ಬೆಂಕಿ ಆಕಸ್ಮಿಕ: 450 ಕ್ವಿಂಟಲ್ ಗೂ ಅಧಿಕ ಮೆಕ್ಕೆಜೋಳ ತೆನೆ ಸುಟ್ಟು ಭಸ್ಮ; 5 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗಾಹುತಿ
ವಿಪರೀತ ಚಳಿಯ ನಡುವೆ ಎರಡು ಬೆಂಕಿ ಆಕಸ್ಮಿಕ ಘಟನೆಗಳು ನಡೆದಿದ್ದು, ಬೆಳೆದುನಿಂತಿದ್ದ ಮೆಕ್ಕೆಜೋಳ ಮತ್ತು ಕಬ್ಬು ಬೆಂಕಿಗಾಹುತಿಯಾಗಿದೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಹಂಸಭಾವಿ ಗ್ರಾಮದ ಬಳಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಮೆಕ್ಕೆಜೋಳದ ತೆನೆಗಳು ಧಗಧಗನೆ ಹೊತ್ತಿ ಉರಿದಿವೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿವಾಪುರ ಗ್ರಾಮದ ಬಳಿ 5 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗಾಹುತಿಯಾಗಿದೆ.
ಹಾವೇರಿ/ ಬೆಳಗಾವಿ: ವಿಪರೀತ ಚಳಿಯ ನಡುವೆ ಎರಡು ಬೆಂಕಿ ಆಕಸ್ಮಿಕ ಘಟನೆಗಳು ನಡೆದಿದ್ದು, ಬೆಳೆದುನಿಂತಿದ್ದ ಮೆಕ್ಕೆಜೋಳ ಮತ್ತು ಕಬ್ಬು ಬೆಂಕಿಗಾಹುತಿಯಾಗಿದೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಹಂಸಭಾವಿ ಗ್ರಾಮದ ಬಳಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಮೆಕ್ಕೆಜೋಳದ ತೆನೆಗಳು ಧಗಧಗನೆ ಹೊತ್ತಿ ಉರಿದಿವೆ. ವಿರುಪಾಕ್ಷ ಕಲ್ಲತ್ತಿ ಎಂಬುವರಿಗೆ ಸೇರಿದ ಜಮೀನಿನಲ್ಲಿ ಗುಡ್ಡೆ ಹಾಕಿದ್ದ ಮೆಕ್ಕೆಜೋಳದ ತೆನೆಗಳು ಸುಟ್ಟು ಕರಕಲಾಗಿವೆ. 450 ಕ್ವಿಂಟಲ್ ಗೂ ಅಧಿಕ ಮೆಕ್ಕೆಜೋಳದ ತೆನೆಗಳು ಹೀಗೆ ಸುಟ್ಟು ಭಸ್ಮಗೊಂಡಿವೆ. ಬೆಳಗಿನ ಜಾವ ಮೆಕ್ಕೆ ಜೋಳದ ತೆನೆಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಮೆಕ್ಕೆಜೋಳದ ತೆನೆಗಳ ರಾಶಿಯಲ್ಲಿ ಬಿಡಾರ ಹೂಡಿದ್ದ ಹಾವು ಸಹ ಸುಟ್ಟು ಕರಕಲಾಗಿದೆ. ಬೆಂಕಿಯಲ್ಲಿ ಸಿಕ್ಕು ಸಾವು ಬದುಕಿನ ನಡುವೆ ಹೋರಾಡಿದ ಹಾವು ಪ್ರಾಣಬಿಟ್ಟಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಶಿವಾಪುರ ಗ್ರಾಮದ ಬಳಿ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬಿನ ಗದ್ದೆಯಲ್ಲಿ ಬೆಂಕಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬಿನ ಗದ್ದೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿವಾಪುರ ಗ್ರಾಮದ ಬಳಿ 5 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗಾಹುತಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ಬೆಂಕಿ ನಂದಿಸಿದ್ದಾರೆ.
ತಡರಾತ್ರಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತುಕೊಂಡಿದೆ. ಸ್ಥಳೀಯರ ಸಮಯಪ್ರಜ್ಞೆಯಿಂದ ನೂರಾರು ಎಕರೆ ಪ್ರದೇಶದಲ್ಲಿದ್ದ ಕಬ್ಬು ಉಳಿದುಕೊಂಡಿದೆ. ಬೆಂಕಿ ಹೊತ್ತಿಕೊಳ್ಳಲು ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಅಂತಾ ರೈತರು ಆರೋಪ ಮಾಡಿದ್ದಾರೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.