ಸಾರಿಗೆ ನೌಕರರಿಂದ ಯುಗಾದಿ ದಿನವೇ ಭಿಕ್ಷಾಟನಾ ಚಳವಳಿ.. ಹಬ್ಬಕ್ಕೂ ಸಂಬಳ ನೀಡಿಲ್ಲವೆಂದು ಆಕ್ರೋಶ

ಯುಗಾದಿ ಹಬ್ಬಕ್ಕೆ ಸಂಬಳವಿಲ್ಲದ ಹಿನ್ನೆಲೆ ಸಿಟ್ಟಾಗಿರುವ ಸಾರಿಗೆ ನೌಕರರು ಇಂದು ರಾಜ್ಯಾದ್ಯಂತ ಭಿಕ್ಷೆ ಬೇಡುವ ಮೂಲಕ ವಿನೂತನ ಪ್ರತಿಭಟನೆಗೆ ಮುಂದಾಗಿದ್ದಾರೆ. ಇನ್ನೊಂದೆಡೆ ಕಾನೂನು ಹೋರಾಟಕ್ಕೂ ಮುಂದಾಗಿರುವ ಸಿಬ್ಬಂದಿ ಡಿಪೋ ಮ್ಯಾನೇಜರ್‌ಗಳ ವಿರುದ್ಧ ರಾಜ್ಯಾದ್ಯಂತ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದಾರೆ.

  • TV9 Web Team
  • Published On - 7:30 AM, 13 Apr 2021
ಸಾರಿಗೆ ನೌಕರರಿಂದ ಯುಗಾದಿ ದಿನವೇ ಭಿಕ್ಷಾಟನಾ ಚಳವಳಿ.. ಹಬ್ಬಕ್ಕೂ ಸಂಬಳ ನೀಡಿಲ್ಲವೆಂದು ಆಕ್ರೋಶ
ಬಿಎಂಟಿಸಿ ಬಸ್​ (ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಸಾರಿಗೆ ನೌಕರರ ನಡುವಿನ ತಿಕ್ಕಾಟ ಉಲ್ಬಣಿಸುತ್ತಲೇ ಇದ್ದು, ಮುಷ್ಕರ ಏಳನೇ ದಿನಕ್ಕೆ ಕಾಲಿಟ್ಟಿದೆ. ಯುಗಾದಿ ಹಬ್ಬಕ್ಕೆ ಸಂಬಳವಿಲ್ಲದ ಹಿನ್ನೆಲೆ ಸಿಟ್ಟಾಗಿರುವ ಸಾರಿಗೆ ನೌಕರರು ಇಂದು ರಾಜ್ಯಾದ್ಯಂತ ಭಿಕ್ಷೆ ಬೇಡುವ ಮೂಲಕ ವಿನೂತನ ಪ್ರತಿಭಟನೆಗೆ ಮುಂದಾಗಿದ್ದಾರೆ. ಇನ್ನೊಂದೆಡೆ ಕಾನೂನು ಹೋರಾಟಕ್ಕೂ ಮುಂದಾಗಿರುವ ಸಿಬ್ಬಂದಿ ಡಿಪೋ ಮ್ಯಾನೇಜರ್‌ಗಳ ವಿರುದ್ಧ ರಾಜ್ಯಾದ್ಯಂತ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದಾರೆ. ಆ ಮೂಲಕ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವತ್ತ ಹೆಜ್ಜೆ ಹಾಕುತ್ತಿದ್ದಾರೆ.

