KSRTC Ticket Price: ಸಂಕ್ರಾಂತಿ ನಂತರ ಕೆಎಸ್ಆರ್​ಟಿಸಿ, ಬಿಎಂಟಿಸಿ ಟಿಕೆಟ್ ದರ ಹೆಚ್ಚಳ ಸಾಧ್ಯತೆ

| Updated By: Digi Tech Desk

Updated on: Jan 02, 2025 | 4:20 PM

ಕೆಎಸ್ಆರ್​ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಸಾರಿಗೆ ಮುಖಂಡರು ಸಂಕ್ರಾಂತಿ ನಂತರ ಸಿಎಂ ಜೊತೆಗೆ ನಡೆಯಲಿರುವ ಸಭೆಯಲ್ಲಿ, ಟಿಕೆಟ್ ಏರಿಕೆಗೆ ಗ್ರೀನ್ ಸಿಗ್ನಲ್ ನೀಡುವಂತೆ ಮನವಿ ಮಾಡಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸಾರಿಗೆ ಸಚಿವರಿಗೆ ಈಗಾಗಲೇ ನಾಲ್ಕು ನಿಗಮಗಳಿಂದಲೂ ಟಿಕೆಟ್ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

KSRTC Ticket Price: ಸಂಕ್ರಾಂತಿ ನಂತರ ಕೆಎಸ್ಆರ್​ಟಿಸಿ, ಬಿಎಂಟಿಸಿ ಟಿಕೆಟ್ ದರ ಹೆಚ್ಚಳ ಸಾಧ್ಯತೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಜನವರಿ 2: ಸಂಕ್ರಾಂತಿ ಹಬ್ಬದ ನಂತರ ಸಿಎಂ ಸಿದ್ದರಾಮಯ್ಯ ಜೊತೆಯಲ್ಲಿ ಸಾರಿಗೆ ಮುಖಂಡರ ‌ಸಭೆ ನಡೆಯಲಿದೆ. ಈ ಸಭೆಯಲ್ಲಿ, ನಾಲ್ಕು ನಿಗಮಗಳ ಬಸ್​ಗಳ ಟಿಕೆಟ್ ದರ ಏರಿಕೆಗೆ ಅನುಮತಿ ನೀಡುವಂತೆ ಸಾರಿಗೆ ನೌಕರರು ಸಿಎಂ‌ ಸಿದ್ದರಾಮಯ್ಯಗೆ ಮನವಿ ಮಾಡಲು ಈಗಾಗಲೇ ‌ಅಂಕಿ ಅಂಶಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಎಂಟಿಸಿ ಟಿಕೆಟ್ ದರ ಏರಿಕೆ ಮಾಡಿ 10 ವರ್ಷಗಳಾಗಿವೆ. ಕೆಎಸ್ಆರ್​ಟಿಸಿ ಟಿಕೆಟ್ ಏರಿಕೆ ಮಾಡಿ ಐದು ವರ್ಷಗಳಾಗಿವೆ. ಹಾಗಾಗಿ ನಿಗಮಗಳನ್ನು ನಡೆಸಲು ಕಷ್ಟ ಆಗುತ್ತಿದೆ. ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸುತ್ತಿದ್ದೇವೆ ಎಂದು ಮನವಿ ಮಾಡಲು ಸಾರಿಗೆ ಮುಖಂಡರು ಸಿದ್ಧವಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇತ್ತ ಕಳೆದ ವಾರ ಸಿಎಂ ಜೊತೆಗೆ ಸಾರಿಗೆ ಅಧಿಕಾರಿಗಳ ಜತೆ ನಡೆದಿದ್ದ ಸಭೆಯಲ್ಲಿ, ಟಿಕೆಟ್ ದರ ಏರಿಕೆ ಮಾಡಿದರೆ ಮಾತ್ರ ಬಿಎಂಟಿಸಿ, ಕೆಎಸ್ಆರ್​ಟಿಸಿ ಉಳಿಸಲು ಸಾಧ್ಯ ಎಂದು ಸಿಎಂಗೆ ಅಧಿಕಾರಿಗಳು ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ. ಪೆಟ್ರೋಲ್-ಡೀಸೆಲ್ ದರ ಹಾಗೂ ಬಿಡಿ ಭಾಗಗಳ ದರ ಏರಿಕೆಯಾಗಿದೆ. ಇಂಧನ‌ ದರ ನಾಲ್ಕೈದು ವರ್ಷದಲ್ಲಿ ಏರಿಕೆಯಾಗುತ್ತಲೇ ಬಂದಿದೆ. ಅದಕ್ಕೆ ಅನುಗುಣವಾಗಿ ಟಿಕೆಟ್ ದರ ಏರಿಕೆಯಾಗಬೇಕೆಂದು ನಾಲ್ಕೂ ನಿಗಮಗಳು ಮನವಿ ಮಾಡಿವೆ.

