Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಫ್ ಅಲಿ ಖಾನ್ ಪ್ರಕರಣ: ದಾಳಿಕೋರನನ್ನು ಪೊಲೀಸರು ಹಿಡಿದಿದ್ದು ಹೇಗೆ?

Saif Ali Khan case: ನಟ ಸೈಫ್ ಅಲಿ ಖಾನ್ ಮೇಲೆ ದಾಳಿ ಮಾಡಿದ್ದ ದಾಳಿಕೋರ, ಅಲ್ಲಿಂದ ಎಲ್ಲಿಗೆ ಹೋದ ಎರಡು ದಿನಕ್ಕೂ ಹೆಚ್ಚು ಸಮಯ ಪೊಲೀಸರಿಗೆ ಸಿಗದೇ ಬಚ್ಚಿಟ್ಟುಕೊಂಡಿದ್ದು ಹೇಗೆ? ದಾಳಿಕೋರನನ್ನು ಪತ್ತೆ ಹಚ್ಚಲು ಪೊಲೀಸರು ಎಷ್ಟೆಲ್ಲ ಕಷ್ಟಪಡಬೇಕಾಯ್ತು? ಕೊನೆಗೆ ದಾಳಿಕೋರನ ಪತ್ತೆ ಆಗಿದ್ದು ಹೇಗೆ? ಎಲ್ಲ ವಿವರ ಇಲ್ಲಿದೆ.

ಸೈಫ್ ಅಲಿ ಖಾನ್ ಪ್ರಕರಣ: ದಾಳಿಕೋರನನ್ನು ಪೊಲೀಸರು ಹಿಡಿದಿದ್ದು ಹೇಗೆ?
Saif Ali Khan
Follow us
ಮಂಜುನಾಥ ಸಿ.
|

Updated on: Jan 21, 2025 | 11:37 AM

ಬಾಲಿವುಡ್ ನಟ ಸೈಪ್ ಅಲಿ ಖಾನ್ ಮನೆಗೆ ನುಗ್ಗಿ ಸೈಫ್ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದ ದಾಳಿಕೋರನ ಬಂಧನವಾಗಿದೆ. ಬರೋಬ್ಬರಿ 70 ಗಂಟೆಗಳ ವರೆಗೂ ಪೊಲೀಸರಿಗೆ ಸಿಕ್ಕದೆ ಬಚ್ಚಿಟ್ಟುಕೊಂಡಿದ್ದ ದಾಳಿಕೋರ ಕೊನೆಗೂ ಎರಡು ದಿನದ ಹಿಂದೆ ಸಿಕ್ಕಿಬಿದ್ದ. ದಾಳಿಕೋರ ಮುಂಬೈ ಹಾಗೂ ಅದರ ಸುತ್ತ-ಮುತ್ತಲಿನ ಪ್ರದೇಶದಲ್ಲೇ ಇದ್ದರೂ ಸಹ ಪೊಲೀಸರ ಕೈಗೆ ಆತ ಸಿಕ್ಕಿರಲಿಲ್ಲ. ಆದರೆ ಕೊನೆಗೆ ದಾಳಿಕೋರನ ಸುಳಿವು ಸಿಕ್ಕಿದ್ದು ಹೇಗೆ? ಸೈಫ್ ಅಲಿ ಖಾನ್​ ಮೇಲೆ ದಾಳಿ ಮಾಡಿದ ಬಳಿಕ ಆ ವ್ಯಕ್ತಿ ಎಲ್ಲಿಗೆ ಹೋದ ಏನೇನಾಯ್ತು ಇಲ್ಲಿದೆ ಮಾಹಿತಿ.

