ಶಕ್ತಿ ಯೋಜನೆಯಿಂದ ಮಹಿಳೆಯರು ಬಸ್ಸಿನಲ್ಲಿ ಜಾಲಿ ರೈಡ್, ಇತ್ತ ನಿಗಮಗಳಿಗೆ ಆರ್ಥಿಕ ಸಂಕಷ್ಟ
ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಜಾರಿಗೆ ಬಂದು ಎರಡು ವರ್ಷಗಳು ಪೂರ್ಣಗೊಂಡಿದೆ. 2023ರ ಜೂನ್ 11 ರಂದು ಆರಂಭವಾಗಿದ್ದ ಈ ಯೋಜನೆಗೆ ಮಹಿಳೆಯರು ಬಹುಪರಾಕ್ ಎಂದಿದ್ದು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್ಟಿಸಿ, ಎನ್ಡಬ್ಲೂಕೆಆರ್ಟಿಸಿ ನಾಲ್ಕೂ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಬರೋಬ್ಬರಿಗೆ 495 ಕೋಟಿ ಮಹಿಳಾ ಪ್ರಯಾಣಿಕರು ಒಂದು ರೂಪಾಯಿ ಹಣ ನೀಡದೆ ಉಚಿತವಾಗಿ ಪ್ರಯಾಣಿಸಿದ್ದಾರೆ. ಆದ್ರೆ, ಇತ್ತ ನಿಗಮಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ.

ಹುಬ್ಬಳ್ಳಿ, (ಜುಲೈ 13): ಕರ್ನಾಟಕದಲ್ಲಿ ಶಕ್ತಿ ಯೋಜನೆ (shakti scheme) ಜಾರಿಯಾಗಿ ಕಳೆದ ಜೂನ್ ತಿಂಗಳಿಗೆ ಎರಡು ವರ್ಷ ಪೂರ್ಣಗೊಂಡಿದ್ದು, ಕೋಟ್ಯಂತರ ಮಹಿಳೆಯರು (Women) ಸರ್ಕಾರಿ ಬಸ್ ನಲ್ಲಿ ಉಚಿತವಾಗಿ ಸಂಚರಿಸಿದ್ದಾರೆ. ಶಕ್ತಿ ಯೋಜನೆ, ಮಹಿಳೆಯರ ಖುಷಿ ಹೆಚ್ಚಿಸಿದ್ರೆ ಸಾರಿಗೆ ನಿಗಮಗಳಿಗೆ (Karnataka State Road Transport Corporation) ಆರ್ಥಿಕ ಸಂಕಷ್ಟ ತಂದಿದೆ. ಸರ್ಕಾರ ಸರಿಯಾಗಿ ಟಿಕೆಟ್ ಹಣವನ್ನು ಮರುಪಾವತಿ ಮಾಡದೇ ಇದ್ದಿದ್ದರಿಂದ ನೂರಾರು ಕೋಟಿ ರೂಪಾಯಿ ಹಣ ನಾಲ್ಕು ನಿಗಮಗಳಿಗೆ ಬಾಕಿ ಉಳದಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಸರ್ಕಾರ ಬರೋಬ್ಬರಿ 545 ಕೋಟಿ ರೂ. ಹಣ ಬಾಕಿ ನೀಡಬೇಕಿದೆ. ಇದರಿಂದ ಸಿಬ್ಬಂದಿ ಪಿಎಪ್ ಹಣವನ್ನು ಕೂಡಾ ಕಟ್ಟಲಿಕ್ಕಾಗದೇ ಸಂಸ್ಥೆ ಸಂಕಷ್ಟಕ್ಕೆ ಸಿಲುಕಿದ್ದು, ಇದೀಗ ಸಂಸ್ಥೆಗಳು ಸಾಲ ಪಡೆಯಲು ಸರ್ಕಾರ ಅನುಮತಿ ನೀಡಿದೆ.