ಶೇ 25 ರಿಂದ 28 ದರ ಹೆಚ್ಚಳಕ್ಕೆ ಪ್ರಸ್ತಾವನೆ

ಟಿಕೆಟ್ ದರದಲ್ಲಿ ಶೇ 25 ರಿಂದ 28 ರಷ್ಟು ಏರಿಕೆಗೆ ನಾಲ್ಕು ನಿಗಮಗಳು ಈ ಹಿಂದೆಯೇ ಪ್ರಸ್ತಾವನೆಯನ್ನು ಸಲ್ಲಿಸಿವೆ. ಸಂಕ್ರಾಂತಿ ಸಭೆಯ ನಂತರ ಶೇ 25 ಅಲ್ಲದಿದ್ದರೂ, ಅದರ ಅರ್ಧದಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಸಾರಿಗೆ ಮುಖಂಡ ಜಗದೀಶ್ ತಿಳಿಸಿದ್ದಾರೆ.

ಟಿಕೆಟ್ ದರ ಶೇ 15ರ ಹೆಚ್ಚಳ ಪಕ್ಕಾ?

ಇತ್ತೀಚೆಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದಲ್ಲಿ ಸಾರಿಗೆ ಇಲಾಖೆಗಳ ಸ್ಥಿತಿಗತಿ ಕುರಿತು ಸಭೆ ನಡೆದಿತ್ತು. ಈ ಸಭೆಯಲ್ಲಿ ಸಾರಿಗೆ ಇಲಾಖೆಗೆ 3650 ಕೋಟಿ ಹೊರೆಯಾಗುತ್ತಿದೆ ಎಂದು ಸಾರಿಗೆ ಅಧಿಕಾರಿಗಳು ಅಳಲು ತೋಡಿಕೊಂಡಿದ್ದರು. ನಷ್ಟ ಪರಿಹಾರಕ್ಕೆ ಶೇ 15ರಷ್ಟು ಪ್ರಯಾಣದರ ಹೆಚ್ಚಳಕ್ಕೆ ಸಭೆಯಲ್ಲಿ ಚರ್ಚೆ ಮಾಡಲಾಗಿತ್ತು ಎನ್ನಲಾಗಿದೆ.

ಆದರೆ ಶೇ 15 ರ ಪ್ರಮಾಣದಲ್ಲಿ ದರ ಪರಿಷ್ಕರಣೆಯಾದರೂ ನಿಗಮಗಳು ಇನ್ನೂ 1,800 ಕೋಟಿ ನಷ್ಟ ಅನುಭವಿಸುತ್ತವೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನ್ಯೂ ಇಯರ್​ ಎಫೆಕ್ಟ್: 15 ಮೆಟ್ರಿಕ್ ಟನ್ ಕಸ ಸಂಗ್ರಹ, ಬಿಎಂಟಿಸಿಗೆ 5 ಕೋಟಿ ಆದಾಯ

ಏತನ್ಮಧ್ಯೆ ದರ ಏರಿಕೆ ಪ್ರಸ್ತಾವಗಳ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಯಾಣಿಕರು, ಸಾರಿಗೆ ನಿಗಮಗಳು ತುಂಬಾ ‌ಸಂಕಷ್ಟದಲ್ಲಿರುವುದು ನಿಜ ಇರಬಹುದು. ಹಾಗೆಂದು ಏಕಾಏಕಿ ಸಿಕ್ಕಾಪಟ್ಟೆ ಟಿಕೆಟ್ ದರ ಏರಿಕೆ ಮಾಡಿದರೆ ನಮಗೂ ಕಷ್ಟ. ಶೇ 8 ರಿಂದ 10 ರಷ್ಟು ಮಾತ್ರ ಮಾಡಲಿ ಎಂದಿದ್ದಾರೆ.

ಒಟ್ಟಿನಲ್ಲಿ, ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಾರಿಗೆ ನಿಗಮಗಳಿಗೆ ಟಿಕೆಟ್ ದರ ಏರಿಕೆ ಮಾಡಲು ಸಂಕ್ರಾಂತಿಯ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅನುಮತಿ ನೀಡುತ್ತಾರೆಯೇ ಎಂಬುದನ್ನು ‌ಕಾದು ನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:32 am, Thu, 2 January 25