ಯಾವುದಾದರೂ ಶ್ರೀಮಂತರ ಮನೆಗೆ ನುಗ್ಗಿ ಕಳ್ಳತನ ಮಾಡುವುದು ದಾಳಿಕೋರನ ಉದ್ದೇಶವಾಗಿತ್ತು. ಸೈಫ್ ಅಲಿ ಖಾನ್ ಮನೆಗೆ ನುಗ್ಗಿದಾಗಲೂ ಸಹ ಅದು ಬಾಲಿವುಡ್ ಸೆಲೆಬ್ರಿಟಿ ಮನೆ ಎಂಬುದು ದಾಳಿಕೋರನಿಗೆ ತಿಳಿದಿರಲಿಲ್ಲ. ಮೊದಲ ಒಂಬತ್ತು ಮಹಡಿಯನ್ನು ಸರ್ವೀಸ್ ಮತ್ತು ಎಮರ್ಜೆನ್ಸಿ ಎಕ್ಸಿಟ್​ಗಾಗಿ ಮಾಡಲಾದ ಮೆಟ್ಟಿಲುಗಳ ಮೂಲಕ ಹತ್ತಿದ ದಾಳಿಕೋರ ಆ ನಂತರ ಎಸಿ ಡಕ್​ ಮೂಲಕ 12ನೇ ಮಹಡಿ ತಲುಪಿದ್ದಾನೆ ಆ ಬಳಿಕ ಬಾತ್​ರೂಂ ಕಿಟಕಿ ಮೂಲಕ ಸೈಫ್ ಅಲಿ ಖಾನ್ ಇದ್ದ ಪ್ಲ್ಯಾಟ್ ತಲುಪಿದ್ದಾನೆ. ಆಗ ಸೈಫ್ ಅಲಿ ಖಾನ್ ಮನೆಗೆಸಲದ ಸಿಬ್ಬಂದಿ ಆತನನ್ನು ನೋಡಿದ್ದಾರೆ ಅಲ್ಲಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಹೇಗೋ ಸೈಫ್ ಅಲಿ ಖಾನ್ ಪುತ್ರ ಜೇಹ್​ ಮಲಗಿದ್ದ ರೂಂ ಸೇರಿಕೊಂಡಿದ್ದಾನೆ. ಆಗ ಸೈಪ್ ಅಲಿ ಖಾನ್ ದಾಳಿಕೋರನ ಹಿಡಿಯಲು ಪ್ರಯತ್ನಿಸಿದಾಗ ಸೈಫ್ ಅಲಿ ಖಾನ್​ ಮೇಲೆ ಆತ ದಾಳಿ ಮಾಡಿದ್ದಾನೆ.

ಸೈಪ್ ಅಲಿ ಖಾನ್ ಮೇಲೆ ದಾಳಿ ಮಾಡಿದ ಬಳಿಕ ಆತ ಪರಾರಿಯಾಗಿದ್ದಾನೆ. ಹೊರಗೆ ಬಂದವನೆ ಬಟ್ಟೆ ಬದಲಿಸಿ ಅಲ್ಲೇ ಬಾಂದ್ರಾದ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ 7 ಗಂಟೆ ವರೆಗೆ ಇದ್ದ. ಬಳಿಕ ಬಾಂದ್ರಾ ರೈಲ್ವೆ ಸ್ಟೇಷನ್​ನಿಂದ ಅಂಧೇರಿಗೆ ಬಂದಿದ್ದಾನೆ. ಅಲ್ಲಿಂದ ಆತ ತನ್ನ ರೂಂ ಇದ್ದ ವರ್ಲಿ, ಕೋಳಿವಾಡಕ್ಕೆ ನಡೆದುಕೊಂಡು ಹೋಗಿದ್ದಾನೆ. ಆದರೆ ಅಲ್ಲಿ ಹೋಗುತ್ತಲೆ, ಟಿವಿ, ಯೂಟ್ಯೂಬ್​ಗಳಲ್ಲಿ ತನ್ನ ಚಿತ್ರಗಳು ಹರಿದಾಡುತ್ತಿರುವುದನ್ನು ನೋಡಿ, ಅಲ್ಲಿಂದ ತಾನು ಕೆಲಸ ಮಾಡುವ ಥಾನೆಯ ಬಾರ್​ಗೆ ಹೋಗಿದ್ದಾನೆ. ಆದರೆ ಅಲ್ಲಿ ಪೊಲೀಸರು ಓಡಾಡುತ್ತಿರುವುದು ನೋಡಿ ಅಲ್ಲಿಂದಲೂ ಪರಾರಿ ಆಗಿದ್ದಾನೆ. ಮೊಬೈಲ್ ಸಹ ಸ್ವಿಚ್ ಆಫ್ ಮಾಡಿಬಿಟ್ಟಿದ್ದಾನೆ.

