Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಬಿಸಿ: ರಾಜ್ಯದ ಹಲವಡೆ ದಾಳಿ

ಲೋಕಾಯುಕ್ತ ಅಧಿಕಾರಿಗಳು ನವೆಂಬರ್ 12ರಂದು ಬೆಳಗ್ಗೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಏಕಕಾಲಿಕ ದಾಳಿ ನಡೆಸಿದ್ದಾರೆ. ಸರ್ಕಾರಿ ಅಧಿಕಾರಿಗಳ ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಈ ದಾಳಿಗಳು ನಡೆದಿವೆ. ಬೀದರ್, ಬೆಳಗಾವಿ, ಧಾರವಾಡ, ಗದಗ, ದಾವಣಗೆರೆ ಮತ್ತು ಮೈಸೂರಿನ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದೆ. ಅನೇಕ ಅಧಿಕಾರಿಗಳನ್ನು ಪ್ರಶ್ನಿಸಲಾಗಿದೆ ಮತ್ತು ದಾಖಲೆಗಳನ್ನು ಪರಿಶೀಲಿಸಲಾಗಿದೆ.

ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಬಿಸಿ: ರಾಜ್ಯದ ಹಲವಡೆ ದಾಳಿ
ಲೋಕಾಯುಕ್ತ
Follow us
ಸುರೇಶ ನಾಯಕ
| Updated By: ವಿವೇಕ ಬಿರಾದಾರ

Updated on: Nov 12, 2024 | 10:45 AM

ಬೆಂಗಳೂರು, ನವೆಂಬರ್​ 12: ಲೋಕಾಯುಕ್ತ (Lokayukta) ಅಧಿಕಾರಿಗಳು ಬೆಳ್ಳಂಬೆಳಗ್ಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಧಾರವಾಡದ ಮೂರು ಕಡೆ, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಎರಡು, ಗದಗ ಜಿಲ್ಲೆ ನರಗುಂದದಲ್ಲಿ ಒಂದು, ಬೀದರ್​, ದಾವಣಗೆರೆ ಮತ್ತು ಮೈಸೂರಿನ ಒಂದು ಕಡೆ ದಾಳಿ ಮಾಡಿ, ಪರೀಶಲನೆ ನಡೆಸಿದ್ದಾರೆ. ಸರ್ಕಾರಿ ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.

ಬೀದರ್ ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ರವೀಂದ್ರ ರೊಟ್ಟೆ ನಿವಾಸ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆ ಪರಿಶೀಲಿಸುತ್ತಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಹನುಮಂತ ನೇತೃತ್ವದಲ್ಲಿ ದಾಳಿ ನಡೆದಿದೆ. ರವೀಂದ್ರ ರೊಟ್ಟೆ ಈ ಹಿಂದೆ ಬೀದರ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿರೆಸ್ತಾದಾರ ಹಾಗೂ ಬಿಬಿಎಂಪಿಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೋರಗಾಂವ ಗ್ರಾಮ ಲೆಕ್ಕಾಧಿಕಾರಿ ವಿಠ್ಠಲ್ ಡವಳೇಶ್ವರ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ವಿಠ್ಠಲ್ ಡವಳೇಶ್ವರ ಈ‌ ಹಿಂದೆ ಅಕ್ರಮವಾಗಿ 1.10 ಕೋಟಿ ಹಣವನ್ನು ಚಿಕ್ಕೋಡಿಯಿಂದ ಬಾಗಲಕೋಟೆಗೆ ಸಾಗಿಸುವಾಗ ಸಿಕ್ಕಿಬಿದ್ದಿದ್ದರು. ಇದರ ಮುಂದುವರೆದ ಭಾಗವಾಗಿ ‌ದಾಳಿ ನಡೆದಿದೆ ಎನ್ನಲಾಗಿದೆ.

ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಮೈಸೂರು ನಗರ ಪಾಲಿಕೆಯ ವಲಯ ಆಯುಕ್ತ ನಾಗೇಶ್ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇನ್ನು, ಶ್ರೀರಂಗಪಟ್ಟಣದಲ್ಲಿರುವ ನಾಗೇಶ್​ನ ಮತ್ತೊಂದು ಮನೆ ಮೇಲೂ ಲೋಕಾಯುಕ್ತ ರೇಡ್ ಮಾಡಿದೆ. ನಾಗೇಶ್ ಹಿಂದೆ ಶ್ರೀರಂಗಪಟ್ಟಣ ತಹಶೀಲ್ದಾರ್ ಆಗಿದ್ದರು.

ಇದನ್ನೂ ಓದಿ: ಲೋಕಾಯುಕ್ತ ಎಡಿಜಿಪಿಗೆ ಬೆದರಿಕೆ ಆರೋಪ: ಕುಮಾರಸ್ವಾಮಿಗೆ ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್​

ಧಾರವಾಡದ ಗಾಂಧಿನಗರ ಬಡಾವಣೆಯಲ್ಲಿರುವ ಕೆಐಎಡಿಬಿ ಎಇಇ ಗೋವಿಂದಪ್ಪ ಭಜಂತ್ರಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮನೆ ಎದುರಿನಲ್ಲಿ ನಿಲ್ಲಿಸಿದ್ದ ಎರಡು ಕಾರುಗಳಲ್ಲೂ ಪರಿಶೀಲನೆ ನಡೆಸಿದ್ದಾರೆ. ಗೋವಿಂದಪ್ಪ ಭಜಂತ್ರಿಗೆ ಸೇರಿದ ಸವದತ್ತಿ ತಾಲೂಕಿನ ಹೂಲಿ, ಉಗರಗೋಳ ಫಾರ್ಮ್​ಹೌಸ್ ಧಾರವಾಡದ ತೇಜಸ್ವಿನಗರ ಬಡಾವಣೆಯ ಅಳಿಯನ ಮನೆ, ಲಕ್ಕಮನಹಳ್ಳಿ ಬಡಾವಣೆ ಕೆಐಎಡಿಬಿ ಕಚೇರಿ ಮೇಲೂ ದಾಳಿ ಮಾಡಿದ್ದಾರೆ. ಹಾಗೇ ನರಗುಂದದಲ್ಲಿರುವ ಸಹೋದರನ ಮನೆ ಮೇಲೂ ಡಿವೈಎಸ್​ಪಿ ವೆಂಕನಗೌಡ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆದಿದೆ.

ದಾವಣಗೆರೆಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸಹಾಯ ನಿರ್ದೇಶಕ ಕಮಲ್ ರಾಜ್ ಮನೆಯ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ದಾವಣಗೆರೆ ನಗರದ ಡಿಸಿಎಂ ಪಕ್ಕದಲ್ಲಿ ಬರುವ ಶಕ್ತಿನಗರದ ಮೂರನೇ ಕ್ರಾಸ್​ನಲ್ಲಿ ಕಮಲ್​ ರಾಜ್​ ಮನೆ ಇದೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ನೇತ್ರತ್ವದಲ್ಲಿ ಇನ್ಸ್ ಪೆಕ್ಟರ್​ಗಳಾದ ಮಧುಸೂದನ್ ಹಾಗೂ ಪ್ರಭು ಸೇರಿದಂತೆ ಹತ್ತಕ್ಕೂ ಹೆಚ್ಚು ಸಿಬ್ಬಂದಿಗಳಿಂದ ದಾಳಿ ನಡೆದಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