ಬೆಂಗಳೂರು: ವರ್ಗಾವಣೆಗೆ ಬೇಸತ್ತು ನಾಗಮಂಗಲದ ಕೆಎಸ್ಆರ್ಟಿಸಿ ಚಾಲಕ (KSRTC) ಜಗದೀಶ್ ಎಂಬುವವರು ಆತ್ಮಹತ್ಯೆಗೆ ಯತ್ನಿಸಿದ್ದರು. ಸದ್ಯ ಜಗದೀಶ್ನನ್ನು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದ್ದು ವಿಧಾನಸಭಾ ಕಲಾಪದಲ್ಲಿ ಭಾರೀ ಗದ್ದಲಕ್ಕೆ ಕಾರಣವಾಗಿದೆ. ಸದನದಲ್ಲಿ ಮಾಜಿ ಸಿಎಂಗಳಾದ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಹಾಗೂ ಬಸವರಾಜ ಬೊಮ್ಮಾಯಿ(Basavaraj Bommai) ಇಬ್ಬರೂ ಈ ವಿಚಾರ ಪ್ರಸ್ತಾಪಿಸಿದ್ದು ಸಚಿವ ಎನ್.ಚಲುವರಾಯಸ್ವಾಮಿ ರಾಜೀನಾಮೆ ನೀಡಬೇಕು ಎಂದು ಬೊಮ್ಮಾಯಿ ಒತ್ತಾಯಿಸಿದ್ದಾರೆ.
ನಾಲ್ಕನೇ ದಿನದ ಸದನ ಶುರುವಾಗುತ್ತಿದ್ದಂತೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ, ನಾಗಮಂಗಲ KSRTC ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನ ಪ್ರಕರಣವನ್ನು ನಿಯಮ 60ರ ಅಡಿ ಚರ್ಚೆಗೆ ಅವಕಾಶ ಕೊಡುವಂತೆ ಸ್ಪೀಕರ್ಗೆ ಮನವಿ ಪತ್ರ ನೀಡಿದ್ರ. ಪ್ರಕರಣದ ಹಿಂದೆ ಸಚಿವ ಚಲುವರಾಯಸ್ವಾಮಿ ಇದ್ದಾರೆ ಎಂದು HDK ಆರೋಪ ಮಾಡಿದ್ರು. ಹೆಚ್ಡಿ ಕುಮಾರಸ್ವಾಮಿ ಈ ವಿಚಾರ ಪ್ರಸ್ತಾಪ ಮಾಡುತ್ತಿದ್ದಂತೆ ಸದನದಲ್ಲಿ ಗದ್ದಲ ಶುರುವಾಯ್ತು. ಬಿಜೆಪಿ ನಾಯಕರು ಸಾಥ್ ಕೊಟ್ರು.
ಈ ಘಟನೆ ಬಗ್ಗೆ ಚರ್ಚೆ ಮಾಡಲು ಈಗಲೇ ಅವಕಾಶ ಕೊಡಬೇಕು. ಇನ್ಯಾವಾಗಲೋ ಅವಕಾಶ ಕೊಟ್ಟರೆ ಆಗಲ್ಲ. ಆ ವ್ಯಕ್ತಿ ಸತ್ತ ಮೇಲೆ ಚರ್ಚೆ ಮಾಡಲು ಅವಕಾಶ ಕೊಡ್ತೀರಾ? ನಿನ್ನೆ ಕರೆ ಮಾಡಿದಾಗ ಸತ್ತಿಲ್ಲ ಸಾರ್ ಅದಕ್ಕೆ FIR ಹಾಕಿಲ್ಲ ಎಂದ್ರು. ಸಾಕ್ಷ್ಯಗಳನ್ನು ತಿರುಚುವ ಕೆಲಸ ಮಾಡಲಾಗುತ್ತಿದೆ ಎಂದು ಹೆಚ್ಡಿ ಕುಮಾರಸ್ವಾಮಿ ಪ್ರಸ್ತಾಪಿಸಿದರು.
