Bus Strike: ಇಂದು ಮಧ್ಯಾಹ್ನದಿಂದಲೇ ಬಿಎಂಟಿಸಿ ಬಸ್ ಸಂಚಾರ ಅನುಮಾನ; ನಾಳೆಯಿಂದ ಕರ್ನಾಟಕ ರಾಜ್ಯಾದ್ಯಂತ ಬಸ್​ ಬಂದ್?

| Updated By: Digi Tech Desk

Updated on: Apr 06, 2021 | 10:13 AM

BMTC KSRTC Workers Strike: ಮುಷ್ಕರದಿಂದ ಬೆಂಗಳೂರಿನಲ್ಲಿ ಪ್ರತಿನಿತ್ಯ ಸಂಚರಿಸುತ್ತಿದ್ದ ಸುಮಾರು ಆರು ಸಾವಿರ ಬಸ್ಸುಗಳ ಸಂಚಾರ ಸ್ತಬ್ಧವಾಗಲಿದ್ದು, ಪ್ರತಿನಿತ್ಯ ಬಸ್ಸಿನಲ್ಲಿ ಸಂಚರಿಸುತ್ತಿದ್ದ ಸುಮಾರು ಮೂವತ್ತು ಲಕ್ಷ ಪ್ರಯಾಣಿಕರು ತೊಂದರೆಗೀಡಾಗಲಿದ್ದಾರೆ. ರಾಜ್ಯಾದ್ಯಂತ ಸುಮಾರು ಒಂದು ಕೋಟಿ ಮಂದಿ ಸಮಸ್ಯೆ ಅನುಭವಿಸಲಿದ್ದು, ಅಂದಾಜು ಇಪ್ಪತ್ತು ಸಾವಿರ ಬಸ್ಸುಗಳ ಸಂಚಾರ ಬಂದ್ ಆಗಲಿದೆ.

Bus Strike: ಇಂದು ಮಧ್ಯಾಹ್ನದಿಂದಲೇ ಬಿಎಂಟಿಸಿ ಬಸ್ ಸಂಚಾರ ಅನುಮಾನ; ನಾಳೆಯಿಂದ ಕರ್ನಾಟಕ ರಾಜ್ಯಾದ್ಯಂತ ಬಸ್​ ಬಂದ್?
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಹಿಂದೆ ಬಹುದೊಡ್ಡ ಮಟ್ಟದ ಪ್ರತಿಭಟನೆ ಮಾಡಿ ನಂತರ ಬೇಡಿಕೆ ಈಡೇರಿಸುವ ಆಶ್ವಾಸನೆಯಿಂದ ಕಾದುಕುಳಿತಿದ್ದ ಸಾರಿಗೆ ನೌಕರರು ಈಗ ಮತ್ತೆ ಮುಷ್ಕರಕ್ಕೆ ಮುಂದಾಗಿದ್ದಾರೆ. ಪರಿಣಾಮ ಇಂದು ಮಧ್ಯಾಹ್ನದಿಂದಲೇ ಬಿಎಂಟಿಸಿ ಬಸ್ ಸಂಚಾರ ನಡೆಸುವುದು ಅನುಮಾನವಾಗಿದೆ. 6ನೇ ವೇತನ ಆಯೋಗದ ವರದಿ ಜಾರಿಗೆ ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ಕಾರಣಕ್ಕೆ ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ಇಳಿಯಲಿರುವ ಸಾರಿಗೆ ನೌಕರರು ಅನಿರ್ದಿಷ್ಟ ಚಳುವಳಿಗೆ ಸಜ್ಜಾಗಿದ್ದಾರೆ. BMTC, KSRTC, NWKRTC, NEKRTC ಸಿಬ್ಬಂದಿ ಕುಟುಂಬ ಸಮೇತರಾಗಿ ಮುಷ್ಕರದಲ್ಲಿ ಭಾಗಿಯಾಗಲು ನಿರ್ಧರಿಸಿದ್ದಾರೆ.

