ಬೆಂಗಳೂರು: ಮೂರು ತಿಂಗಳಿಂದ ಸರಿಯಾದ ಸಂಬಳವಿಲ್ಲದೇ ಸಾರಿಗೆ ನೌಕರರ ಬದುಕು ದುಸ್ತರವಾಗಿದೆ. ಕೇವಲ ಅರ್ಧ ಸಂಬಳವನ್ನು ಮಾತ್ರ ನಿಗಮಗಳು ನೀಡಿವೆ. ನವೆಂಬರ್ ತಿಂಗಳ ಅಂತ್ಯವಾದರೂ ರಾಜ್ಯದ 4 ನಿಗಮಗಳು ನೌಕರರಿಗೆ ವೇತನ ಹಾಕದ ಪರಿಣಾಮ, ಕೆಲಸಗಾರರು ಪರದಾಡುತ್ತಿದ್ದಾರೆ. ಈ ಕುರಿತು ನೌಕರರು ಅಳಲು ತೋಡಿಕೊಂಡಿದ್ದು, ಸರಿಯಾಗಿ ವೇತನ ನೀಡುವಂತೆ ಆಗ್ರಹಿಸಿದ್ದಾರೆ. ಸಂಬಳ ಸಮಸ್ಯೆಗೆ ಸರ್ಕಾರದ ಬಳಿ ಶಾಶ್ವತ ಪರಿಹಾರವೇ ಇಲ್ಲವೇ ಎಂದು ಪ್ರಶ್ನಿಸಿರುವ ನೌಕರರು, ರಾಜ್ಯದ 1 ಲಕ್ಷ 30 ಸಾವಿರ ನೌಕರರ ಸಂಕಟ ಸರ್ಕಾರಕ್ಕೆ ಏಕೆ ಅರ್ಥವಾಗುತ್ತಿಲ್ಲ ಎಂದು ಕೇಳಿದ್ದಾರೆ. ಆಗಸ್ಟ್ ,ಸೆಪ್ಟೆಂಬರ್ನ ಬಾಕಿ ಅರ್ಧ ಸಂಬಳ, ಅಕ್ಟೋಬರ್ ಪೂರ್ತಿ ಸಂಬಳ ಇನ್ನೂ ಸಿಕ್ಕಿಲ್ಲ. ಸಂಬಳ ಇಲ್ಲದೆ ರಾಜ್ಯದ ಸಾರಿಗೆ ನೌಕರರು ಬದುಕೋದು ಹೇಗೆ? ತಿಂಗಳ ಅರ್ಧ ಅರ್ಧ ಸಂಬಳದಲ್ಲಿ ಜೀವನ ಮಾಡೋಕೆ ಆಗುತ್ತದೆಯೇ ಎಂದು ನೌಕರರು ಅಳಲು ತೋಡಿಕೊಂಡಿದ್ದಾರೆ.
ನೌಕರರ ಸಂಬಳ ಸಮಸ್ಯೆ ಬಗೆಹರಿಸಲು ಸಾರಿಗೆ ಸಚಿವರು ಅಸಹಾಯಕರಾದರೇ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ. ಕಾರಣ, ಮೂರು ತಿಂಗಳಿಂದ ಸರಿಯಾದ ವೇತನ ಇಲ್ಲದೆ ನೌಕರರ ಬದುಕು ದುಸ್ಥರವಾಗಿದ್ದರೂ ಯಾರೊಬ್ಬರೂ ಆ ಕಡೆ ಗಮನವನ್ನೇ ಹರಿಸಿಲ್ಲ. ಎರಡೆರಡು ತಿಂಗಳು ಅರ್ಧ ಸಂಬಳ ಕೊಟ್ಟು ಸುಮ್ಮನೆ ಆದ ಸಾರಿಗೆ ನಿಗಮಗಳು ಸುಮ್ಮನಾಗಿವೆ. ಬಿಎಂಟಿಸಿ, ಕೆಎಸ್ಆರ್ಟಿಸಿ ಹಾಗೂ ನಾಲ್ಕು ಸಾರಿಗೆ ನಿಗಮ ನೌಕರರು ಸಂಬಳ ಇಲ್ಲದೆ ಪರದಾಟ ನಡೆಸುತ್ತಿದ್ದಾರೆ. ಕೊರೊನಾದಿಂದ ಸಂಪೂರ್ಣ ಆನ್ ಲಾಕ್ ಆಗಿ, ಬಿಎಂಟಿಸಿಯಲ್ಲಿ ನಿತ್ಯ ₹ 3.5 ಕೋಟಿ, ಕೆಎಸ್ಆರ್ಟಿಸಿಗೆ ನಿತ್ಯ ₹ 6.5 ಕೋಟಿ ಆದಾಯ ಬಂದರೂ ವೇತನಕ್ಕೆ ದುಡ್ಡು ಇಲ್ಲವೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ನವೆಂಬರ್ ತಿಂಗಳು ಮುಗಿಯುತ್ತಾ ಬಂದರೂ ನಿಗಮಗಳು ತಮ್ಮ ನೌಕರರಿಗೆ ಬಾಕಿ ಸಂಬಳವನ್ನು ನೀಡಿಲ್ಲ. ಮೂರು ತಿಂಗಳಿಂದ ನೌಕರರ ಕುಟುಂಬಗಳು ಕರೆಂಟ್ ಬಿಲ್, ನೀರಿನ ಬಿಲ್, ಮನೆ ಬಾಡಿಗೆ ಕಟ್ಟಿಲ್ಲ. ಈ ರೀತಿ ಸಂಬಳ ಆದರೆ ಜೀವನ ಮಾಡೋದು ಹೇಗೆ ಅಂತ ನೌಕರರು ಪ್ರಶ್ನೆ ಮಾಡಿದ್ದಾರೆ. ವೇತನಇಲ್ಲದೆ 1 ಲಕ್ಷ 30 ಸಾವಿರ ನೌಕರರು ಕುಟುಂಬಗಳು ಬದುಕುವುದು ಹೇಗೆ? ಕೊಟ್ಟಿರೋ ಅರ್ಧ ಸಂಬಳದಲ್ಲಿ ಎರಡು ತಿಂಗಳು ಜೀವನ ಮಾಡೋದು ಹೇಗೆ ಎಂಬ ಪ್ರಶ್ನೆಗೆ ಸಚಿವರು, ಅಧಿಕಾರಿಗಳು ಮೌನ ತಾಳಿದ್ದಾರೆ. ಬಿಎಂಟಿಸಿ, ಕೆಎಸ್ಆರ್ಟಿಸಿ, ವಾಯುವ್ಯ ಕಲ್ಯಾಣ ಸಾರಿಗೆ ನಿಗಮದ ನೌಕರರ ಬದುಕು ಮೂರಾಬಟ್ಟೆಯಾಗಿದ್ದರೂ ಕೂಡ, ವೇತನ ನೀಡದೇ ಸಾರಿಗೆ ನಿಗಮಗಳು ಕೈಕಟ್ಟಿ ಕುಳಿತಿವೆ!
ಇದನ್ನೂ ಓದಿ:
3 ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಮಸೂದೆ ಸಂಸತ್ತಿನಲ್ಲಿ ಸೋಮವಾರ ಮಂಡನೆ; ಬಿಜೆಪಿ ಸಂಸದರಿಗೂ ವಿಪ್ ಜಾರಿ