ಚಿಕ್ಕಬಳ್ಳಾಪುರದಲ್ಲೊಂದು ಅಮಾನವೀಯ ಘಟನೆ: ತಾಯಿ ಅಂತ್ಯಕ್ರಿಯೆಗೆ ಹಣಕ್ಕೆ ಬೇಡಿಕೆ ಇಟ್ಟ ಮಕ್ಕಳು
ಚಿಕ್ಕಬಳ್ಳಾಪುರದಲ್ಲಿ ಆಸ್ತಿ ವಿವಾದದಿಂದಾಗಿ ತಾಯಿಯ ಅಂತ್ಯಕ್ರಿಯೆಗೆ ಗಂಡು ಮಕ್ಕಳು ಅಡ್ಡಿಪಡಿಸಿದ ಘಟನೆ ನಡೆದಿದೆ. ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ನಿರಾಕರಿಸಿದ ಗಂಡು ಮಕ್ಕಳು, ತಾಯಿಯ ಅಂತ್ಯಕ್ರಿಯೆಯನ್ನೂ ತಡೆಯಲು ಯತ್ನಿಸಿದ್ದಾರೆ. ತಹಶೀಲ್ದಾರರ ಮಧ್ಯಸ್ಥಿಕೆಯಿಂದ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಅಂತಿಮ ವಿಧಿವಿಧಾನಗಳನ್ನು ಹೆಣ್ಣು ಮಕ್ಕಳೇ ಮಾಡಿಮುಗಿಸಿದ್ದಾರೆ.

ಚಿಕ್ಕಬಳ್ಳಾಪುರ, ಮಾರ್ಚ್ 05: ಗಂಡು ಮಕ್ಕಳೇ ಬೇಕು, ನಮ್ಮನ್ನ ಸಾಕುತ್ತಾರೆ, ಸತ್ತಾಗ ಅಂತಿಮ ವಿಧಿವಿಧಾನಗಳನ್ನ ಮಾಡಿ ಅಂತ್ಯಕ್ರಿಯೆ ಮಾಡಿ ಮಣ್ಣು ಮಾಡ್ತಾರೆ ಅನ್ನೋದು ತಂದೆ ತಾಯಿಯ (Mother) ನಂಬಿಕೆ. ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆಗೆ ಹೋಗುತ್ತಾರೆ. ನಮ್ಮನ್ನ ನೋಡಲ್ಲ ಸಾಕಲ್ಲ ಅನ್ನೋ ಭಾವನೆ. ಹಾಗಾಗಿ ಗಂಡು ಮಕ್ಕಳೇ ಬೇಕು ಅಂತ ಅದೆಷ್ಟೋ ದಂಪತಿ ದೇವರಿಗೆ ಹರಕೆ ಹೊತ್ತು ಗಂಡು ಮಕ್ಕಳನ್ನು ಪಡೆಯುತ್ತಾರೆ. ಆದರೆ ಇಲ್ಲಿ ಗಂಡು ಮಕ್ಕಳೇ ಹೆತ್ತ ತಾಯಿಯ ಶವವನ್ನ ಉಳೋಕೆ ಬಿಡದೆ ಅಡ್ಡಿ ಮಾಡಿದ ಅಮಾನವೀಯ ಘಟನೆ ನಡೆದಿದೆ.
ಗಂಡು ಮಕ್ಕಳೇ ಹೆತ್ತ ತಾಯಿಯ ಶವ ಉಳೋಕು ಅಡ್ಡಿ ಪಡಿಸಿರುವಂತಹ ಅಮಾನವೀಯ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ದೊಡ್ಡಕುರಗೋಡು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಅನಂತ ಎಂಬಾಕೆಗೆ 4 ಜನ ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳಿದ್ದು, ಗಂಡ ತೀರಿಕೊಂಡಿದ್ದಾರೆ. ಆದರೆ ಅಜ್ಜಿಯ ಹೆಸರಿನಲ್ಲಿದ್ದ ಎರಡು ಎಕೆರೆಯ ಆಸ್ತಿ ಕೆಐಎಡಿಬಿ ಸ್ವಾಧೀನ ಮಾಡಿಕೊಂಡಿದ್ದು, 1 ಕೋಟಿ ರೂಪಾಯಿ ಪರಿಹಾರ ಬಂದಿತ್ತಂತೆ. ಆದರೆ ಅದರಲ್ಲಿ ನಯಾ ಪೈಸೆ ಹೆಣ್ಣು ಮಕ್ಕಳಿಗೆ ಕೊಡದೆ ಗಂಡು ಮಕ್ಕಳೇ ಪಡೆದುಕೊಂಡಿದ್ರಂತೆ.
ಇದನ್ನೂ ಓದಿ: ಗೃಹಿಣಿ ಸಾವು: ಫೋನ್ ಮಾಡಿ ಕರೆದ್ರೂ ಪ್ರಿಯಕರ ಮನೆಗೆ ಬರದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಳೇ?
