ಹಾಸನ ಕಾಂಗ್ರೆಸ್ ಕಾರ್ಯಕ್ರಮದ ದಿಕ್ಕೇ ಬದಲು: ಸ್ವಾಭಿಮಾನಿ ಅಲ್ಲ ಜನಕಲ್ಯಾಣ ಸಮಾವೇಶ ಎಂದ ಡಿಕೆ ಶಿವಕುಮಾರ್

| Updated By: Ganapathi Sharma

Updated on: Dec 03, 2024 | 10:01 AM

ಕರ್ನಾಟಕ ಕಾಂಗ್ರೆಸ್​ನಲ್ಲೂ ಶಿತಲ ಸಮರ ಶುರುವಾಗಿದೆ. ‘ಸಿದ್ದರಾಮೋತ್ಸವ 2.0’ ಎಂದೇ ಆರಂಭವಾಗಿದ್ದ ಹಾಸನ ಸಮಾವೇಶದ ದಿಕ್ಕು ಬದಲಾಗಿದೆ. ಇಡೀ ಕಾರ್ಯಕ್ರಮವನ್ನು ಡಿಸಿಎಂ ಡಿಕೆ ಶಿವಕುಮಾರ್ ಓವರ್ ಟೇಕ್ ಮಾಡಿದ್ದಾರೆ! ಸ್ವಾಭಿಮಾನಿ ಸಮಾವೇಶ ಅಲ್ಲ, ಜನಕಲ್ಯಾಣ ಸಮಾವೇಶ ಎಂದು ಕೆಪಿಸಿಸಿ ಅಧ್ಯಕ್ಷರು ಘೋಷಣೆ ಮಾಡಿದ್ದಾರೆ.

ಹಾಸನ ಕಾಂಗ್ರೆಸ್ ಕಾರ್ಯಕ್ರಮದ ದಿಕ್ಕೇ ಬದಲು: ಸ್ವಾಭಿಮಾನಿ ಅಲ್ಲ ಜನಕಲ್ಯಾಣ ಸಮಾವೇಶ ಎಂದ ಡಿಕೆ ಶಿವಕುಮಾರ್
ಹಾಸನದಲ್ಲಿ ಸಿದ್ಧತೆ ಪರಿಶೀಲನೆ ನಡೆಸಿದ ನಂತರ ಸಭೆಯಲ್ಲಿ ಭಾಗವಹಿಸಿದ ಡಿಕೆ ಶಿವಕುಮಾರ್
Follow us on

ಬೆಂಗಳೂರು, ಡಿಸೆಂಬರ್ 3: ಡಿಸೆಂಬರ್ 5ರಂದು ಹಾಸನದಲ್ಲಿ ನಡೆಯಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರ ಸ್ವಾಭಿಮಾನಿ ಸಮಾವೇಶದ ದಿಕ್ಕು ದೆಸೆಯೇ ಬದಲಾಗಿದೆ. ‘ಸಿದ್ದರಾಮೋತ್ಸವ 2.0’ ಎಂದೇ ಶುರುವಾಗಿದ್ದ ಈ ಸಮಾವೇಶ ಮುಖ್ಯಮಂತ್ರಿಗಳ ಪವರ್‌ ಶೋ ಎಂದೇ ಬಿಂಬಿತವಾಗುತ್ತಿತ್ತು. ಸಿದ್ದರಾಮಯ್ಯ ಬಣದ ಸಚಿವರೇ ಮುಂದೆ ನಿಂತು ಈ ಕಾರ್ಯಕ್ರಮದ ಪೂರ್ವಸಿದ್ಧತೆಗಳನ್ನು ಮಾಡುತ್ತಿದ್ದರು. ಆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಬರೆದ ಅನಾಮಧೇಯ ಪತ್ರದ ನಂತರ ಎಲ್ಲವೂ ಬದಲಾಯಿತು. ನಂತರ ಪಕ್ಷದ ವತಿಯಿಂದಲೇ ಕಾರ್ಯಕ್ರಮ ಮಾಡುವಂತೆ ರಾಹುಲ್ ಗಾಂಧಿ ಸೂಚನೆ ನೀಡಿದರು. ಈ ಎಲ್ಲಾ ಬೆಳವಣಿಗೆ ಬಳಿಕ ಇಡೀ ಕಾರ್ಯಕ್ರಮವನ್ನು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಓವರ್ ಟೇಕ್ ಮಾಡಿದ್ದಾರೆ.

ಸ್ವಾಭಿಮಾನಿ ಸಮಾವೇಶ ಅಲ್ಲ, ಜನಕಲ್ಯಾಣ ಸಮಾವೇಶ

ಸಿದ್ದರಾಮಯ್ಯ ಬಣಕ್ಕೆ ಬಿಗ್ ಶಾಕ್ ಕೊಟ್ಟಿರುವ ಕನಕಪುರ ಬಂಡೆ, ಇದು ಪಕ್ಷದ ಸಮಾವೇಶ ಎಂದು ಹೇಳಿದ್ದಾರೆ. ನಿನ್ನೆ ಹಾಸನದಲ್ಲಿ ಖದ್ದು ಸಮಾವೇಶದ ಸ್ಥಳ ಪರಿಶೀಲಿಸಿದ್ದಾರೆ. ಸ್ವಾಭಿಮಾನಿ ಸಮಾವೇಶ ಎಂದಿದ್ದ ಹೆಸರನ್ನು ಜನಕಲ್ಯಾಣ ಸಮಾವೇಶ ಎಂದು ಬದಲಿಸಲಾಗಿದೆ.

