ಅವಧಿಗೂ ಮುನ್ನ ಅರಳಿದ ಕಾಫಿ ಹೂವು.. ಕಾಫಿ ಬೆಳೆಗಾರರಿಗೆ ಹೆಚ್ಚಾಯ್ತು ತಲೆನೋವು
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಲ್ಲಿ ನೋಡಿದ್ರೂ ಕಾಫಿ ಹೂಗಳ ಘಮಲೇ ಹೆಚ್ಚಾಗಿದೆ. ಕಾಫಿತೋಟದ ಹಸಿರ ರಾಶಿಯಲ್ಲಿ ಶ್ವೇತವರ್ಣದ ಕಾಫಿ ಹೂಗಳು ಸುಗಂಧ ಸೂಸುತ್ತಿದ್ರೂ ಕಾಫಿ ಬೆಳೆಗಾರರ ಕಣ್ಣಲ್ಲಿ ಮಾತ್ರ ನೀರು ತರಿಸುತ್ತಿದೆ. ಮುಂದಿನ ಬಾರಿಗೆ ಕಾಫಿ ಫಸಲು ಗಿಡದಲ್ಲಿ ನಿಲ್ಲೋದೇ ಅನುಮಾನ ಅಂತಾ ಕಾಫಿ ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಚಿಕ್ಕಮಗಳೂರು: ಕಾಫಿನಾಡಲ್ಲಿ ಇದೀಗ ಕಾಫಿ ಕೊಯ್ಲಿನ ಸಮಯ. ಕಾಫಿ ಫಸಲನ್ನು ಕೊಯ್ಲು ಮಾಡಿ ಆ ಬಳಿಕ ಮುಂದಿನ ಫಸಲಿಗೆ ಮುಂದಾಲೋಚನೆಯಿಂದ ನೀರು ಹಾಯಿಸೋದು ವಾಡಿಕೆ. ಕಾಫಿ ಕೊಯ್ಲು ಮಾಡಿ, ಫೆಬ್ರವರಿ ತಿಂಗಳ ಕೊನೆಯಲ್ಲಿ ನೀರು ಹಾಯಿಸಿದ್ರೆ ಮುಂದಿನ ಫಸಲಿನ ಮೊದಲ ಹಂತವಾಗಿ ಕಾಫಿ ಹೂಗಳು ಅರಳುತ್ತವೆ.
ಆದರೆ ಈ ಬಾರಿ ಅಕಾಲಿಕ ಮಳೆಯಿಂದಾಗಿ ಅವಧಿಗೂ ಮುನ್ನವೇ ಕಾಫಿ ಕುಸುಮಗಳು ಅರಳಿವೆ. ಸದ್ಯ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಲ್ಲಿ ನೋಡಿದ್ರೂ ಕಾಫಿ ಹೂಗಳ ಘಮಲೇ ಹೆಚ್ಚಾಗಿದೆ. ಕಾಫಿತೋಟದ ಹಸಿರ ರಾಶಿಯಲ್ಲಿ ಶ್ವೇತವರ್ಣದ ಕಾಫಿ ಹೂಗಳು ಸುಗಂಧ ಸೂಸುತ್ತಿದ್ದರೂ ಕಾಫಿ ಬೆಳೆಗಾರರ ಕಣ್ಣಲ್ಲಿ ಮಾತ್ರ ನೀರು ತರಿಸುತ್ತಿದೆ. ಮುಂದಿನ ಬಾರಿಗೆ ಕಾಫಿ ಫಸಲು ಗಿಡದಲ್ಲಿ ನಿಲ್ಲೋದೇ ಅನುಮಾನ ಎಂದು ಕಾಫಿ ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಕಾಫಿ ಕೊಯ್ಲೇ ಆಗಿಲ್ಲ, ಹೂ ಬಿಟ್ಟಿತಲ್ಲ ! ಹೌದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಇನ್ನೂ ಕಾಫಿ ಕೊಯ್ಲು ಅರ್ಧದಷ್ಟೂ ಮುಗಿದಿಲ್ಲ. ಇನ್ನೇನು ಕಾಫಿ ಹಣ್ಣನ್ನು ಕೊಯ್ಲು ಮಾಡ್ಬೇಕು ಅನ್ನುವಷ್ಟರಲ್ಲಿ ಅಕಾಲಿಕ ಮಳೆಯ ಆರ್ಭಟ ಶುರುವಾಯ್ತು. ಅಯ್ಯೋ.. ಇದೇನು ಮಳೆಗಾಲದ ಮಳೆಯೇ..! ಒಂದೋ, ಎರಡೋ ದಿನ ಬಂದು ಹೋಗುತ್ತೆ ಅಂತಾ ಭಾವಿಸಿದ್ದ ರೈತರ ಲೆಕ್ಕಾಚಾರವೇ ತಪ್ಪಿ ಹೋಯ್ತು. ಬರೋಬ್ಬರಿ ಎರಡು ವಾರಗಳ ಕಾಲ ರೈತರನ್ನು ಹಣ್ಣುಗಾಯಿ-ನೀರುಗಾಯಿ ಮಾಡಿಬಿಟ್ಟಿತು. ಹಾಗಾಗೀ ಈ ಅಕಾಲಿಕ ಮಳೆಯನ್ನು ಕಾಫಿನಾಡಿಗರು ಹುಚ್ಚು ಮಳೆ ಅಂತಾನೇ ನಾಮಕರಣ ಮಾಡಿಬಿಟ್ರು.
ಮಳೆ ತಂದಿಟ್ಟ ಸಮಸ್ಯೆಗಳು ಮಳೆಯಿಂದ ಒಂದು ಕಡೆ ಕಾಫಿಯ ಹಣ್ಣುಗಳು ಉದುರಿ ಹೋದ್ರೆ, ಇನ್ನೊಂದೆಡೆ ಕೊಯ್ಲು ಮಾಡಿ ಒಣಹಾಕಿದ ಫಸಲು ಕೊಚ್ಚಿ ಹೋಯ್ತು. ಒಣಗಿ ಹಾಕೋ ಸಹವಾಸವೇ ಬೇಡ, ಹಾಗೆ ಇಟ್ಕೊಳ್ಳೋಣ ಅಂತಾ ಮೂಟೆ ಮಾಡಿಟ್ಟಿದ್ದ ಫಸಲು ಬೂಸು ಬಂದು ಹಾಳಾಯ್ತು. ಹೀಗೆ ಸಮಸ್ಯೆಗಳ ಸರಮಾಲೆಯನ್ನೇ ಉದ್ದುದ್ದಕ್ಕೆ ಎದುರಿಸುತ್ತಿದ್ದ ಕಾಫಿನಾಡಿಗರಿಗೆ, ಮತ್ತೊಂದು ಸಮಸ್ಯೆ ಎದುರಾಗಿದೆ. ಅದೇ, ಅವಧಿಗೂ ಮುನ್ನವೇ ಅರಳಿದ ಕಾಫಿ ಹೂವಿನ ಸಮಸ್ಯೆ..
ಹೂವನ್ನು ಉಳಿಸಿಕೊಳ್ಳೊದೇ ಸವಾಲು! ಒಂದು ವೇಳೆ, ಕಾಫಿ ಕೊಯ್ಲು ಆಗಿದ್ರೆ ಹೂ ಅವಧಿಗೂ ಮುನ್ನವೇ ಅರಳಿದ್ರೂ ಸಮಸ್ಯೆ ಆಗ್ತಿರಲಿಲ್ಲ. ಆದ್ರೆ ಇನ್ನೂ ಕಾಫಿ ಕೊಯ್ಲು ಶೇ.50ಕ್ಕೂ ಹೆಚ್ಚು ಬಾಕಿಯಿದೆ. ಅದ್ರಲ್ಲೂ ರೊಬಾಸ್ಟಾ ಕಾಫಿಯಂತೂ ಜನವರಿಯಲ್ಲೇ ಕೊಯ್ಲು ಆರಂಭಿಸೋದ್ರಿಂದ ಮಳೆಗೆ ಸಿಲುಕಿ ಬಹುತೇಕರು ಕೊಯ್ಲು ಮಾಡಿಲ್ಲ. ಕಳೆದ ಡಿಸೆಂಬರ್ 26ರಿಂದ ಜನವರಿ 10ರ ತನಕ ಬಿಟ್ಟು ಬಿಡದೇ ಕಾಫಿನಾಡಿಗರನ್ನ ಮಳೆ ಕಾಡಿದೆ. 10ರಿಂದ 15 ಇಂಚು ಮಳೆಯನ್ನು ಕಾಫಿನಾಡಿಗರು ಕೇವಲ ಎರಡೇ ವಾರದಲ್ಲಿ ನೋಡಿದ್ದಾರೆ. ಇದರ ಪರಿಣಾಮ ಒಂದ್ಕಡೆ ಈ ವರ್ಷದ ಅರ್ಧ ಫಸಲು ಮಳೆಯಿಂದ ಹಾಳಾಗಿವೆ.
