ನತದೃಷ್ಟ ಹೆಣ್ಣು ಮಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ; ಕೆಪಿಸಿಸಿ ಕಚೇರಿಯಲ್ಲಿ ಮಹಿಳಾ ನಾಯಕಿಯರ ಸುದ್ದಿಗೋಷ್ಠಿ
ಇಂತಹ ಪ್ರಕರಣಗಳು ವಿಧಾನಸಭೆಯಲ್ಲಿ ಚರ್ಚೆಗೆ ಬಂದರೆ, ನಮ್ಮಂತಹವರಿಗೆ ನಾಚಿಕೆಯಾಗುತ್ತದೆ; ಮಾಜಿ ಸಚಿವೆ ಮೋಟಮ್ಮ
ಬೆಂಗಳೂರು: ನತದೃಷ್ಟ ಹೆಣ್ಣುಮಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. 27 ದಿನದ ಹಿಂದೆಯೇ ಸಿಡಿ ಪ್ರಕರಣ ಬೆಳಕಿಗೆ ಬಂದಿತ್ತು. ಆದರೆ ಇದುವರೆಗೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಮಾಜಿ ಸಚಿವೆ ಮೋಟಮ್ಮ ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ. ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಕುರಿತು ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಕಚೇರಿಯಲ್ಲಿ ಮಹಿಳಾ ನಾಯಕಿಯರಾದ ಮಾಜಿ ಸಚಿವೆ ಮೋಟಮ್ಮ, ಜಯಮಾಲ, ಉಮಾಶ್ರೀ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿಯ ರಕ್ಷಣೆ ಮಾಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಆಕಸ್ಮಿಕವಾಗಿ ಸಿಎಂ ಸ್ಥಾನ ಗಿಟ್ಟಿಸಿಕೊಂಡರು. ಅವರು ರಮೇಶ್ ಜಾರಕಿಹೊಳಿ ಸಹಾಯದಿಂದ ಸಿಎಂ ಆಗಿದ್ದಾರೆ. ಆದರೆ ಅವರಿಗೆ ಕೊಟ್ಟಿರುವ ಭರವಸೆ ಇನ್ನೂ ಈಡೇರಿಸಿಲ್ಲ. ಹೀಗಾಗಿ ರಮೇಶ್ ಜಾರಕಿಹೊಳಿ ಬಿಜೆಪಿ ಹೈಕಮಾಂಡ್ ಭೇಟಿಗೆ ಹೋಗ್ತಿದ್ರು. ಹೀಗಾಗಿ ಜಾರಕಿಹೊಳಿ ನಾಯಕತ್ವ ಹತ್ತಿಕ್ಕುವವರು ಬೇಕಿತ್ತು. ಅದಕ್ಕಾಗಿ ರಾಜ್ಯದಲ್ಲಿ ಸಿಡಿ ಪ್ರಕರಣವನ್ನು ತರಲಾಗಿದೆ. ಇಂತಹ ಪ್ರಕರಣಗಳು ವಿಧಾನಸಭೆಯಲ್ಲಿ ಚರ್ಚೆಗೆ ಬಂದರೆ, ನಮ್ಮಂತಹವರಿಗೆ ನಾಚಿಕೆಯಾಗುತ್ತದೆ. ಸಚಿವ ಡಾ.ಕೆ.ಸುಧಾಕರ್ ಏಕಪತ್ನಿ ವ್ರತಸ್ಥ ಹೇಳಿಕೆ ವಿಚಾರಕ್ಕೆ, ಮಂತ್ರಿಯಾದವರು ಇಂತಹ ಹೇಳಿಕೆಯನ್ನು ನೀಡಬಹುದೇ? ಹೆಣ್ಣು ಮಕ್ಕಳ ಗೌರವ ಹಾಳು ಮಾಡುತ್ತಿದ್ದಾರೆಂದು ಮಾಜಿ ಸಚಿವೆ ಮೋಟಮ್ಮ ಕಿಡಿಕಾರಿದ್ದಾರೆ.
ಇನ್ನು, ಈ ಕುರಿತಂತೆ ಮಾತನಾಡಿದ ಮಾಜಿ ಸಚಿವೆ ಜಯಮಾಲಾ, ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದಲ್ಲಿ 27 ದಿನ ಕಳೆದರೂ ಆ ಹೆಣ್ಣು ಮಗಳನ್ನ ಪತ್ತೆ ಮಾಡಲು ಆಗಿಲ್ಲ. ಇದು ನೋವಿನ ಸಂಗತಿ ಎಂದು ಹೇಳಿಕೆ ನೀಡಿದ್ದಾರೆ.
ಸಿಡಿ ಪ್ರಕರಣ ಸಂಬಂಧ ಹಲವು ದ್ವಂದ್ವ ಹೇಳಿಕೆಗಳು ಬರುತ್ತಿವೆ. ಈ ಪ್ರಕರಣದಲ್ಲಿ ಯಾರ ಕಡೆಯೋ ಬೊಟ್ಟು ಮಾಡಲಾಗುತ್ತಿದೆ. ಹೀಗಾಗಿ ಗೃಹ ಸಚಿವರ ಬಳಿ ನಾನು ಮನವಿ ಮಾಡುತ್ತಿದ್ದೇನೆ. ಅವರ ತಂದೆ, ತಾಯಿ ಏನಾದರೂ ಹೇಳಬಹುದು. ಆದರೆ ಆ ಯುವತಿ ಮಾತ್ರ ನಿಜವನ್ನು ಹೇಳುವುದಕ್ಕೆ ಸಾಧ್ಯ. ಮೊದಲು ಆ ಯುವತಿ ಎಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ. ಆಗ ಸತ್ಯ ಏನೆಂಬುದು ಹೊರಗೆ ಬರುತ್ತದೆ ಎಂದು ಹೇಳಿದ್ದಾರೆ.
ಈಗ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಿರುದ್ಧ ಆರೋಪಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರಿಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ ಎಂದು ಡಿ.ಕೆ.ಶಿವಕುಮಾರ್ ಪರವಾಗಿ ಜಯಮಾಲಾ ಮಾತನಾಡಿದ್ದಾರೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಬಿಜೆಪಿ ಮನೆಯೊಂದು ಮೂರು ಬಾಗಿಲು.. ಭಿನ್ನ ಹೇಳಿಕೆಗಳ ಸುಳಿಯಲ್ಲಿ ಸಚಿವರುಗಳು
ಯಾವುದೇ ಪ್ರಭಾವಕ್ಕೆ ಒಳಗಾಗದೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ: ಬಸವರಾಜ ಬೊಮ್ಮಾಯಿ ಸ್ಪಷ್ಟನೆ