10 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನ ಹಿಡಿದುಕೊಟ್ಟ ಎಐ ಕ್ಯಾಮೆರಾ: ಹೇಗೆ ಗೊತ್ತಾ?

ಟೈಮ್ ಕೆಟ್ಟರೆ ಹಗ್ಗ ಕೂಡ ಹಾವಾಗುತ್ತೆ ಎನ್ನುವ ಮಾತು ಇವನಿಗೆ ಪಕ್ಕ ಸೂಟ್ ಆಗುತ್ತೆ.‌ ಅರೆಸ್ಟ್ ಆಗಿ ಬೇಲ್ ಪಡೆದು ನಂತರ ಕೋರ್ಟ್ ಕಡೆ ಮುಖ ಹಾಕಿರಲಿಲ್ಲ.‌ ಪೊಲೀಸರಿಗೆ ಹುಡುಕಿ‌ ಹುಡುಕಿ ಸಾಕಾಗಿತ್ತು. ಆದರೆ ಇದೀಗ ಕೊನೆಗೆ ತಾನೇ ಹೋಗಿ ಪೊಲೀಸರ ಬಲೆ‌ಗೆ ಬಿದ್ದಿದ್ದಾನೆ. ಐನಾತಿ ಚೋರ AI ಕ್ಯಾಮರಾದಿಂದ ಸಿಕ್ಕಿಬಿದ್ದಿದ್ದಾನೆ. ಹಾಗಾದ್ರೆ, ಏನಿದು ಪ್ರಕರಣ? ಯಾರದು ಐನಾತಿ ಚೋರಾ? ಸಿಕ್ಕಿಬಿದ್ದಿದ್ಹೇಗೆ ಎನ್ನುವ ವಿವರ ಇಲ್ಲಿದೆ.

10 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನ ಹಿಡಿದುಕೊಟ್ಟ ಎಐ ಕ್ಯಾಮೆರಾ: ಹೇಗೆ ಗೊತ್ತಾ?
Afroz Pasha
Updated By: ರಮೇಶ್ ಬಿ. ಜವಳಗೇರಾ

Updated on: Feb 18, 2025 | 10:14 PM

ಬೆಂಗಳೂರು, (ಫೆಬ್ರವರಿ 18): ದರೋಡೆ ಮಾಡಿ ಬಿಂದಾಸ್ ಆಗಿದ್ದ. ಅರೆಸ್ಟ್ ವಾರೆಂಟ್ ಜಾರಿಯಾಗಿದ್ದರೂ ಅದು ಅದಕ್ಕೆ ಕ್ಯಾರೇ ಎನ್ನದೇ ರಾಜಾರೋಷವಾಗಿ ಓಡಾಡಿಕೊಂಡಿದ್ದ. ಒಂದಲ್ಲ, ಎರಡಲ್ಲ ಬರೋಬ್ಬರಿ 10 ವರ್ಷಗಳಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಕಣ್ಣಾಮುಚ್ಚಾಲೆ ಆಟವಾಡಿಸುತ್ತಿದ್ದ. ಆದ್ರೆ, ಈಗ ಖದೀಮ ತಾನಾಗಿಯೇ ಬಂದು ಲಾಕ್ ಆಗಿದ್ದಾನೆ. ಈತನ ಹೆಸರು ಅಫ್ರೋಜ್ ಪಾಷಾ. 10 ವರ್ಷದ ಹಿಂದೆ ಡಕಾಯಿತಿ ಕೇಸ್‌ನಲ್ಲಿ ಜೈಲು ಸೇರಿ ಬೇಲ್ ಪಡೆದಿದ್ದ. ಆದ್ರೆ, ಕೇಸ್ ಟ್ರಯಲ್ ವೇಳೆ ಕೋರ್ಟ್​ಗೆ ಹಾಜರಾಗದೆ ಕಳ್ಳಾಟವಾಡುತ್ತಿದ್ದ. ಕೋರ್ಟ್ ವಾರೆಂಟ್ ಜಾರಿ ಮಾಡಿದ್ದೂ ಕೇರ್ ಮಾಡಿರಲಿಲ್ಲ. ಬೆಂಗಳೂರಿನ ಮಡಿವಾಳ‌ ಪೊಲೀಸರು ಅಫ್ರೋಜ್​ಗಾಗಿ ಹುಡುಕಿ‌-ಹುಡುಕಿ‌ ಸೋತು ಹೋಗಿದ್ದರು. ಆದರೀಗ ತಾನಾಗಿಯೇ ಬಂದು ಹಳ್ಳಕ್ಕೆ‌ ಬಿದ್ದಿದಾನೆ.

