‘ಆದಿಪುರುಷ್’ ಸಿನಿಮಾ ನೋಡಿ ಸೈಫ್ ಅಲಿ ಖಾನ್ ಮಗನಿಗೂ ಬಂತು ಕೋಪ
‘ಆದಿಪುರುಷ್’ ಸಿನಿಮಾವನ್ನು ಸೈಫ್ ಅಲಿ ಖಾನ್ ಮಗ ತೈಮೂರ್ ಅಲಿ ಖಾನ್ಗೆ ತೋರಿಸಲಾಗಿದೆ. ಆತನಿಗೆ ಈ ಸಿನಿಮಾ ಕಿಂಚಿತ್ತೂ ಇಷ್ಟ ಆಗಿಲ್ಲ. ಹಾಗಾಗಿ ಮಗನ ಬಳಿ ಸೈಫ್ ಅಲಿ ಖಾನ್ ಅವರು ಕ್ಷಮೆ ಕೇಳಿದ್ದಾರೆ! ಈ ಬಗ್ಗೆ ಅವರು ಇತ್ತೀಚೆಗಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ನಟ ಸೈಫ್ ಅಲಿ ಖಾನ್ (Saif Ali Khan) ಅವರ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಟ್ರೋಲ್ ಆದ ಸಿನಿಮಾ ಎಂದರೆ ಅದು ‘ಆದಿಪುರುಷ್’. ರಾಮಾಯಣದ ಕಥೆ ಹೊಂದಿದ್ದ ಆ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ಅವರು ರಾವಣನ ಪಾತ್ರ ಮಾಡಿದ್ದರು. ಸಿನಿಮಾದ ಸಂಭಾಷಣೆ ಮತ್ತು ಗ್ರಾಫಿಕ್ಸ್ ಕಳಪೆ ಆಗಿದೆ ಎಂದು ಜನರು ಟ್ರೋಲ್ ಮಾಡಿದ್ದರು. ಈಗ ಅದೇ ಸಿನಿಮಾವನ್ನು ಸೈಫ್ ಅಲಿ ಖಾನ್ ಮಗ ತೈಮೂರ್ ಅಲಿ ಖಾನ್ (Taimur Ali Khan) ಕೂಡ ನೋಡಿದ್ದಾನೆ. ಆತನಿಗೂ ಈ ಸಿನಿಮಾ ಇಷ್ಟ ಆಗಿಲ್ಲ. ‘ಆದಿಪುರುಷ್’ (Adipurush) ಸಿನಿಮಾ ನೋಡಿ ತೈಮೂರ್ ಕೋಪ ಮಾಡಿಕೊಂಡ ಎಂದು ಸ್ವತಃ ಸೈಫ್ ಅಲಿ ಖಾನ್ ಹೇಳಿದ್ದಾರೆ.
ನೆಟ್ಫ್ಲಿಕ್ಸ್ನ ‘ಜ್ಯೂವೆಲ್ ಥೀಫ್’ ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ಮತ್ತು ಜಯದೀಪ್ ಅಹಲಾವತ್ ಅವರು ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಈ ಸಿನಿಮಾದ ಪ್ರಚಾರದ ಸಲುವಾಗಿ ಸೈಫ್ ಅಲಿ ಖಾನ್ ಅವರನ್ನು ಜಯದೀಪ್ ಸಂದರ್ಶನ ಮಾಡಿದ್ದಾರೆ. ಈ ವೇಳೆ ಕೆಲವು ಇಂಟರೆಸ್ಟಿಂಗ್ ವಿಷಯಗಳನ್ನು ಸೈಫ್ ಹಂಚಿಕೊಂಡರು.
‘ನೀವು ನಟಿಸಿದ ಯಾವುದಾದರೂ ಸಿನಿಮಾವನ್ನು ನಿಮ್ಮ ಮಕ್ಕಳು ನೋಡಿದ್ದಾರಾ’ ಎಂದು ಜಯದೀಪ್ ಕೇಳಿದರು. ಅದಕ್ಕೆ ಉತ್ತರಿಸಿದ ಸೈಫ್, ‘ಇತ್ತೀಚೆಗೆ ನಾನು ಅವನಿಗೆ ಆದಿಪುರುಷ್ ಸಿನಿಮಾ ತೋರಿಸಿದೆ. ಆತ ನನಗೆ ಲುಕ್ ಕೊಡಲು ಶುರು ಮಾಡಿದ. ನಾನು ಅವನಲ್ಲಿ ಕ್ಷಮೆ ಕೇಳಿದೆ. ಅವನು ಓಕೆ ಅಂತ ಹೇಳಿದ. ಆತ ನನ್ನನ್ನು ಕ್ಷಮಿಸಿದ’ ಎಂದಿದ್ದಾರೆ ಸೈಫ್ ಅಲಿ ಖಾನ್.
‘ಆದಿಪುರುಷ್’ ಸಿನಿಮಾದಲ್ಲಿ ಪ್ರಭಾಸ್ ಅವರು ರಾಮನ ಪಾತ್ರ ಮಾಡಿದ್ದಾರೆ. ಕೃತಿ ಸನನ್ ಅವರು ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೈಫ್ ಅಲಿ ಖಾನ್ ಅವರು ಮಾಡಿದ ರಾವಣನ ಪಾತ್ರದ ಗೆಟಪ್ ಸರಿ ಇರಲಿಲ್ಲ ಎಂದು ಅನೇಕರು ಟ್ರೋಲ್ ಮಾಡಿದ್ದರು. ಇದೇ ಕಾರಣದಿಂದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸೋಲು ಕಂಡಿತು. ಹೈಬಜೆಟ್ನ ಚಿತ್ರವಾದರೂ ವಿಎಫ್ಎಕ್ಸ್ ತುಂಬ ಕಳೆಪೆ ಆಗಿತ್ತು ಎಂಬುದು ಈ ಸೋಲಿಗೆ ಒಂದು ಪ್ರಮುಖ ಕಾರಣ. ನಿರ್ದೇಶಕ ಓಂ ರಾವತ್ ಅವರನ್ನು ಕೂಡ ಜನರು ಟ್ರೋಲ್ ಮಾಡಿದರು.
ಇದನ್ನೂ ಓದಿ: ‘ಕರೀನಾ ಕಪೂರ್ ಸಹವಾಸ ಮಾಡಬೇಡ’: ಸೈಫ್ಗೆ ಎಚ್ಚರಿಕೆ ನೀಡಿದ್ದ ಅಕ್ಷಯ್ ಕುಮಾರ್
ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ದಂಪತಿಯ ಮಕ್ಕಳಾದ ತೈಮೂರ್ ಅಲಿ ಖಾನ್, ಜೇಹ್ ಅಲಿ ಖಾನ್ ತುಂಬ ಫೇಮಸ್ ಆಗಿದ್ದಾರೆ. ಅದಕ್ಕೆ ಪಾಪರಾಜಿಗಳೇ ಕಾರಣ. ಈ ಮಕ್ಕಳು ಎಲ್ಲೇ ಕಾಣಿಸಿದರೂ ಅವರ ಫೋಟೋ, ವಿಡಿಯೋ ಸಲುವಾಗಿ ಪಾಪರಾಜಿಗಳು ಮುಗಿಬೀಳುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








