ಚಿರತೆ ಸೆರೆಗೆ ಮಾಸ್ಟರ್ ಪ್ಲಾನ್: ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಇಂದು ಬೃಹತ್ ಕಾರ್ಯಾಚರಣೆ
ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಪ್ರತ್ಯಕ್ಷಗೊಂಡಿದ್ದ ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದು, ಇಂದು ಬೃಹತ್ ಬಲೆಯೊಂದಿಗೆ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿ ಚಿರತೆ ಹಿಡಿಯುವ ಪ್ರಯತ್ನ ನಡೆಸಲಾಗುತ್ತಿದೆ.
ಬೆಳಗಾವಿ: ಜಿಲ್ಲೆಯ ಗಾಲ್ಫ್ ಮೈದಾನದಲ್ಲಿ ಪತ್ಯಕ್ಷಗೊಂಡಿದ್ದ ಚಿರತೆಯನ್ನು ಸೆರೆಹಿಡಿಯಲು ಹರಸಾಹಸ ಪಡುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆ ಸೆರೆಹಿಡಿಯುವ ನಿರತಂತರ ಪ್ರಯತ್ನದಲ್ಲಿ ತೊಡಗಿದ್ದಾರೆ. ಇದರ ಮುಂದುವರಿದ ಭಾಗವಾಗಿ ಅರಣ್ಯ ಇಲಾಖೆಯು ಚಿರತೆಯನ್ನು ಸೆರೆಹಿಡಿಯಲು ಮಾಸ್ಟರ್ ಪ್ಲಾನ್ ಒಂದನ್ನು ಸಿದ್ಧಪಡಿಸಿದ್ದು, ಈ ಯೋಜನೆಯಂತೆ ಇಂದು ಸಿಬ್ಬಂದಿಗಳು ಚಿರತೆಯನ್ನು ಸೆರೆ ಹಿಡಿಯುವ ಪ್ರಯತ್ನವನ್ನು ನಡೆಸಲಿದ್ದಾರೆ.
ಗಾಲ್ಫ್ ಮೈದಾನದಲ್ಲಿ ಚಿರತೆ ಪ್ರತ್ಯಕ್ಷಗೊಂಡು ಇಂದಿಗೆ 23 ದಿನಗಳು ಆಗಿವೆ, ಮೈದಾನದಲ್ಲಿ ಓಡಾಡಿ ಕಾಣೆಯಾದ ಚಿರತೆ ಇದುವರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳ ಕಣ್ಣಿಗೆ ಬಿದ್ದಿಲ್ಲ. ನಿರಂತರ ಕಾರ್ಯಾಚರಣೆ ಕೈಗೊಳ್ಳುತ್ತಿರುವ ಸಿಬ್ಬಂದಿಗಳು ಇದೀಗ ಮಾಸ್ಟರ್ ಪ್ಲಾನ್ನೊಂದಿಗೆ ಸೆರೆ ಹಿಡಿಯುವ ಪ್ರಯತ್ನವನ್ನು ನಡೆಸಲಿದ್ದಾರೆ. ಸಿದ್ಧಪಡಿಸಿದ ಮಾಸ್ಟರ್ ಪ್ಲಾನ್ನಂತೆ ಇಂದು 350 ಅರಣ್ಯ ಇಲಾಖೆ ಸಿಬ್ಬಂದಿಗಳು ಏಕಕಾಲದಲ್ಲಿ ಕಾರ್ಯಾಚರಣೆಗೆ ಇಳಿಯಲಿದ್ದಾರೆ.
250 ಎಕರೆ ಪ್ರದೇಶದಲ್ಲಿ ಸುಮಾರು 350 ಅರಣ್ಯ ಇಲಾಖೆ ಸಿಬ್ಬಂದಿಗಳು ಏಕಕಾಲದಲ್ಲಿ ಕೋಬಿಂಗ್ ಕಾರ್ಯಾಚರಣೆ ಆರಂಭಿಸಲಿದ್ದಾರೆ. ಕೋಬಿಂಗ್ ಕಾರ್ಯಾಚರಣೆ ಎಂದರೆ ಬಲೆ ಹಾಕಿ ಕಾರ್ಯಾಚರಣೆ ನಡೆಸುವುದಾಗಿದೆ. ಅಂದರೆ, ಒಂದು ಕಡೆಯಲ್ಲಿ ಬಲೆಯನ್ನು ಹಾಕಿ ಇನ್ನೊಂದು ಕಡೆಯಿಂದ ಸಿಬ್ಬಂದಿಗಳು ಕಾರ್ಯಾಚರಣೆ ಆರಂಭಿಸಿ ಚಿರತೆಯನ್ನು ಬಲೆಗೆ ಹಾಕುವ ಪ್ಲಾನ್ ಅನ್ನು ರೂಪಿಸಿಕೊಂಡಿದ್ದಾರೆ. ಈಗಾಗಲೇ ಗಾಲ್ಫ್ ಮೈದಾನದ ತಡೆಗೋಡೆ ಸುತ್ತ ಸುಮಾರು ಮೂರು ಕಿ.ಮೀ. ವರೆಗೆ ಬಲೆಯನ್ನು ಹಾಕಲಾಗಿದೆ. ಹನುಮಾನ್ ನಗರ, ಜಾಧವ್ ನಗರ ಭಾಗದ ಕಡೆಗಳಲ್ಲಿ ಸಿಬ್ಬಂದಿಗಳು ಚಿರತೆ ಸೆರೆ ಹಿಡಿಯುವ ಬಲೆ ಹಾಕಿದ್ದಾರೆ.
ಚಿರತೆ ಪ್ರತ್ಯಕ್ಷಗೊಂಡ ಸುತ್ತಮುತ್ತಲಿನ ಪ್ರದೇಶದಲ್ಲಿನ ಜನರಲ್ಲಿ ಆಂತಕ ಹೆಚ್ಚಿಸಿದ್ದು, ಚಿರತೆಯನ್ನು ಯಾವಾಗ ಸೆರೆ ಹಿಡಿಯಲಾಗೊತ್ತೋ ಎಂಬ ಚಿಂತೆಯಲ್ಲೇ ಕುಳಿತಿದ್ದಾರೆ. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇಂದು ಕೂಡ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸುಮಾರು 22 ಸರ್ಕಾರಿ, ಖಾಸಗಿ ಶಾಲೆಗಳಿಗೆ ಘೋಷಿಸಿದ್ದ ರಜೆಯನ್ನು ಮುಂದುವರಿಕೆ ಮಾಡಲಾಗಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:38 am, Sat, 27 August 22