ಶಿವಾನಂದ ಪಾಟೀಲ್ ರಾಜೀನಾಮೆ ಬೆನ್ನಲ್ಲೇ ಯತ್ನಾಳ್ ಯುಟರ್ನ್, ಸ್ಪೀಕರ್ ಹೇಳಿದ್ದೇನು?
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಚಿವ ಶಿವಾನಂದ್ ಪಾಟೀಲ್ ನಡುವೆ ರಾಜಕೀಯ ಯುದ್ಧ ಜೋರಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್ ಅವರು ಎಸೆದಿದ್ದ ಸವಾಲನ್ನು ಸ್ವೀಕರಿಸಿದ ಸಚಿವ ಶಿವಾನಂದ ಪಾಟೀಲ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಈ ವಿಚಾರವಾಗಿ ಸ್ಪೀಕರ್ ಯುಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು, ಮೇ 02: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮತ್ತು ಸಚಿವ ಶಿವಾನಂದ ಪಾಟೀಲ್ (Shivanand Patil) ನಡುವೆ ರಾಜಕೀಯ ಸಮರ ಮುಂದುವರೆದಿದೆ. ಬಸನಗೌಡ ಪಾಟೀಲ್ ಯತ್ನಾಳ್ ಎಸೆದ ಸವಾಲನ್ನು ಸ್ವೀಕರಿಸಿದ ಸಚಿವ ಶಿವಾನಂದ ಪಾಟೀಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಆದರೆ, ಸಚಿವ ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಸಾಧ್ಯವಿಲ್ಲ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಶಿವಾನಂದ ಪಾಟೀಲ್ ಷರತ್ತು ಬದ್ಧ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಅಂಗೀಕರಿಸಲು ಸಾಧ್ಯವಿಲ್ಲ. ಇನ್ನು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇನ್ನೂ ರಾಜೀನಾಮೆ ನೀಡಿಲ್ಲ ಎಂದರು.
ಇನ್ನು, ತಮಗೆ ಜೀವ ಬೆದರಿಕೆ ಕರೆ ಬಂದಿರುವ ವಿಚಾರವಾಗಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಇದ್ದಾಗ ಬೆದರಿಕೆ ಕರೆಗಳು ಬಂದಿದ್ದವು. ಇಂಟಲಿಜನ್ಸ್ ಸಹ ಮಾಹಿತಿ ನೀಡಿತ್ತು. ಈಗ ಯಾವುದೇ ಬೆದರಿಕೆ ಕರೆಗಳು ಬಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನಾನು ಆ ಹೇಳಿಕೆ ಕೊಟ್ಟಿಲ್ಲ: ಯತ್ನಾಳ್
ನಾನು ಕೊಟ್ಟಿರುವ ಹೇಳಿಕೆಯೇ ಬೇರೆ ಅವರು ಇಂದು ಹಾಕಿರುವ ಸವಾಲ್ ಬೇರೆ ಇದೆ. ನಾನು ಹೇಳಿದ ಹೇಳಿಕೆಗೂ ಇವತ್ತಿನ ರಾಜೀನಾಮೆ ಸವಾಲ್ಗೂ ಯಾವುದೇ ಸಂಬಂಧವಿಲ್ಲ. ರಾಜೀನಾಮೆ ಕೊಡುವಂತೆ ಯಾವತ್ತೂ ಹೇಳಿಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎರಡು ಲೈನ್ನಲ್ಲಿ ರಾಜೀನಾಮೆ ಪತ್ರ ಕೊಡುತ್ತಾರೆ. ಕಂಡಿಷನ್ ಹಾಕಿ ರಾಜೀನಾಮೆ ಕೊಡುವುದು ಮುರ್ಖತನ. ಇಷ್ಟು ಉದ್ದ ರಾಜೀನಾಮೆ ಪತ್ರ ಎಂದಾದರೂ ಕೊಟ್ಟಿದಾರಾ? ಅವರಿಗೆ ಮಾನ ಮರ್ಯಾದೆ ಏನೂ ಇಲ್ಲ ಅದು ದಡ್ಡತನ. ಮರ್ಯಾದೆ ಇಲ್ಲದವರು ಮಾಡುವ ಕೆಲಸವನ್ನು ಅವರು ಮಾಡಿದ್ದಾರೆ. ನಾನು ನನ್ನ ನಿರ್ಧಾರವನ್ನ ಶುಕ್ರವಾರ ತಿಳಿಸುತ್ತೇನೆ. ದಯವಿಟ್ಟು ನಾನು ಬಸವ ಜಯಂತಿ ದಿವಸ ಹೇಳಿದ್ದ ವಿಡಿಯೋ ತೋರಿಸಿ ಎಂದು ಹೇಳಿದರು.
ಇದನ್ನೂ ಓದಿ: ಸ್ಪೀಕರ್ ಯು.ಟಿ ಖಾದರ್ ಮಾತ್ರವಲ್ಲ ಸಿಎಂ ಸಿದ್ದರಾಮಯ್ಯಗೂ ಜೀವ ಬೆದರಿಕೆ..!
ಬಿಜೆಪಿ ಶಾಸಕ ಯತ್ನಾಳ್ ಅವರು ಶಿವಾನಂದ ಪಾಟೀಲ್ ಮತ್ತು ಹುನುಗುಂದ ಶಾಸಕ ವಿಜಯಾನಂದ್ ಕಾಶಪ್ಪನವರ್ ಅವರಿಗೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿ ತನ್ನ ವಿರುದ್ಧ ಸ್ಪರ್ಧಿಸುವಂತೆ ಸವಾಲು ಎಸೆದಿದ್ದರು.
ಸವಾಲು ಸ್ವೀಕರಿಸಿದ ಶಿವಾನಂದ ಪಾಟೀಲ್
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನೀಡಿದ್ದ ಸವಾಲನ್ನು ಸಚಿವ ಮತ್ತು ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್ ಸ್ವೀಕರಿಸಿ, ಶುಕ್ರವಾರ (ಮೇ.02) ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ತಾನೂ ಬಾಗೇವಾಡಿ ಮತ್ತು ವಿಜಯಪುರ ಎರಡೂ ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸಲು ತಯಾರಿದ್ದೇನೆ ಎಂದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:59 pm, Fri, 2 May 25