6 ಜಿಲ್ಲೆ ಅಲ್ಲ ಹಾಸನ ಕೇಂದ್ರೀಕರಿಸಿ ಸಮಾವೇಶ

ಈ ಮೊದಲು ಹಾಸನದ ಸಿದ್ದರಾಮಯ್ಯರ ಸಮಾವೇಶ 6 ಜಿಲ್ಲೆಗಳನ್ನು ಗುರಿಯಾಗಿಸಿ ಮಾಡಲಾಗುತ್ತಿದೆ ಎನ್ನಲಾಗಿತ್ತು. ಆದರೆ ಈಗ ಡಿಕೆ ಶಿವಕುಮಾರ್ ಆರು ಜಿಲ್ಲೆಗಳು ಅಲ್ಲ, ಹಾಸನ ಜಿಲ್ಲೆ ಮಾತ್ರ ಕೇಂದ್ರೀಕರಿಸಿ ಸಮಾವೇಶ ಮಾಡುತ್ತಿದ್ದೇವೆ ಎಂದಿದ್ದಾರೆ.

ಅದೇನೆ ಇರಲಿ, ಸ್ವಾಭಿಮಾನಿ ಹೆಸರಲ್ಲಿ ಬೃಹತ್ ಶಕ್ತಿಪ್ರದರ್ಶನ ಮೂಲಕ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ಸಜ್ಜಾಗಿದ್ದ ಸಿದ್ದರಾಮಯ್ಯರಿಗೆ ಡಿಕೆ ಶಿವಕುಮಾರ್ ಕೌಂಟರ್​ ಕೊಟ್ಟಿದ್ದಂತೂ ನಿಜ.

ಸಮಾವೇಶಕ್ಕೆ ಭರ್ಜರಿ ಸಿದ್ಧತೆ

ಏತನ್ಮಧ್ಯೆ ಸಮಾವೇಶಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಹಾಸನದ ಅರಸೀಕೆರೆ ರಸ್ತೆಯ ಎಸ್​ಎಂ ಕೃಷ್ಣ ಬಡಾವಣೆಯಲ್ಲಿ ಬೃಹತ್ ಪೆಂಡಾಲ್ ನಿರ್ಮಾಣಮಾಡಲಾಗಿದೆ. ಲಕ್ಷ ಲಕ್ಷ ಜನರನ್ನು ಸೇರಿಸಲು ತಯಾರಿ ನಡೆದಿದೆ. ಆರು ಜಿಲ್ಲೆಗಳಲ್ಲಿ ಸಭೆ ಹಾಗೂ ಪ್ರಚಾರ ನಡೆಸಲಾಗುತ್ತಿದೆ.

ಡಿಕೆ ಶಿವಕುಮಾರ್ ಹೇಳಿದ್ದೇನು?

ಹಾಸನಕ್ಕೆ ಬೇಟಿ ನೀಡಿ ತಯಾರಿ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಇದು ಕೇವಲ ಹಾಸನಕ್ಕೆ ಸೀಮಿತವಾದ ಕಾರ್ಯಕ್ರಮ. ಇಂತಹ ಕಾರ್ಯಕ್ರಮ ಎಲ್ಲಾ ಕಡೆ ನಡೆಯಲಿದೆ ಎಂದರು.

ಇದನ್ನೂ ಓದಿ: ಹಾಸನ ಸ್ವಾಭಿಮಾನಿ ಸಮಾವೇಶವನ್ನೇ ಓವರ್ ಟೇಕ್ ಮಾಡಿದ ಡಿಕೆಶಿ: ಕಾರ್ಯಕ್ರಮದ ಸ್ವರೂಪವೇ ಬದಲು

ವಿಪಕ್ಷಗಳ ನಾಯಕರು ನಮ್ಮನ್ನು ಟೀಕೆ ಮಾಡುತ್ತಿದ್ದರು. ಆದರೆ ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ಜನರು ಉಪ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ. ಬಿಜೆಪಿ ಜನರ ಭಾವನೆ ಜೊತೆ ರಾಜಕೀಯ ಮಾಡುತ್ತಿದೆ. ನಾವು ಜನರ ಬದುಕಿನ ಜೊತೆ ರಾಜಕೀಯ ಮಾಡುತ್ತೇವೆ. ಜನರಿಗಾಗಿ ನಮ್ಮ ಸರ್ಕಾರ ಬಂದ ನಂತರ ಹಲವು ಯೋಜನೆ ಜಾರಿ ಮಾಡಲಾಗಿದೆ. ಇದನ್ನು ಜನರಿಗೆ ಹೇಳಬೇಕಾಗಿದೆ ಹಾಗಾಗಿಯೇ ಈ ಸಮಾವೇಶ ನಡೆಸಲಾಗುತ್ತಿದೆ ಎಂದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:01 am, Tue, 3 December 24