ ಕೇಳಿಬಂತು. ಕೊಪ್ಪಳ ರೈಲು ನಿಲ್ದಾಣದಲ್ಲಿ ಯಲ್ಲಾಲಿಂಗನ ಪ್ರಾಣ ಹೋಗಿತ್ತು. ಆ ಸಮಯದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರು ಶಿವರಾಜ್ ತಂಗಡಗಿ. ಜಿಲ್ಲೆಯಲ್ಲಿ ಹಲವು ಪ್ರತಿಭಟನೆಗಳಿಗೂ ಈ ಕೊಲೆ ಪ್ರಕರಣ ಕಾರಣವಾಗಿತ್ತು.

ಹನುಮೇಶ್ ನಾಯಕ ಬಂಧನಕ್ಕೆ ಆಗ್ರಹಿಸಿ ಬಿಜೆಪಿ‌ ನಾಯಕರು ಜಿಲ್ಲೆಗೆ ಬಂದಿದ್ದರು. ಅಂದಿನ ವಿರೋಧ ಪಕ್ಷದ ನಾಯಕ ಮತ್ತು ಇದೀಗ ಮುಖ್ಯಮಂತ್ರಿಯಾಗಿರುವ ಬಿ.ಎಸ್.ಯಡಿಯೂರಪ್ಪ ಕೊಪ್ಪಳ ಜಿಲ್ಲೆಗೆ ಬಂದು ಹನುಮೇಶ್ ನಾಯಕನ ಬಂಧನಕ್ಕೆ ಮತ್ತು ಶಿವರಾಜ್ ತಂಗಡಗಿ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ಮಾಡಿದ್ದರು. ಕೊನೆಗೆ ಸಿದ್ದರಾಮಯ್ಯ ಸರ್ಕಾರ ಯಲ್ಲಾಲಿಂಗ ಕೊಲೆ ಪ್ರಕರಣದ ತನಿಖೆಯ ಹೊಣೆಯನ್ನು ಸಿಬಿಐಗೆ ಒಪ್ಪಿಸಿತ್ತು. ಶಿವರಾಜ ತಂಗಡಗಿ ರಾಜೀನಾಮೆ ಕೊಡಬೇಕಾಯ್ತು. ಹನುಮೇಶ್ ನಾಯಕ ಸೇರಿ 9 ಜನ ಈ ಪ್ರಕರಣದಲ್ಲಿ ಜೈಲು ಸೇರಿದ್ದರು. ಆದರೆ ಅನಾರೋಗ್ಯದ ನೆಪದಲ್ಲಿ ಹನುಮೇಶ ನಾಯಕ ಜೈಲಿಗಿಂತ ಹೆಚ್ಚಾಗಿ ಆಸ್ಪತ್ರೆಯಲ್ಲಿಯೇ ಕಾಲ ಕಳೆದ.

ಇದನ್ನೂ ಓದಿ:
ಕೊವಿಡ್ ನಿಯಂತ್ರಣದ ಬಗ್ಗೆ ನಿರ್ಲಕ್ಷ್ಯ; ವಿಜಯಪುರ ಡಿಹೆಚ್​ಒಗೆ ಕಡ್ಡಾಯ ರಜೆಯ ಶಿಕ್ಷೆ ನೀಡಿದ ಸರ್ಕಾರ

ಯಲ್ಲಾಲಿಂಗ ಕೊಲೆ ಪ್ರಕರಣದ ಆರೋಪಿ ಮದುವೆಯಲ್ಲಿ ಪೊಲೀಸರು ಭಾಗಿ