ಮುಷ್ಕರದಿಂದ ಜನ ಸಾಮಾನ್ಯರಿಗೆ ತೊಂದರೆಯಾಗಲಿದೆ ಎಂಬ ಮಾತಿಗೆ ಪ್ರತ್ಯುತ್ತರಿಸಿರುವ ಸಾರಿಗೆ ಸಿಬ್ಬಂದಿ, ಟಿವಿ9 ಪ್ರತಿನಿಧಿಯ ಬಳಿ ತಮ್ಮ ಅಳಲು ತೋಡಿಕೊಂಡು ಬಸ್​ ನಿಲ್ಲಿಸಿದರೆ ಜನರಿಗೆ ತೊಂದರೆ ಎಂದು ಹೇಳ್ತಾರೆ. ಆದರೆ, 6 ಸಾವಿರ ಸಂಬಳದಲ್ಲಿ ನಾವು ಜೀವನ ಸಾಗಿಸುವುದು ಹೇಗೆ? ನಮ್ಮ ಸಮಸ್ಯೆಯನ್ನು ನೋಡುವವರು ಯಾರು? ಬೆಂಗಳೂರಿನಲ್ಲಿ ನಾವು ಜೀವನ ಸಾಗಿಸುವುದು ಕಷ್ಟವಾಗುತ್ತಿದೆ. ನಮಗಾಗುವ ತೊಂದರೆ ಯಾರಿಗೂ ಕಾಣಿಸುತ್ತಿಲ್ಲವಾ ಎಂದು ಆಕ್ರೋಶ ಹೊರಹಾಕಿದ್ದಾರೆ.

ನಮಗೆ ಹೆಂಡತಿ, ಮಕ್ಕಳು ಇಲ್ವಾ? ನಾವು ಸರ್ಕಾರದ ನೌಕರರು ಅಲ್ವಾ? ಸಂಬಳ ಏರಿಕೆ ಮಾಡಿ ಎಂದು ಕೇಳಿದ್ರೆ ಚುನಾವಣಾ ನೀತಿ ಸಂಹಿತೆ ಅಂತಾರೆ. ಹಾಗಾದ್ರೆ ನಾವು ಬದುಕೋದು ಬೇಡ್ವಾ? ಒಂದು ಲೀಟರ್ ಅಡುಗೆ ಎಣ್ಣೆಗೆ ಎಷ್ಟು ಬೆಲೆ ಆಗಿದೆ. ದೈನಂದಿನ ಬಳಕೆ ವಸ್ತುಗಳ ಬೆಲೆಯಲ್ಲಿ ಎಷ್ಟು ಏರಿಕೆ ಆಗಿದೆ. ಇದನ್ನೆಲ್ಲಾ ಸಂಭಾಳಿಸಿಕೊಂಡು ನಾವು ಬದುಕುವುದಾದರೂ ಹೇಗೆ? ಎಂದು ಅಳಲು ತೋಡಿಕೊಂಡಿರುವ ನೌಕರರು ನಾಳೆ ಯಾವ ಕಾರಣಕ್ಕೂ ಬಸ್​ಗಳು ರಸ್ತೆಗೆ ಇಳಿಯಲ್ಲ ಎಂದು ಹೇಳಿದ್ದಾರೆ.

ಆರನೇ ವೇತನ ಆಯೋಗ ಜಾರಿಯಾಗಲೇ ಬೇಕು ಎಂದು ಬಿಗಿಪಟ್ಟು ಹಿಡಿದಿರುವ ನೌಕರರು ನಾಳೆಯಿಂದ ಮುಷ್ಕರ ನಡೆಸುವ ಸಾಧ್ಯತೆ ದಟ್ಟವಾಗಿದ್ದು, ಬಸ್ ಸಂಚಾರದಲ್ಲಿ ಭಾರೀ ವ್ಯತ್ಯಯ ಆಗುವುದು ಬಹುತೇಕ ನಿಶ್ಚಿತವಾಗಿದೆ. ನೌಕರರಿಗೆ ವೇತನ ಹೆಚ್ಚಳದ ಆಮಿಷ ತೋರಿಸಿ ಮುಷ್ಕರ ಹತ್ತಿಕ್ಕಲು ಸರ್ಕಾರ ರೂಪಿಸಿದ ಯೋಜನೆಯೂ ಕೈಗೂಡದ ಕಾರಣ ಜನಸಾಮಾನ್ಯರಿಗೆ ಮುಷ್ಕರದ ಬಿಸಿ ತಟ್ಟಲಿದೆ.

