ಲೋಕಾಯುಕ್ತ ಅಧಿಕಾರಿ ಅಕ್ರಮ ಸಾಬೀತು: ಐಪಿಎಸ್ ಶ್ರೀನಾಥ್ ಜೋಷಿ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಪತ್ರ

ಕರ್ನಾಟಕ ಲೋಕಾಯುಕ್ತವು ಐಪಿಎಸ್ ಅಧಿಕಾರಿ ಶ್ರೀನಾಥ್ ಜೋಷಿ ಮತ್ತು ಕಾನ್ಸ್ಟೇಬಲ್ ನಿಂಗಪ್ಪ ವಿರುದ್ಧದ ಭ್ರಷ್ಟಾಚಾರದ ಆರೋಪ ಸಾಬೀತಾಗಿದೆ ಎಂದು ಘೋಷಿಸಿದೆ. ಅವರು ಸರ್ಕಾರಿ ಅಧಿಕಾರಿಗಳಿಂದ ‘‘ಕೆಜಿ’’ ಎಂಬ ಕೋಡ್ ವರ್ಡ್ ಬಳಸಿ ಹಣ ವಸೂಲಿ ಮಾಡುತ್ತಿದ್ದರು. ನಿಂಗಪ್ಪ ಕ್ರಿಪ್ಟೋ ಕರೆನ್ಸಿಯಲ್ಲಿ ದೊಡ್ಡ ಮೊತ್ತ ಹೂಡಿಕೆ ಮಾಡಿದ್ದಾರೆ ಎಂಬುದು ತನಿಖೆಯಲ್ಲಿ ಬಹಿರಂಗಗೊಂಡಿದೆ ಎಂದು ಲೋಕಾಯುಕ್ತ ಪ್ರಕಟಣೆ ತಿಳಿಸಿದೆ.

ಲೋಕಾಯುಕ್ತ ಅಧಿಕಾರಿ ಅಕ್ರಮ ಸಾಬೀತು: ಐಪಿಎಸ್ ಶ್ರೀನಾಥ್ ಜೋಷಿ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಪತ್ರ
ಕರ್ನಾಟಕ ಲೋಕಾಯುಕ್ತ

Updated on: Jul 04, 2025 | 7:41 AM

ಬೆಂಗಳೂರು, ಜುಲೈ 4: ಕರ್ನಾಟಕ ಲೋಕಾಯುಕ್ತ (Karnataka Lokayukta) ಅಧಿಕಾರಿಯಿಂದಲೇ ಭ್ರಷ್ಟಾಚಾರ (Corruption) ಪ್ರಕರಣ ಇದೀಗ ಸಾಬೀತಾಗಿದ್ದು, ಕ್ರಮಕ್ಕೆ ಶಿಫಾರಸು ಮಾಡಿರುವುದಾಗಿ ಲೋಕಾಯುಕ್ತ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಬೆಂಗಳೂರು ನಗರ ಎಸ್​ಪಿಯಾಗಿದ್ದ ಐಪಿಎಸ್ ಅಧಿಕಾರಿ (IPS Officer) ಶ್ರೀನಾಥ್ ಜೋಷಿ ಹಾಗೂ ಕಾನ್ಸ್‌ಟೇಬಲ್ ನಿಂಗಪ್ಪ ಅಕ್ರಮವೆಸಗಿರುವುದು ದೃಢಪಟ್ಟಿದೆ. ಇವರಿಬ್ಬರೂ ಅಬಕಾರಿ, ಬಿಬಿಎಂಪಿ ಅಧಿಕಾರಿಗಳಿಂದ ಹಣ ವಸೂಲಿ ಮಾಡಿದ್ದಾರೆ ಎಂದು ಲೋಕಾಯುಕ್ತ ತಿಳಿಸಿದೆ. ಶ್ರೀನಾಥ್ ಜೋಷಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ.

ಲೋಕಾಯುಕ್ತ ಸಂಸ್ಥೆಯ ಹೆಸರು ದುರ್ಬಳಕೆ ಮಾಡಿಕೊಂಡು ಹಣ ಪಡೆದ ಬಗ್ಗೆ ರಹಸ್ಯ ಮಾಹಿತಿ ದೊರೆತ ಕೂಡಲೇ ಲೋಕಾಯುಕ್ತರು ಸಂಸ್ಥೆಯ ಪೊಲೀಸ್ ಅಧೀಕ್ಷಕರಿಗೆ ತನಿಖೆಗೆ ಆದೇಶಿಸಿದ್ದರು. ಅದರನ್ವಯ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ನಡೆಸಿದ ತನಿಖೆಯಲ್ಲಿ ಶ್ರೀನಾಥ್ ಜೋಷಿ ಹಾಗೂ ಕಾನ್ಸ್‌ಟೇಬಲ್ ನಿಂಗಪ್ಪ ಸರ್ಕಾರಿ ಅಧಿಕಾರಿಗಳಿಂದ ಹಣ ವಸೂಲಿ ಮಾಡಿರುವುದು ದೃಢಪಟ್ಟಿದೆ.

