ಮಕರ ಸಂಕ್ರಮಣದ ವಿಶೇಷ: ಮಂತ್ರಾಲಯಕ್ಕೆ ಸಾವಿರಾರು ಭಕ್ತರ ದಂಡು
ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ಪುನೀತರಾಗಲು ನಾಡಿನ ಮೂಲೆ ಮೂಲೆಯಿಂದಲೂ ಸಂಕ್ರಾಂತಿ ದಿನದಂದು ಮಂತ್ರಾಲಯದ ಶ್ರೀಮಠಕ್ಕೆ ಸಾವಿರಾರು ಭಕ್ತರ ದಂಡು ಹರಿದು ಬರುತ್ತಿದೆ.
ರಾಯಚೂರು: ಮಕರ ಸಂಕ್ರಾಂತಿಯಂದು ಜನರು ನದಿಸ್ನಾನ ಮಾಡುವುದು ಎಲ್ಲೆಡೆ ವಾಡಿಕೆ. ಅದರಲ್ಲೂ ಸಂಕ್ರಾಂತಿಯ ದಿನ ತುಂಗಾನದಿಯಲ್ಲಿ ಮಿಂದೆದ್ದು ಕಲಿಯುಗದ ಕಲ್ಪವೃಕ್ಷ, ಕಾಮಧೇನು ಹಾಗೂ ಬೇಡಿದ್ದನ್ನು ಕರುಣಿಸುವ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯಲು ನಾಡಿನ ಮೂಲೆ ಮೂಲೆಯಿಂದ ಮಂತ್ರಾಲಯಕ್ಕೆ ಭಕ್ತ ಸಮೂಹವೇ ಹರಿದು ಬರುತ್ತದೆ.
ಸಂಕ್ರಮಣ ದಿನದಂದು ನದಿಸ್ನಾನ ಮಾಡುವುದರಿಂದ ಸರ್ವ ರೋಗಗಳು ಮಾಯವಾಗುತ್ತವೆ, ಎಲ್ಲಾ ಪಾಪಗಳ ಪರಿಹಾರವಾಗುತ್ತೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ನಾಡಿನೆಲ್ಲೆಡೆ ಜನ ಸಂಕ್ರಮಣ ದಿನದಂದು ತಪ್ಪದೇ ನದಿಸ್ನಾನ ಮಾಡೋದು ವಾಡಿಕೆ. ಭಕ್ತರು ಬೇಡಿದ್ದನ್ನು ರಾಯರು ಕರುಣಿಸುತ್ತಾರೆ ಎಂಬ ನಂಬಿಕೆಯಿಂದ ಪ್ರತಿ ವರ್ಷವೂ ಸಂಕ್ರಾಂತಿ ದಿನದಂದು ಸಾಗರೋಪಾದಿಯಲ್ಲಿ ಜನ ಮಂತ್ರಾಲಯಕ್ಕೆ ಆಗಮಿಸಿ ನದಿ ಸ್ನಾನ ಮಾಡಿ ಪುನೀತರಾಗುತ್ತಾರೆ.
ಬೃಂದಾವನದ ಹೊರಭಾಗದಲ್ಲಿ ಭಕ್ತಿಯಿಂದ ಅನೇಕರು ರಾಯರಿಗೆ ಉರುಳು ಸೇವೆ ಮಾಡುವ ಮೂಲಕ ಹರಕೆ ಕೂಡ ತೀರಿಸುತ್ತಾರೆ. ರಾಯರ ಬೃಂದಾವನದ ದರ್ಶನ ಪಡೆದು ಲಕ್ಷಾಂತರ ಜನ ಭಕ್ತರು ಕೃತಾರ್ಥರಾಗುತ್ತಾರೆ. ಅನೇಕರು ಕುಟುಂಬ ಸಮೇತವಾಗಿ ಚಿಕ್ಕ ಮಕ್ಕಳು, ವಯೋವೃದ್ಧರು ಸಹ ನದಿಸ್ನಾನ ಮಾಡಿ ರಾಯರ ದರ್ಶನಕ್ಕೆ ಬರೋದು ಮತ್ತೊಂದು ವಿಶೇಷ. ಒಟ್ಟಿನಲ್ಲಿ ತುಂಗಭದ್ರ ನದಿಯಲ್ಲಿ ಮಿಂದೆದ್ದು ರಾಯರ ದರ್ಶನ ಪಡೆಯುವ ಸಹಸ್ರಾರು ಭಕ್ತರು ಮಂತ್ರಾಲಯದಲ್ಲೇ ಸಂಕ್ರಮಣವನ್ನು ವಿಶೇಷ ರೀತಿಯಲ್ಲಿ ಆಚರಿಸುತ್ತಾರೆ.
ಸಂಕ್ರಮಣದ ದಿನದಂದು ಸೂರ್ಯ ತನ್ನ ಪಥ ಬದಲಿಸುತ್ತಾನೆ. ಈ ಶುಭ ಘಳಿಗೆಯಲ್ಲಿ ನದಿಸ್ನಾನ ಮಾಡಿದ್ರೆ ಪಾಪ ಪರಿಹಾರವಾಗುತ್ತದೆ ಎಂಬುದು ಜನರ ನಂಬಿಕೆ. ಈ ಹಿನ್ನಲೆಯಲ್ಲಿ ಜನ ನದಿ ಸ್ನಾನ ಮಾಡಿ ಹಬ್ಬವನ್ನು ಸಂಭ್ರಮಿಸುತ್ತಾರೆ ಎಂದು ರಾಯಚೂರಿನ ರಾಯರ ಅರ್ಚಕರಾದ ಸುರೇಂದ್ರಾಚಾರ್ಯ ಕೊರ್ತಕುಂದ ಮಾಹಿತಿ ಹಂಚಿಕೊಂಡಿದ್ದಾರೆ.
ಸಂಕ್ರಾಂತಿ ಸಂಭ್ರಮ | ಎಳ್ಳುಬೆಲ್ಲ ಹಂಚಿ ಸ್ನೇಹ ಬೆಸೆಯುವ ಹಬ್ಬಕ್ಕಿದೆ ಧಾರ್ಮಿಕ ಮಹತ್ವ