ಅಫ್ರೋಜ್ ಪಾಷಾನ ಅಣ್ಣ ಕೊಲೆ‌ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಜೈಲು ಸೇರಿದ್ದ. ಅಣ್ಣನ‌ ನೋಡಲು ತಮ್ಮ ಕಳ್ಳತನದ ಆರೋಪಿ ಅಪ್ರೋಜ್ ಹೋಗಿದ್ದ. ಆದ್ರೆ, ಜೈಲಿನ ಎಂಟ್ರಿಯಲ್ಲಿದ್ದ ಎಐ ರೆಕಗ್ನೇಷನ್ ಕ್ಯಾಮರಾ ಈತನ ಮುಖ ಸ್ಕ್ಯಾನ್ ಮಾಡಿದೆ. ಆತನ ಮೇಲೆ ಅರೆಸ್ಟ್ ವಾರೆಂಟ್ ಇರುವ ವಿಚಾರ, ಭದ್ರತಾ ಸಿಬ್ಬಂದಿಗೆ ಗೊತ್ತಾಗಿತ್ತು. ತಕ್ಷಣವೇ ಜೈಲಿಗೆ ಬಂದ ಮಡಿವಾಳ ಪೊಲೀಸರು, ಆರೋಪಿ ಅಫ್ರೋಜ್ ಪಾಷನನ್ನು ಬಂಧಿಸಿ ಮತ್ತೆ ಜೈಲಿಗಟ್ಟಿದ್ದಾರೆ. ಇದೀಗ ಅಣ್ಣನನನ್ನ ನೋಡಲು ಬಂದಿದ್ದ ತಮ್ಮ ಸಹ ಜೈಲು ಸೇರಿದ್ದಾನೆ.

ಇದನ್ನೂ ಓದಿ: ಇಂದಿರಾನಗರದಲ್ಲಿ ನಾಲ್ವರಿಗೆ ಚಾಕು ಇರಿತ: ಆರೋಪಿ ಹೇಳಿಕೆ ಕೇಳಿ ಪೊಲೀಸರೇ ಶಾಕ್

ಸಾಮಾನ್ಯವಾಗಿ ಎಐ ಪವರ್ಡ್ ಫೇಸ್ ರೆಕಗ್ನಿಷನ್ ಕ್ಯಾಮೆರಾದ ಮೂಲಕ ವ್ಯಕ್ತಿಯ ವಿವರ, ಯಾವುದಾದರೂ ಪ್ರಕರಣದಲ್ಲಿ ವಾಂಟೆಡ್‌ ಇರುವವರಾ? ಅಥವಾ ಅಪರಾಧಿಕ ಹಿನ್ನೆಲೆಗಳಿವೆಯಾ ಎಂದು ತಿಳಿಯುತ್ತದೆ. ಅದೇ ರೀತಿ ಅಫ್ರೋಜ್ ಪಾಷನ ಮುಖ ಸ್ಕ್ಯಾನ್ ಆಗುತ್ತಿದ್ದಂತೆ ಆತನ ವಿರುದ್ಧ ಅರೆಸ್ಟ್ ವಾರಂಟ್​ ಜಾರಿಯಾಗಿರುವ ವಿಚಾರ ಸಿಐಎಸ್‌ಎಫ್ ಅಧಿಕಾರಿಗಳ ಗಮನಕ್ಕೆ ಬಂದಿದೆ. ಆ ತಕ್ಷಣವೇ ಸಿಐಎಸ್‌ಎಫ್ ಅಧಿಕಾರಿಗಳು ಮಡಿವಾಳ ಠಾಣೆ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಮಡಿವಾಳ ಠಾಣೆ ಪೊಲೀಸರು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ತೆರಳಿ ಅಫ್ರೋಜ್ ಪಾಷನನ್ನು ಹಿಡಿದು ನಿಟ್ಟುಸಿರುಬಿಟ್ಟಿದ್ದಾರೆ.

ಅದೇನೇ ಹೇಳಿ ಕಳೆದ 10 ವರ್ಷಗಳಿಂದ ಪೊಲೀಸರ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿದ್ದವನು AI ಟೆಕ್ನಾಲಜಿ ಮುಂದೆ ಮಂಡಿಯೂರಿದ್ದಾನೆ. ಇನ್ಮುಂದೆ ಖದೀಮರಿಗೆ AI ಟೆಕ್ನಾಲಜಿ ಖೆಡ್ಡಾ ತೋಡುವುದು ಪಕ್ಕಾ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:10 pm, Tue, 18 February 25