ಆಶ್ಲೇಷ ಪೂಜೆಗಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹರಿದುಬಂತು ಭಕ್ತಸಾಗರ: ಟಿಕೆಟ್ ಪಡೆಯಲು ಜನರ ಪರದಾಟ
ದೇಗುಲದ ಆಡಳಿತ ಮಂಡಳಿ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ನಿಲ್ಲಿಸಿದ್ದ ಹಿನ್ನೆಲೆಯಲ್ಲಿ ಪೂಜೆಯ ಟಿಕೆಟ್ ಪಡೆಯಲು ನೂರಾರು ಭಕ್ತರು ಮಧ್ಯರಾತ್ರಿ 12 ಗಂಟೆಯಿಂದಲೇ ಸರತಿಸಾಲಿನಲ್ಲಿ ನಿಲ್ಲಬೇಕಾಯ್ತು ಎಂದು ತಿಳಿದುಬಂದಿದೆ.

ದಕ್ಷಿಣ ಕನ್ನಡ: ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಸುಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ಪೂಜೆ ನೆರವೇರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಹಾಗಾಗಿ, ದೇವಸ್ಥಾನದ ಸುತ್ತಮುತ್ತ ಜನಜಂಗುಳಿ ಕಾಣಿಸಿತು.
ಈ ನಡುವೆ, ಪೂಜೆಗಾಗಿ ಟಿಕೆಟ್ ಪಡೆಯಲು ದೇಗುಲದ ಆಡಳಿತ ಮಂಡಳಿ ಸೂಚನೆ ನೀಡಿತ್ತು. ಹೀಗಾಗಿ, ಟಿಕೆಟ್ ಕೌಂಟರ್ ಎದುರು ಮಾರುದ್ದ ಕ್ಯೂ ಕಂಡುಬಂತು. ಈ ಸರತಿಸಾಲು, ಆಂಜನೇಯನ ಬಾಲದಂತೆ ನಿಧಾನವಾಗಿ ಬೆಳೆದು ದೇವಸ್ಥಾನದ ಮುಂದಿರುವ ರಥ ಬೀದಿಗೆ ಬಂದು ನಿಂತಿತ್ತು. ನೂರಾರು ಭಕ್ತರು ಸರತಿಸಾಲಿನಲ್ಲಿ ನಿಂತಿರುವುದು ಕಂಡುಬಂತು.
ದೇಗುಲದ ಆಡಳಿತ ಮಂಡಳಿ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ನಿಲ್ಲಿಸಿದ್ದ ಹಿನ್ನೆಲೆಯಲ್ಲಿ ಪೂಜೆಯ ಟಿಕೆಟ್ ಪಡೆಯಲು ನೂರಾರು ಭಕ್ತರು ಮಧ್ಯರಾತ್ರಿ 12 ಗಂಟೆಯಿಂದಲೇ ಸರತಿಸಾಲಿನಲ್ಲಿ ನಿಲ್ಲಬೇಕಾಯ್ತು ಎಂದು ತಿಳಿದುಬಂದಿದೆ. ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆಯನ್ನು ರದ್ದುಪಡಿಸಿ ಕ್ಯೂನಲ್ಲಿ ಟಿಕೆಟ್ಗಾಗಿ ಪರದಾಡುವ ಪರಿಸ್ಥಿತಿ ಉಂಟುಮಾಡಿದ ಆಡಳಿತ ಮಂಡಳಿ ವಿರುದ್ಧ ಭಕ್ತರು ಅಸಮಾಧಾನ ವ್ಯಕ್ತಪಡಿಸಿದರು.