ಇದನ್ನೂ ಓದಿ: ಸದನದಲ್ಲಿ ಪೆನ್ ಡ್ರೈವ್ ಸದ್ದು: ಸ್ಪೀಕರ್ ಒಪ್ಪಿದರೆ ಇಲ್ಲೇ ಆಡಿಯೋ ಹಾಕಿಸುತ್ತೇನೆ ಎಂದ ಕುಮಾರಸ್ವಾಮಿ
ಕೆಎಸ್ಆರ್ಟಿಸಿ ಎಂಡಿಗೆ ಚಾಲಕ ಜಗದೀಶ್ ಪತ್ರ ಬರೆದಿದ್ದಾರೆ. ಆಗ ಸಾರಿಗೆ ಸಚಿವರ ಸೂಚನೆ ಮೇರೆಗೆ ವರ್ಗಾವಣೆ ಎಂದು ಅವರು ತಿಳಿಸಿದ್ದಾರೆ. ವರ್ಗಾವಣೆ ಬಗ್ಗೆ ಪ್ರಶ್ನಿಸಿದಾಗ ಸಾರಿಗೆ ಅಧಿಕಾರಿಗಳು ನಾಗಮಂಗಲ ಶಾಸಕರ ಸೂಚನೆ ಮೇರೆಗೆ ವರ್ಗಾವಣೆ ಎಂದಿದ್ದಾರೆ. ಮಹಿಳಾ ಸಿಬ್ಬಂದಿ ಜೊತೆ ಅಸಭ್ಯವರ್ತನೆ ಸಂಬಂಧ ದೂರು ಬಂದಿದ್ದರಿಂದ ವರ್ಗಾವಣೆ ಮಾಡಿದ್ದೇವೆ ಎಂದಿದ್ದಾರೆ. ಇದು ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ನಡೆದ ವಿಚಾರವಾಗಿದೆ ಅಷ್ಟೇ. ಈ ವಿಚಾರ ಸಾರಿಗೆ ಸಚಿವರವರೆಗೂ ಬಂದಿಲ್ಲ ಎಂದು ಹೆಚ್ಡಿ ಕುಮಾರಸ್ವಾಮಿ ತಿಳಿಸಿದರು.
ಈ ವೇಳೆ ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪಿಐ ನಂದೀಶ್ ಆತ್ಮಹತ್ಯೆ ಕೇಸ್ ಪ್ರಸ್ತಾಪಿಸಿದರು. ಆಗ ಅಂದು ನೀವು ಮಾತಾಡಬೇಕಿತ್ತು, ಯಾಕೆ ಮಾತಾಡಲಿಲ್ಲ ಎಂದ ಹೆಚ್ಡಿಕೆ ಗರಂ ಆದ್ರು. ಈ ವೇಳೆ ನರೇಂದ್ರಸ್ವಾಮಿ ವಿರುದ್ಧ ಸ್ಪೀಕರ್ ಯು.ಟಿ.ಖಾದರ್ ಸಹ ಸಿಟ್ಟಾದ್ರು. ಈ ವೇಳೆ ಮಧ್ಯಪ್ರವೇಶ ಮಾಡಿದ ಇಂಧನ ಇಲಾಖೆ ಸಚಿವ ಕೆ.ಜೆ.ಜಾರ್ಜ್, ಅಂದು ಗಣಪತಿ ಆತ್ಮಹತ್ಯೆ ಕೇಸ್ನಲ್ಲಿ ನನ್ನ ಮೇಲೆ ಆರೋಪ ಮಾಡಿದ್ರಿ. ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ ಸಿಬಿಐಗೆ ಕೊಟ್ಟು ಕ್ಲೀನ್ ಚಿಟ್ ಬಂತು. ಆಗ ತಪ್ಪಾಯ್ತು ಅಂತಾ ಸಾರಿ ಕೇಳಿದ್ರಾ ಎಂದು HDKಗೆ ಪ್ರಶ್ನೆ ಮಾಡಿದ್ರು. ನೀವು ಯಾರನ್ನು ಬೇಕಾದರೂ ತೇಜೋವಧೆ ಮಾಡಬಹುದಾ? ಪೆನ್ಡ್ರೈವ್ ಇದೆ ಅಂತಾ ತೋರಿಸಿದ್ರಲ್ಲಾ, ಪ್ರೊಡ್ರೂಸ್ ಮಾಡಿ ಎಂದರು. ಆಗ ಹೆಚ್ಡಿ ಕುಮಾರಸ್ವಾಮಿ ಮಾತನಾಡಿ, ನಾನು ಡೆತ್ ನೋಟ್ ಇಟ್ಟುಕೊಂಡು ಮಾತಾಡುತ್ತಿದ್ದೇನೆ. ನಾನು ಯಾವುದೇ ಸಚಿವರ ಹೆಸರು ಬಾಯಿಬಿಟ್ಟಿಲ್ಲ. ನಿಮ್ಮ ಹಣೆಬರಹ ಗೊತ್ತಿದೆ ಎಂದು ಜಾರ್ಜ್ಗೆ ಕುಮಾರಸ್ವಾಮಿ ತಿರುಗೇಟು ಕೊಟ್ಟರು. ಈ ವೇಳೆ ಕೆ.ಜೆ.ಜಾರ್ಜ್, ಕುಮಾರಸ್ವಾಮಿ ನಡುವೆ ಮಾತಿನಚಕಮಕಿ ನಡೆಯಿತು.
ಇದನ್ನೂ ಓದಿ: ಕೆಎಸ್ಆರ್ಟಿಸಿ ಬಸ್ ಚಾಲಕ ಆತ್ಮಹತ್ಯೆ ಯತ್ನಕ್ಕೂ ಮುನ್ನ ಬರೆದಿದ್ದ ಡೆತ್ ನೋಟ್ ಪತ್ತೆ: ಕೃಷಿ ಸಚಿವರ ಹೆಸರು ಉಲ್ಲೇಖ
ಶೂನ್ಯವೇಳೆಯಲ್ಲಿ ಬಸವರಾಜ ಬೊಮ್ಮಾಯಿ ಇದೇ ವಿಚಾರವನ್ನು ಪ್ರಸ್ತಾಪಿಸಿದರು. ಸೂಕ್ತ ತನಿಖೆ ಆಗಬೇಕು, ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಕೆಎಸ್ಆರ್ಟಿಸಿ ಬಸ್ ಚಾಲಕ ಆತ್ಮಹತ್ಯೆಗೆ ಯತ್ನಿಸುವ ಮುನ್ನ ಬರೆದ ಪತ್ರದಲ್ಲಿ ಸಚಿವರ ಹೆಸರು ಉಲ್ಲೇಖಿಸಿದ್ದಾರೆ. ಎಫ್ಐಆರ್ನಲ್ಲಿ ಸಚಿವರ ಹೆಸರು ಉಲ್ಲೇಖಿಸಬೇಕು. ಸಚಿವ ಎನ್.ಚಲುವರಾಯಸ್ವಾಮಿ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು. ಬೊಮ್ಮಾಯಿ ಹೇಳಿಕೆ ವೇಳೆ ಆಡಳಿತ ಪಕ್ಷದ ಶಾಸಕರಿಂದ ವಿರೋಧ ವ್ಯಕ್ತವಾಯಿತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆ.ಆರ್.ಪುರಂ ಠಾಣೆ ಇನ್ಸ್ಪೆಕ್ಟರ್ ಆಗಿದ್ದ ನಂದೀಶ್ ವಿಚಾರ ಪ್ರಸ್ತಾಪ ಮಾಡಿ ‘ಕೈ’ ಶಾಸಕರು ಚಲುವರಾಯಸ್ವಾಮಿ ಬೆಂಬಲಕ್ಕೆ ನಿಂತರು. ಹೀಗೆ ಮಾತಿಗೆ ಮಾತು ಚರ್ಚೆಗೆ ಚರ್ಚೆ ಬೆಳೆಯುತ್ತಾ ಹೋಯ್ತು. ಕೊನೆಗೆ ಕಲಾಪ ಮುಂದೂಡಲಾಯಿತು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