ಅಣ್ಣಂದಿರ ನಡೆ ಖಂಡಿಸಿ 4 ಜನ ಹೆಣ್ಣು ಮಕ್ಕಳು ಕೋರ್ಟ್ ಮೊರೆ ಹೋಗಿದ್ದು 40 ಲಕ್ಷ ರೂಪಾಯಿ ಹಣ ನ್ಯಾಯಾಲಯದ ಆದೇಶದ ಮೇರೆಗೆ ಫ್ರೀಜ್ ಮಾಡಿಸಿದ್ದಾರಂತೆ. ಇದೇ ವಿಚಾರದಲ್ಲಿ ಗಂಡು ಮಕ್ಕಳು ಹಾಗೂ ಹೆಣ್ಣುಮಕ್ಕಳ ನಡುವೆ ಆಸ್ತಿ ಹಣಕಾಸಿನ ವಿವಾದ ತಲೆದೋರಿದ್ದು, ಮೃತ ಅಜ್ಜಿ ಹೆಣ್ಣು ಮಕ್ಕಳಿಗೂ ಪಾಲು ಕೊಡಬೇಕು ಅಂತ ಹೆಣ್ಣು ಮಕ್ಕಳ ಮನೆ ಕಡಗತ್ತೂರಿನಲ್ಲೇ ವಾಸವಾಗಿದ್ದಳು. ಆದರೆ ಈಗ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಅನಂತಕ್ಕ ಮೃತಪಟ್ಟಿದ್ದು, ಮೃತದೇಹವನ್ನ ಅನಂತಕ್ಕ ಗಂಡನನ್ನು ಮಣ್ಣು ಮಾಡಿದ್ದ ಗೋರಿ ಪಕ್ಕದಲ್ಲೇ ಮಾಡಬೇಕು ಎಂಬುವುದು ಅಜ್ಜಿಯ ಕೊನೆಯಾಸೆ ಈಡೇರಿಸಬೇಕು ಅಂತ ಮಣ್ಣು ಮಾಡಲು ಬಂದ ಹೆಣ್ಣುಮಕ್ಕಳಿಗೆ ಅಣ್ಣಂದಿರು ಅಡ್ಡಿ ಮಾಡಿದ್ದಾರಂತೆ. ಮಣ್ಣು ಮಾಡಲು ಬಂದ್ರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ರಂತೆ. ಇಲ್ಲ ಅಂದ್ರೆ 40 ಲಕ್ಷ ರೂ ಹಣ ವಾಪಾಸ್ ಕೊಡಿ ಅಂತ ಡಿಮ್ಯಾಂಡ್ ಮಾಡಿದ್ರು ಅಂತ ಆರೋಪಿಸಿದ್ದಾರೆ.
ಇನ್ನೂ ತಾಯಿಯ ಅಂತ್ಯಕ್ರಿಯೆಗೆ ಸ್ವತಃ ಹೆತ್ತ ಗಂಡು ಮಕ್ಕಳಾದ ನಟರಾಜ್ ಹಾಗೂ ನಾರಾಯಣಪ್ಪ ಅಡ್ಡಿ ಮಾಡಿದ ಕಾರಣ ದಿಕ್ಕು ತೋಚದ ಹೆಣ್ಣುಮಕ್ಕಳು, ಅಜ್ಜಿಯ ಶವದ ಸಮೇತ ಸ್ಥಳೀಯ ಪೊಲೀಸ್ ಠಾಣೆ ಬಳಿ ಹೋಗಿ ಅವಲತ್ತುಕೊಂಡಿದ್ದಾರೆ. ಕೂಡಲೇ ವಿಚಾರ ತಿಳಿದ ಗೌರಿಬಿದನೂರು ತಹಶೀಲ್ದಾರ್ ಮಹೇಶ್ ಪತ್ರಿ ಗಮನಕ್ಕೂ ತರಲಾಗಿದ್ದು, ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್, ಜೆಸಿಬಿ ಸಮೇತ ಗ್ರಾಮಕ್ಕೆ ತೆರಳಿ ಗುಂಡಿ ತೋಡಿಸಿ ಅಜ್ಜಿಯ ಅಂತಿಮ ಆಸೆಯಂತೆ ಗಂಡನ ಗೋರಿಯ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಸಿಕೊಟ್ಟಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಮನೆ ದರೋಡೆಗೆ ಪೊಲೀಸ್ನಿಂದಲೇ ಟ್ರೈನಿಂಗ್! ಆರೋಪಿ ಅಂದರ್
ಇನ್ನೂ ಹೆತ್ತ ತಾಯಿಯ ಅಂತಿಮ ವಿಧಿವಿಧಾನ ನಡೆದ್ರೂ ಸ್ಥಳಕ್ಕೆ ಗಂಡು ಮಕ್ಕಳು ಕಾಲಿಟ್ಟಲ್ಲ. ಕನಿಷ್ಟ ತಾಯಿಯ ಮುಖವನ್ನೂ ನೋಡಿಲ್ಲ. ಸತ್ತಾಗ ಮಾಡುವ ಅಂತಿಮ ವಿಧಿವಿಧಾನಗಳನ್ನ ಹೆಣ್ಣು ಮಕ್ಕಳೇ ಮಾಡಿಮುಗಿಸಿದ್ದಾರೆ. ಅಂತಿಮವಾಗಿ ಇವರೆಂಥಾ ಗಂಡು ಮಕ್ಕಳು ಅಂತ ಜನ ಬೇಸರ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.