ಬೆಂಗಳೂರು, ಮಾರ್ಚ್ 6: ಬೆಂಗಳೂರು (Bangalore) ಸೇರಿದಂತೆ ಕರ್ನಾಟಕದ 7 ಜಿಲ್ಲೆಗಳಲ್ಲಿ ಗುರುವಾರ ಬೆಳಗ್ಗೆ ಲೋಕಾಯುಕ್ತ ದಾಳಿ (Lokayukta Raid) ನಡೆದಿದೆ. ಬೆಂಗಳೂರು, ಕೋಲಾರ, ಕಲಬುರಗಿ, ದಾವಣಗೆರೆ, ತುಮಕೂರು, ಬಾಗಲಕೋಟೆ ಹಾಗೂ ವಿಜಯಪುರದಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. 8 ಮಂದಿ ಅಧಿಕಾರಿಗಳ ನಿವಾಸ, ಕಚೇರಿಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಬೆಂಗಳೂರಿನ DPAR ಚೀಫ್ ಇಂಜಿನಿಯರ್ ಟಿ.ಡಿ.ನಂಜುಡಪ್ಪ, ಬಿಬಿಎಂಪಿಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಹೆಚ್.ಬಿ.ಕಲ್ಲೇಶಪ್ಪ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.
ಕೋಲಾರದಲ್ಲಿರುವ ಬೆಸ್ಕಾಂ ಎಇಇ ಜಿ.ನಾಗರಾಜ್, ಕಲಬುರಗಿ ಲೋಕೋಪಯೋಗಿ ಚೀಫ್ ಇಂಜಿನಿಯರ್ ಜಗನ್ನಾಥ್, ದಾವಣಗೆರೆ ಫುಡ್ ಸೇಫ್ಟಿ ಅಧಿಕಾರಿ ಜಿ.ಎಸ್.ನಾಗರಾಜು, ಬಾಗಲಕೋಟೆ ಪಂಚಾಯತ್ ರಾಜ್ ಇಲಾಖೆ ಅಕೌಂಟೆಂಟ್ ಮಲ್ಲೇಶ್, ತುಮಕೂರು ಜಿಲ್ಲೆ ಶಿರಾ ತಾಲೂಕಿನ ತಾವರೆಕೆರೆ ಪಿಹೆಚ್ಸಿ ವೈದ್ಯ ಜಗದೀಶ್ ಅವರ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿದೆ.
ಕೋಲಾರದಲ್ಲಿ ಬೆಸ್ಕಾಂ AEE ಜಿ.ನಾಗರಾಜ್ ಮನೆ ಹಾಗೂ ಅವರಿಗೆ ಸೇರಿದ ಮೂರು ಕಡೆ ದಾಳಿ ನಡೆದಿದೆ. ನಾಗರಾಜ್ ಪ್ರಸ್ತುತ ಬೆಂಗಳೂರು ರಾಜಾಜಿನಗರ AEE ಬೆಸ್ಕಾಂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾಗರಾಜ್ ಅವರ ನಿವಾಸ, ಕೆ.ಆರ್.ಪುರಂ ಬಳಿಯ ಪ್ರಿಯದರ್ಶಿನಿ ಬಡಾವಣೆಯಲ್ಲಿನ ಮನೆ, ರಾಜಾಜಿನಗರ ಬೆಸ್ಕಾಂ ಕಚೇರಿ, ಅವರ ಸಂಬಂಧಿಕರೊಬ್ಬರ ಮನೆ ಮೇಲೆ ದಾಳಿ ನಡೆದಿದೆ.
ನಾಗರಾಜ್ ಮೂಲತಃ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಮಲೇ ಮಹದೇಶ್ವರ ಬೆಟ್ಟದವರು. ಲೋಕಾಯುಕ್ತ ದಾಳಿ ವೇಳೆ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ನಾಗರಾಜ್ ಕೊಳ್ಳೇಗಾಲ ಬಳಿ 6 ಎಕರೆ ಜಮೀನು, ಬೆಂಗಳೂರಿನಲ್ಲಿ ಒಂದು ಮನೆ, ಎರಡು ನಿವೇಶನಗಳು, ಕೋಲಾರ ತಾಲ್ಲೂಕು ನರಸಾಪುರ ಬಳಿ ಭೂಮಿ ಹೊಂದಿರುವುದು ಗೊತ್ತಾಗಿದೆ. ಕೋಲಾರದಲ್ಲಿ ಬೆಸ್ಕಾಂ ಎಂಜಿನಿಯರಿಂಗ್ ಆಗಿ ನಾಜರಾಜ್ ಕೆಲಸ ಮಾಡಿದ್ದರು.
ಬಾಗಲಕೋಟೆಯಲ್ಲಿ ಪಂಚಾಯತ್ ರಾಜ್ ಇಲಾಖೆ ಅಕೌಂಟೆಂಟ್ ಮಲ್ಲೇಶ್ ಅವರ ಬಾಗಲಕೋಟೆ ಕಚೇರಿ, ಬೀಳಗಿ ತಾಲೂಕಿನ ತಳ್ಳಿಕೇರಿ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ನಡೆಯುತ್ತಿದೆ. ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಲೋಕಾಯುಕ್ತ ಡಿವೈಎಸ್ಪಿ ಸಿದ್ದೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಇದನ್ನೂ ಓದಿ: ಕೆಪಿಎಸ್ಸಿ ಅಕ್ರಮಕ್ಕೆ ಬ್ರೇಕ್ ಹಾಕಲು ಕಾಯ್ದೆ ತಿದ್ದುಪಡಿಗೆ ಸರ್ಕಾರ ನಿರ್ಧಾರ: ಏನೇನು ಬದಲಾವಣೆ? ಇಲ್ಲಿದೆ ವಿವರ
ತುಮಕೂರಿನಲ್ಲಿ ವೈದ್ಯ ಡಾ.ಜಗದೀಶ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತಾವರೆಕೆರೆಯಲ್ಲಿರುವ ತಾವರೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯನಾಗಿರುವ ಜಗದೀಶ್ ಅವರು ತುಮಕೂರಿನ ಮಂಜುನಾಥ್ ನಗರದಲ್ಲಿ ಹೊಂದಿರುವ ಜಗದೀಶ್ ಕಾಂಪ್ಲೆಕ್ಸ್, ಶಿರಾ ತಾಲೂಕಿನ ಯಲ್ಪೆನಹಳ್ಳಿರುವ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಜಗದೀಶ್ ಪತ್ನಿ ರೂಪಾ, ಸೋದರ ಕಾಂತರಾಜ್ ಮನೆ ಮೇಲೂ ರೇಡ್ ಮಾಡಲಾಗಿದೆ. ಶಿರಾ ತಾಲೂಕಿನ ಬರಗೂರಿನಲ್ಲಿ ತಾಯಿಯ ಹೆಸರಿನಲ್ಲಿ ಆಸ್ತಿ ಮಾಡಿರುವುದು ದಾಳಿ ವೇಳೆ ಪತ್ತೆಯಾಗಿದೆ.
Published On - 8:15 am, Thu, 6 March 25