ಹಣ ಮರುಪಾವತಿ ಮಾಡಲು ಸರ್ಕಾರದಿಂದ ವಿಳಂಬ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದ ಮೇಲೆ ಜಾರಿಯಾದ ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆ ಕೂಡಾ ಒಂದು.ಅಂತಾರಾಜ್ಯ ಮತ್ತು ಕೆಲ ಬಸ್ ಗಳನ್ನು ಹೊರತು ಪಡಿಸಿದ್ರೆ, ಮಹಿಳೆಯರು, ರಾಜ್ಯದ್ಯಂತ ಎಲ್ಲಿ ಬೇಕಾದ್ರು ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಉಚಿತವಾಗಿ ಓಡಾಡಲು ಸರ್ಕಾರ ಅವಕಾಶ ನೀಡಿದೆ. ಇದು ಮಹಿಳೆಯರ ಸಂತಸವನ್ನು ಹೆಚ್ಚಿಸಿದ್ದು, ಮಹಿಳೆಯರು ತೀರ್ಥಕ್ಷೇತ್ರ, ಪ್ರವಾಸಿ ಸ್ಥಳಗಳಿಗೆ ಈಗಾಗಲೇ ಅಡ್ಡಾಡಿ ಬಂದಿದ್ದಾರೆ. ಅನೇಕರು ತಮ್ಮ ದೈನಂದಿನ ಕೆಲಸಗಳಿಗೆ ಬೇರಡೆ ಹೋಗಿ ಬರ್ತಿದ್ದಾರೆ.
ಇದನ್ನೂ ಓದಿ: ಶಕ್ತಿ ಯೋಜನೆ: 500 ಕೋಟಿ ತಲುಪಲಿರುವ ಮಹಿಳಾ ಪ್ರಯಾಣಿಕರ ಸಂಖ್ಯೆ
ಶಕ್ತಿ ಯೋಜನೆ ಜಾರಿಗೊಳಿಸಿದ ಸರ್ಕಾರಕ್ಕೆ ಮಹಿಳೆಯರು ಧನ್ಯವಾದಗಳನ್ನು ತಿಳಿಸಿದ್ದು, ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಯಾಗ್ತಿರೋ ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆ ಮೊದಲ ಸ್ಥಾನದಲ್ಲಿದೆ. ಆದ್ರೆ ಇದೇ ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳು ತೊಂದರೆ ಅನುಭವಿಸುತ್ತಿವೆ. ಆಯಾ ತಿಂಗಳಲ್ಲಿ ನಿಗಮದ ಬಸ್ ಗಳಲ್ಲಿ ಅಡ್ಡಾಡಿದ ಮಹಿಳೆಯರ ಟಿಕೆಟ್ ಹಣವನ್ನು ನಿಗಮಗಳಿಗೆ ಸರ್ಕಾರ ಮರುಪಾವತಿ ಮಾಡುತ್ತದೆ. ನಿಗಮಗಳು ಪ್ರತಿ ತಿಂಗಳು ನಿಗಮಕ್ಕೆ ಬರಬೇಕಾದ ಬಿಲ್ ನ್ನು ಸರ್ಕಾರಕ್ಕೆ ಕಳುಹಿಸುತ್ತವೆ. ಆದ್ರೆ ಸರ್ಕಾರದಿಂದ ನಿಗಮಗಳಿಗೆ ಸರಿಯಾಗಿ ಮರುಪಾವತಿ ಮಾತ್ರ ಆಗ್ತಿಲ್ಲಾ. ಹುಬ್ಬಳ್ಳಿಯಲ್ಲಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯೊಂದಕ್ಕೆನೆ ಸರ್ಕಾರ ಬರೋಬ್ಬರಿ 545 ಕೋಟಿ ರೂಪಾಯಿ ಹಣವನ್ನು ಬಾಕಿ ಉಳಿಸಿಕೊಂಡಿದೆ.