ಬೆಂಗಳೂರಿಗರಿಗೆ ಸಮಸ್ಯೆ ಕಟ್ಟಿಟ್ಟ ಬುತ್ತಿ
ಮುಷ್ಕರದಿಂದ ಬೆಂಗಳೂರಿನಲ್ಲಿ ಪ್ರತಿನಿತ್ಯ ಸಂಚರಿಸುತ್ತಿದ್ದ ಸುಮಾರು ಆರು ಸಾವಿರ ಬಸ್ಸುಗಳ ಸಂಚಾರ ಸ್ತಬ್ಧವಾಗಲಿದ್ದು, ಪ್ರತಿನಿತ್ಯ ಬಸ್ಸಿನಲ್ಲಿ ಸಂಚರಿಸುತ್ತಿದ್ದ ಸುಮಾರು ಮೂವತ್ತು ಲಕ್ಷ ಪ್ರಯಾಣಿಕರು ತೊಂದರೆಗೀಡಾಗಲಿದ್ದಾರೆ. ರಾಜ್ಯಾದ್ಯಂತ ಸುಮಾರು ಒಂದು ಕೋಟಿ ಮಂದಿ ಸಮಸ್ಯೆ ಅನುಭವಿಸಲಿದ್ದು, ಅಂದಾಜು ಇಪ್ಪತ್ತು ಸಾವಿರ ಬಸ್ಸುಗಳ ಸಂಚಾರ ಬಂದ್ ಆಗಲಿದೆ. ಹೀಗಾಗಿ ಇನ್ನೂ ಮೂರ್ನಾಲ್ಕು ದಿನಗಳ ಕಾಲ ಜನಸಾಮಾನ್ಯರು ಪರದಾಡಬೇಕಿದೆ.

ವಿದ್ಯಾರ್ಥಿಗಳಿಗೆ ಸಮಸ್ಯೆ
ಬಸ್​ ಮುಷ್ಕರದಿಂದ ಕಾಲೇಜು ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕಲಿದ್ದು, ಕಾಲೇಜಿಗೆ ಹೋಗುವುದು ಕಷ್ಟವಾಗಲಿದೆ. ಈ ಬಗ್ಗೆ ಟಿವಿ9 ಜೊತೆ ಕಷ್ಟ ಹೇಳಿಕೊಂಡಿರುವ ವಿದ್ಯಾರ್ಥಿಗಳು ಪ್ರತಿನಿತ್ಯ ಬಸ್​ನಲ್ಲಿ ಕಾಲೇಜಿಗೆ ಹೋಗಿ ಬರುವವರು ನಾವು. ಈಗ ಮುಷ್ಕರ ಮಾಡಿದರೆ ಕಾಲೇಜಿಗೆ ಹೋಗುವುದೇ ಕಷ್ಟವಾಗುತ್ತದೆ. ತರಗತಿಗಳು ತಪ್ಪಿ ಹೋಗುತ್ತವೆ. ಅಲ್ಲದೇ ಕೆಲವು ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭವಾಗಿದ್ದು, ಅವರೇನು ಮಾಡಬೇಕು? ಓಲಾ, ಊಬರ್​ಗೆ ಹಣ ಕೊಟ್ಟು ಹೋಗೋಕೆ ಆಗಲ್ಲ ಸರ್ ಎಂದು ದುಃಖ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:
ನಾಳೆ ಸಾರಿಗೆ ಮುಷ್ಕರ ನಡೆದೇ ನಡೆಯುತ್ತೆ, ಖಾಸಗಿ ನೌಕರರಿಗೂ ಬಸ್ ಓಡಿಸದಂತೆ ಮನವಿ: ಕೋಡಿಹಳ್ಳಿ ಚಂದ್ರಶೇಖರ್

Published On - 9:49 am, Tue, 6 April 21