ಪ್ರಕರಣ ಸಂಬಧ ಕಾನ್ಸ್‌ಟೇಬಲ್ ನಿಂಗಪ್ಪ ಅಲಿಯಾಸ್ ನಿಂಗಪ್ಪ ಸಾವಂತನನ್ನು ಬಂಧಿಸಲಾಗಿದೆ ಎಂಬುದಾಗಿಯೂ ಲೋಕಾಯುಕ್ತ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ
ಬೆಂಗಳೂರು: ಅಪಾರ್ಟ್‌ಮೆಂಟ್​ನಲ್ಲಿ ಸಿಕ್ಕ ಅಸ್ಥಿಪಂಜರ ಪ್ರಕರಣಕ್ಕೆ ಟ್ವಿಸ್ಟ್
ಮತ್ತೊಂದು ಭ್ರಷ್ಟಾಚಾರ ಆರೋಪ: ಹಣ ಪಡೆದು ಮನೆ ಇದ್ದವರಿಗೇ ಮನೆ ಹಂಚಿಕೆ!
ಮೆಟ್ರೋ ದರ ಏರಿಕೆ ಪರಿಣಾಮ, ಬಿಎಂಟಿಸಿಗೆ ಹೆಚ್ಚುವರಿ 25 ಲಕ್ಷ ರೂ. ಆದಾಯ!
ಸರ್ಕಾರಿ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್‌ ಕೇಸ್​: ಸ್ಪೋಟಕ ಮಾಹಿತಿ ಬಹಿರಂಗ

ಕೋಡ್​​ವರ್ಡ್ ಮೂಲಕ ಹಣ ವಸೂಲಿ: ಕ್ರಿಪ್ಟೋ ಕರೆನ್ಸಿಯಲ್ಲಿ ಕೋಟ್ಯಂತರ ರೂ. ಹೂಡಿಕೆ

ಶ್ರೀನಾಥ್ ಜೋಷಿ ಹಾಗೂ ನಿಂಗಪ್ಪ ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ‘‘ಕೆಜಿ’’ ಎಂಬ ಕೋಡ್ ವರ್ಡ್ ಬಳಸಿಕೊಂಡು ಹಣ ವಸೂಲಿ ಮಾಡುತ್ತಿದ್ದುದು ತನಿಖೆಯಿಂದ ದೃಢಪಟ್ಟಿದೆ ಎಂದು ಲೋಕಾಯುಕ್ತ ತಿಳಿಸಿದೆ. ಅಕ್ರಮವಾಗಿ ಹಣ ವಸೂಲಿ ಮಾಡಿರುವುದು ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡುಬಂದಿದ್ದು, ನಿಂಗಪ್ಪ ಕ್ರಿಪ್ಟೋ ಕರೆನ್ಸಿಯಲ್ಲಿ 4.92 ಕೋಟಿ ರೂ. ಹೂಡಿಕೆ ಮಾಡಿದ್ದರು ಎಂಬುದನ್ನೂ ಲೋಕಾಯುಕ್ತ ತಿಳಿಸಿದೆ.

ಸರ್ಕಾರಿ ಅಧಿಕಾರಿಗಳನ್ನು ಬ್ಲ್ಯಾಕ್‌ಮೇಲ್‌ ಮಾಡಿ ಹಣ ವಸೂಲಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಂಗಪ್ಪರನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ, ಲೋಕಾಯುಕ್ತ ಎಸ್​​ಪಿಯಾಗಿದ್ದ ಶ್ರೀನಾಥ್ ಜೋಷಿ ಜತೆ ನಿರಂತರ ಸಂಪರ್ಕದಲ್ಲಿ ಇದ್ದ ವಿಚಾರ ತಿಳಿದುಬಂದಿತ್ತು. ಶ್ರೀನಾಥ್ ಜೋಷಿ ಜತೆ ಸಂಪರ್ಕದಲ್ಲಿದ್ದುಕೊಂಡೇ ನಿಂಗಪ್ಪ ಸರ್ಕಾರಿ ಅಧಿಕಾರಿಗಳನ್ನು ಹೆದರಿಸಿ ಅವರಿಂದ ಹಣ ಪಡೆದಿದ್ದರು ಎಂದು ಲೋಕಾಯುಕ್ತ ತಿಳಿಸಿದೆ.

ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್‌ ಕೇಸ್​: ಸ್ಪೋಟಕ ಮಾಹಿತಿ ಬಹಿರಂಗ

ಶ್ರೀನಾಥ್ ಜೋಷಿ ಹಾಗೂ ನಿಂಗಪ್ಪ ವಾಟ್ಸ್​ಆ್ಯಪ್ ಮೂಲಕ ಕರೆ ಮಾಡುತ್ತಿದ್ದು, ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಆ ಕುರಿತ ಸಾಕ್ಷ್ಯಗಳನ್ನೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸಿಕೊಡಲಾಗಿದೆ ಎಂದು ಲೋಕಾಯುಕ್ತ ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