ಬೆಂಗಳೂರಿನ ಪ್ರಮುಖ ಜಂಕ್ಷನ್‌ಗಳಲ್ಲಿ ತಟ್ಟೆ ಲೋಟ ಹಿಡಿದು ಕುಟುಂಬದ ಜೊತೆ ಭಿಕ್ಷಾಟನೆ ಮಾಡಲು ನಿರ್ಧರಿಸಿರುವ ನೌಕರರು ಯಾವುದೇ ಕಾರಣಕ್ಕೂ ಕರ್ತವ್ಯಕ್ಕೆ ಮರಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಕರ್ತವ್ಯಕ್ಕೆ ಹಾಜರಾಗಿರುವ ಹಲವು ನೌಕರರಿಗೆ ನಿನ್ನೆ ಸಂಬಳ ಬಿಡುಗಡೆ ಮಾಡಲಾಗಿದ್ದು, ಕೆಲಸಕ್ಕೆ ಹಾಜರಾಗದ ಕೆಲವರಿಗೆ ಸಂಬಳ ನೀಡಿಲ್ಲ. ಹೀಗಾಗಿ ಸಂಬಳ ಅವರು ಯುಗಾದಿ ಹಬ್ಬದ ದಿನವಾದ ಇಂದು ಬೀದಿಗಿಳಿಯಲಿದ್ದಾರೆ.

ಈ ಎಲ್ಲಾ ಪ್ರತಿಭಟನೆ ಕುರಿತಂತೆ ಮಾತನಾಡಿರುವ ಕೋಡಿಹಳ್ಳಿ ಚಂದ್ರಶೇಖರ್, ಇನ್ನು ಮುಂದೆ ನಡೆಯುವ ಎಲ್ಲಾ ಚಳುವಳಿಗಳಲ್ಲೂ ಕುಟುಂಬಸ್ಥರು ಭಾಗಿಯಾಗಲಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಸದಾಶಿವನಗರದಲ್ಲಿ ಭಿಕ್ಷೆ ಬೇಡುವ ಮೂಲಕ ವಿಭಿನ್ನ ಚಳವಳಿ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೇ ಸಂಬಳ ಕೊಡದ ಕುರಿತು ಆಕ್ರೋಶ ಹೊರಹಾಕಿರುವ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ವಕೀಲ ಬಾಲನ್, ವೇತನ ಕೊಡದಿದ್ರೆ ಅದು ಕಾನೂನುಬಾಹಿರ. ಈ ಸಂಬಂಧ ಸಾರಿಗೆ ನೌಕರರು ಇಂದು ರಾಜ್ಯಾದ್ಯಂತ ಪೊಲೀಸ್ ಠಾಣೆಗಳಲ್ಲಿ ದೂರು ಕೊಡಲಿದ್ದಾರೆ ಎನ್ನುವುದನ್ನೂ ತಿಳಿಸಿದ್ದಾರೆ.

ಈ ಮಧ್ಯೆ ನಿನ್ನೆ ಕೂಡ ಬಿಎಂಟಿಸಿಯ 61 ಪ್ರೊಬೆಷನರಿ, 63 ತರಬೇತಿ ನೌಕರರನ್ನು ವಜಾ ಮಾಡಲಾಗಿದ್ದು, ಕಳೆದ 7 ದಿನಗಳಲ್ಲಿ ಒಟ್ಟು 260 ಕ್ಕೂ ಹೆಚ್ಚು ತರಬೇತಿ ನೌಕರರನ್ನ ವಜಾಗೊಳಿಸಲಾಗಿದೆ. ಅತ್ತ ಸರ್ಕಾರ ಆರನೇ ವೇತನ ಆಯೋಗ ಜಾರಿ ಪ್ರಶ್ನೆಯೇ ಇಲ್ಲ ಎನ್ನುತ್ತಿದ್ದು ಇತ್ತ ಸಾರಿಗೆ ನೌಕರರು ಬೇಡಿಕೆ ಈಡೇರುವವರೆಗೂ ಬಸ್ ಹತ್ತಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ:
ಸಂಬಳ ಆಗದ ಸಾರಿಗೆ ನೌಕರರಿಂದ ನಾಳೆ ಡಿಪೋ ಮ್ಯಾನೇಜರ್​ಗಳ ವಿರುದ್ಧ ದೂರು: ವಕೀಲ ಬಾಲನ್ 

ಕರ್ತವ್ಯಕ್ಕೆ ಹಾಜರಾದ 10,430 ಸಿಬ್ಬಂದಿಗೆ ಮಾರ್ಚ್ ತಿಂಗಳ ಸಂಬಳ ಪಾವತಿಸಿದ ಸಾರಿಗೆ ಸಂಸ್ಥೆ