ಇದನ್ನೂ ಓದಿ:ಇವರೇ ನೋಡಿ ಸೈಫ್ ಅಲಿ ಖಾನ್ ಜೀವ ಉಳಿಸಿದ ಆಟೋ ಡ್ರೈವರ್

ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಆತನ ಚಲನವಲನ ಪತ್ತೆ ಹಚ್ಚಿದ ಪೊಲೀಸರು ದಾಳಿಕೋರನ ಇದ್ದ ರೂಂ ಅನ್ನು ಪತ್ತೆ ಹಚ್ಚಿದ್ದಾರೆ. ಅಲ್ಲಿಂದ ಪಡೆದ ಮಾಹಿತಿಯಿಂದ ಆತ ಕೆಲಸ ಮಾಡುತ್ತಿದ್ದ ಬಾರ್​ಗೆ ಭೇಟಿ ನೀಡಿದ್ದಾರೆ. ದಾಳಿಕೋರನನ್ನು ಉದ್ಯೋಗಕ್ಕೆ ಸೇರಿಸಿಕೊಂಡಿದ್ದ ಲೇಬರ್ ಸಂಸ್ಥೆಯ ಪಾಂಡೆ ಎಂಬಾತ ದಾಳಿಕೋರನ ಮೊಬೈಲ್ ನಂಬರ್ ಸೇರಿದಂತೆ ಎಲ್ಲ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ. ಆದರೆ ಮೊಬೈಲ್ ಸ್ವಿಚ್ ಆಫ್ ಆಗಿದ್ದ ಕಾರಣ ದಾಳಿಕೋರ ಇದ್ದ ನಿಖರ ಸ್ಥಳ ತಿಳಿದಿರಲಿಲ್ಲ.

ಇನ್ನು ಮೊಬೈಲ್ ಸ್ವಿಚ್ ಆಫ್ ಮಾಡಿದ್ದ ದಾಳಿಕೋರ ಥಾಣೆಯ ಲೇಬರ್ ಏರಿಯಾಕ್ಕೆ ಹೋಗಿ ಅಲ್ಲಿ ದಟ್ಟವಾಗಿ ಬೆಳೆದಿದ್ದ ಮ್ಯಾಂಗ್ರೋವ್ ಮರಗಳ ನಡುವಲ್ಲಿ ಬಚ್ಚಿಟ್ಟುಕೊಂಡಿದ್ದ. ಅಲ್ಲಿಯೇ ಒಂದು ರಾತ್ರಿ ಕಳೆದಿದ್ದ. ಆದರೆ ಮರುದಿನ ಬೆಳಿಗ್ಗೆ ಹೊಟ್ಟೆ ಹಸಿದಾಗ ಹೊರಗೆ ಬಂದಿದ್ದ ಆತ ಪರೋಟ ತಿಂದು ಗೂಗಲ್ ಪೇ ಬಳಸಿ ಹಣ ನೀಡಿದ್ದ. ಆತನ ಮೊಬೈಲ್ ನಂಬರ್ ಅನ್ನು ಟ್ರ್ಯಾಕ್ ಮಾಡುತ್ತಿದ್ದ ಪೊಲೀಸರಿಗೆ ಕೂಡಲೇ ಆತನಿರುವ ಸ್ಥಳದ ಮಾಹಿತಿ ದೊರಕಿತು. ಕೂಡಲೇ 20 ತಂಡಗಳು ಸ್ಥಳವನ್ನು ತಲುಪಿ ಹುಡುಕಾಟ ಆರಂಭಿಸಿದವು. ದಟ್ಟ ಮ್ಯಾಂಗ್ರೋವ್ ಮರಗಳ ನಡುವೆ ನೆಲದ ಮೇಲೆ ಮಲಗಿರುವ ದಾಳಿಕೋರ ಪೊಲೀಸ್​ಗೆ ಕಂಡ, ಆತನನ್ನು ಮಾತನಾಡಿಸಲು ಹತ್ತಿರ ಹೋಗುತ್ತಿದ್ದಂತೆ ದಾಳಿಕೋರ ಓಡಲು ಪ್ರಾರಂಭಿಸಿದ. ಕೂಡಲೇ ಪೊಲೀಸರು ಆತನ ಹಿಂದೆ ಬಿದ್ದು ಹಿಡಿದು ಹಾಕಿದರು. ಹೀಗೆ ಸೈಫ್ ಅಲಿ ಖಾನ್​ನ ದಾಳಿಕೋರ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