ಆರ್ಥಿಕ ಸಂಕಷ್ಟದಿಂದ ನಿಗಮಗಳು ಪರದಾಟ
ಪ್ರತಿ ತಿಂಗಳು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯೊಂದರಲ್ಲಿಯೇ ನೂರಾ ಮೂವತ್ತು ಕೋಟಿಗೂ ಹೆಚ್ಚು ಹಣವನ್ನು ಮರುಪಾವತಿಗಾಗಿ ಸರ್ಕಾರಕ್ಕೆ ಕಳುಹಿಸಲಾಗುತ್ತಿದೆ. ಆದ್ರೆ ಸರ್ಕಾರ ಪ್ರತಿ ತಿಂಗಳು ನೂರರಿಂದ ನೂರಾ ಹತ್ತು ಕೋಟಿವರಗೆ ಮಾತ್ರ ಟಿಕೆಟ್ ಹಣವನ್ನು ಮರುಪಾವತಿ ಮಾಡುತ್ತಿದೆ. ಸರಿಸುಮಾರು ಶೇಕಡಾ ಎಂಬತ್ತರಷ್ಟು ಹಣವನ್ನು ಮಾತ್ರ ಸರ್ಕಾರದಿಂದ ಮರುಪಾವತಿಯಾಗುತ್ತಿದೆಯಂತೆ. ಪ್ರತಿ ತಿಂಗಳು ಕೆಲ ಕೋಟಿ ಹಣ ಬಾಕಿ ಉಳಿಯುತ್ತಿದ್ದು, ಹೀಗೆ ಬಾಕಿ ಉಳಿದ ಹಣವೇ, 545 ಕೋಟಿಯಾಗಿದೆಯಂತೆ. ಇದರಿಂದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸೇರಿದಂತೆ ರಾಜ್ಯದ ನಾಲ್ಕು ನಿಗಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲಕುವಂತಾಗಿದೆ.
ವಾಯುವ್ಯ ಕರ್ನಾಟಕ ರಸ್ಥೆ ಸಾರಿಗೆ ಸಂಸ್ಥೆಗೆ, ಸಿಬ್ಬಂದಿಗೆ ತನ್ನ ಪಾಲಿನ ವಂತಿಗೆಯ ಪಿಎಪ್ ಹಣವನ್ನು ಕೂಡಾ ಕಟ್ಟಿಲಿಕ್ಕಾಗುತ್ತಿಲ್ಲವಂತೆ. ಇಲ್ಲಿವರಗೆ ಪಿಎಪ್ ಟ್ರಸ್ಟ್ ಗೆ ಬರೋಬ್ಬರಿ ಸಾವಿರದಾ ನೂರು ಕೋಟಿ ರೂಪಾಯಿ ವಂತಿಗೆ ಹಣವನ್ನು ಬಾಕಿ ಉಳಿಸಿಕೊಂಡಿದೆ. ಇನ್ನು ಕೆಲ ಸಮಸ್ಯೆಗಳು ಕೂಡಾ ಉಂಟಾಗುತ್ತಿವೆಯಂತೆ. ಇದೀಗ ಸರ್ಕಾರ ನಾಲ್ಕು ನಿಗಮಗಳಿಗೆ ಎರಡು ಸಾವಿರದಾ ನಲವ್ತತೈದು ಕೋಟಿ ಸರ್ವಿಸ್ ಲೋನ್ ಪಡೆಯಲು ಅವಕಾಶ ನೀಡಿದೆಯಂತೆ. ಅದರಂತೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೂಡಾ ಇದೀಗ ಸರ್ವಿಸ್ ಲೋನ್ ಪಡೆಯಲು ಮುಂದಾಗಿದೆ.
ಶಕ್ತಿ ಯೋಜನೆ, ಮಹಿಳೆಯರ ಸಂತಸವನ್ನು ಹೆಚ್ಚಿಸಿದ್ರೆ, ಸರ್ಕಾರ ಸೂಕ್ತ ಸಮಯದಲ್ಲಿ ಟಿಕೆಟ್ ಹಣ ಮರುಪಾವತಿ ಮಾಡದೇ ಇರೋದರಿಂದ ನಿಗಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಇನ್ನಾದ್ರು ನಿಗಮಗಳಿಗೆ ನೀಡಬೇಕಾದ ಹಣವನ್ನು ಸರ್ಕಾರ ಸಕಾಲದಲ್ಲಿ ಪಾವತಿ ಮಾಡಿದ್ರೆ, ನಿಗಮಗಳ ಆರ್ಥಿಕ ಸಂಕಷ್ಟ ಸ್ವಲ್ಪ ಮಟ್ಟಿಗೆ ನಿವಾರಣೆಯಾಗುತ್ತದೆ.