ಸದ್ಯ ಕೊಯ್ಲು ಮಾಡಬೇಕಾಗಿರುವುದರಿಂದ, ಕೊಯ್ಲು ಮಾಡುವ ವೇಳೆಯಲ್ಲಿ ಕಾಫಿ ಹೂವುಗಳು ಉದುರುತ್ತವೆ. ಈ ಕಾಫಿ ಹೂಗಳು ಉದುರಿದರೆ ಮುಂದಿನ ಫಸಲಿಗೆ ಪೆಟ್ಟು ಬೀಳೋದು ಪಕ್ಕಾ. ಹೂ ಉದುರುತ್ತಲ್ಲ, ಬಿಟ್ಟು ಬಿಡೋಣ ಅಂದ್ರೆ ಸದ್ಯ ಅಳಿದುಳಿದಿರುವ ಫಸಲು ಕೈಗೆ ಸಿಗದಂತಾಗುತ್ತದೆ. ಇದು ಒಂಥರಾ ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಅನ್ನೋ ಗಾದೆಯ ಹಾಗಾಗಿದೆ. ಒಂದು ಕಡೆ ಕಳೆದ ಬಾರಿಯ ಫಸಲನ್ನ ಉಳಿಸಿಕೊಳ್ಳಬೇಕೋ? ಮತ್ತೊಂದೆಡೆ ಮುಂದಿನ ಬಾರಿಯ ಫಸಲಿಗೂ ಪೆಟ್ಟು ಬೀಳದಂತೆ ಹೂಗಳನ್ನ ಕಾಪಾಡಿಕೊಳ್ಳಬೇಕೋ? ಎಂಬುದೇ ಬೆಳೆಗಾರರಿಗೆ ಎದುರಾದ ಗೊಂದಲ.
ಕಾರ್ಮಿಕರ ಕೊರತೆ, ಕೇಳೋರಿಲ್ಲ ರೈತರ ಚಿಂತೆ.. ಇಷ್ಟೆಲ್ಲಾ ಸಮಸ್ಯೆ ಮಧ್ಯೆ ಕಾಫಿ ಕೊಯ್ಲಿಗೆ ಕಾರ್ಮಿಕರ ಕೊರತೆ ಕಾಡತೊಡಗಿದೆ. ಮಳೆಯಿಂದ ಬರೋಬ್ಬರಿ ಎರಡು ವಾರ ಕಾಫಿ ಕೊಯ್ಲು ಮುಂದೂಡಿಕೆ ಆಗಿರೋದ್ರಿಂದ ಆಗಿರೋ ಅನಾಹುತಗಳು ಒಂದೆರಡಲ್ಲ. ಹೀಗಾಗಿ ಹೇಗಾದ್ರೂ ಸರಿ, ಮೊದ್ಲೇ ಕಾಫಿ ಫಸಲು ಕೈ ತಪ್ಪೋ ಹಂತದಲ್ಲಿದೆ. ಆದಷ್ಟು ಬೇಗ ಕೊಯ್ಲು ಮಾಡೋಣ ಅಂತಾ ಎಲ್ಲರೂ ಒಂದೇ ಬಾರಿ ಕಾಫಿ ಕೊಯ್ಲಿನಲ್ಲಿ ತೊಡಗಿಕೊಂಡಿದ್ದರಿಂದ ಕಾರ್ಮಿಕರು ಸಿಗದಂತಾಗಿದೆ. ಸದ್ಯ ಕಾಫಿ ಕೊಯ್ಲು ಮಾಡುವ ಕಾರ್ಮಿಕರಿಗೆ ಕಾಫಿನಾಡಿನಲ್ಲಿ ಬೇಡಿಕೆ ಹೆಚ್ಚಾಗಿದೆ.
ಜೇನುಹುಳುಗಳೂ ಇಲ್ಲ ಇನ್ನೊಂದೆಂದರೆ ಈ ಬಾರಿ ಅರಳಿದ ಕಾಫಿ ಕುಸುಮಗಳನ್ನು ಮುತ್ತಿಕೊಳ್ಳೋಕೆ ಜೇನು ಹುಳುಗಳೇ ಇಲ್ಲವಾಗಿದೆ. ಈ ರೀತಿ ಕಾಫಿ ತೋಟದಲ್ಲಿ ಹೂ ಅರಳಿ ನಿಂತಾಗ ಎಲ್ಲೆಡೆ ಜೇನಿನ ಶಬ್ದ ಕಿವಿಗೆ ರಾಚುತ್ತಿತ್ತು. ಆದರೆ ಈಗ ಜೇನುಗಳ ಸುಳಿವೇ ಇಲ್ಲ. ಅಕಾಲಿಕ ಮಳೆಯ ಫಲವಾಗಿ ಅರಳಿರೋ ಕಾಫಿ ಕುಸುಮಗಳೂ ಜೇನಿಗೆ ಬೇಡವಾಗಿದ್ಯೋ? ಅಥವಾ ಜೇನು ಕಾಫಿ ತೋಟದ ಕಡೆ ಬರಲು ಇದು ಸೂಕ್ತ ಸಮಯ ಅಲ್ಲವೋ? ಎಂಬುದು ತಿಳಿಯದು. ಇದರಿಂದ ಕಾಫಿ ಹೂ ಪರಾಗಸ್ಪರ್ಶ ಸರಿಯಾಗಿ ಆಗದೇ ಫಸಲು ಕೈ ಕೊಡುತ್ತೆ ಅಂತಾರೆ ಕಾಫಿ ಬೆಳೆಗಾರರು. ಅಲ್ಲದೇ ಅವಧಿಗೂ ಮುನ್ನವೇ ಅರಳಿರೋ ಹೂಗಳಿಂದ ಕಾಫಿ ಗಿಡಗಳಿಗೆ ಸರಿಯಾಗಿ ವಿಶ್ರಾಂತಿ ಸಿಗುತ್ತಿಲ್ಲ.
ಜನವರಿ ಕೊನೆ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಕಾಫಿ ಕೊಯ್ಲು ಮುಗಿದು ಸ್ವಲ್ಪ ರೆಸ್ಟ್ ಬಳಿಕ ಮಾರ್ಚ್ ಮೊದಲ ವಾರದಲ್ಲಿ ಕಾಫಿ ಹೂಗಳು ಅರಳಿದ್ರೆ ಮುಂದಿನ ಫಸಲು ಉತ್ತಮವಾಗಿರುತ್ತದೆ ಅನ್ನೋದು ಕಾಫಿಬೆಳೆಗಾರರ ಅಭಿಪ್ರಾಯ. ಒಟ್ಟಿನಲ್ಲಿ ಈ ಅಕಾಲಿಕ ಮಳೆ ಈ ಬಾರಿಯ ಫಸಲನ್ನ ಕಿತ್ತುಕೊಂಡಿದಲ್ಲದೇ ಅವಧಿಗೂ ಮುನ್ನವೇ ಅರಳಿರೋ ಕಾಫಿ ಕುಸುಮಗಳು ಮುಂದಿನ ಬಾರಿಯ ಫಸಲಿಗೂ ಆತಂಕ ತಂದೊಡ್ಡಿವೆ.
ಕೊಚ್ಚಿ ಹೋಯ್ತು ಕಾಫಿ.. ಕರಗಿ ಹೋಗ್ತಿದೆ ಭತ್ತ: ವರ್ಷದ ಕೂಳನ್ನೇ ಕಿತ್ತುಕೊಂಡ ಅಕಾಲಿಕ ಮಳೆ