ಇವರೇ ನೋಡಿ ಸೈಫ್ ಅಲಿ ಖಾನ್ ಜೀವ ಉಳಿಸಿದ ಆಟೋ ಡ್ರೈವರ್
Saif Ali Khan: ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ ಅಗಂತುಕನೊಬ್ಬ ಚಾಕು ಇರಿದ ಘಟನೆ ಕೆಲ ದಿನಗಳ ಹಿಂದೆ ನಡೆದಿದೆ. ಆರೋಪಿಯನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಆದರೆ ಸೈಫ್ ಅಲಿ ಖಾನ್ಗೆ ಚಾಕು ಇರಿದಾಗ ಸೈಫ್ ಜೀವ ಕಾಪಾಡುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದು ಒಬ್ಬ ಆಟೋ ಚಾಲಕ. ಇದೀಗ ಆ ಆಟೋ ಚಾಲಕ ಮಾಧ್ಯಮದೊಟ್ಟಿಗೆ ಮಾತನಾಡಿದ್ದಾರೆ.
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿ ಚಾಕು ಇರಿದಾತನನ್ನು ಬಂಧಿಸಲಾಗಿದೆ. ದಾಳಿ ಮಾಡಿದವ ಬಾಂಗ್ಲಾದೇಶದ ಪ್ರಜೆ ಎನ್ನಲಾಗಿದೆ. ಘಟನೆ ನಡೆದ 70 ಗಂಟೆಗಳ ಬಳಿಕ ಮುಂಬೈ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸಿದ್ದಾರೆ. ಬುಧವಾರ ತಡರಾತ್ರಿ ಬಾಂದ್ರಾದ ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ್ದ ಆರೋಪಿ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದ. ಸತತವಾಗಿ ಆರು ಬಾರಿ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದ ಆರೋಪಿ. ಅಂಥಹಾ ವಿಷಮ ಪರಿಸ್ಥಿತಿಯಲ್ಲಿ ಸೈಫ್ ಅಲಿ ಖಾನ್ ಜೀವ ಉಳಿಸಿದ್ದು ಒಬ್ಬ ಆಟೋ ಡ್ರೈವರ್. ಇದೀಗ ಆ ಆಟೋ ಡ್ರೈವರ್ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದಾರೆ.
ಸೈಫ್ ಅಲಿ ಖಾನ್, ದಾಳಿಕೋರನಿಂದ ಚಾಕು ಇರಿತಕ್ಕೆ ಒಳಗಾಗಿ ರಕ್ತದ ಮಡುವಿನಲ್ಲಿದ್ದಾಗ ಸಹಾಯಕ್ಕೆ ಬಂದಿದ್ದು ಒಬ್ಬ ಆಟೋ ಚಾಲಕ. ಸೈಪ್ ಅಲಿ ಖಾನ್ ಮನೆಯಲ್ಲಿ ಕೋಟ್ಯಂತರ ರೂಪಾಯಿ ಬೆಲೆಯ ಹಲವು ಕಾರುಗಳು ಇವೆ. ಆದರೂ ಸಹ ಅಂಥಹಾ ಸಮಯದಲ್ಲಿ ಸೈಫ್ ಸಹಾಯಕ್ಕೆ ಬಂದಿದ್ದು ಒಂದು ಆಟೋ. ಅಂದು ರಾತ್ರಿ ರಕ್ತದ ಮಡುವಿನಲ್ಲಿ ಸೈಪ್ ಅಲಿ ಖಾನ್ ಬಿದ್ದಿದ್ದಾಗ ಅವರ ಸಹಾಯಕ ಸಿಬ್ಬಂದಿಯಲ್ಲಿ ಒಬ್ಬರು ಹೊರಗೆ ಓಡಿ ಬಂದು ಸಹಾಯಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅಲ್ಲಿಯೇ ಇದ್ದ ಆಟೋದವರೊಬ್ಬರು ಸೈಫ್ ಅವರನ್ನು ಆಸ್ಪತ್ರೆಗೆ ಸೇರಿದ್ದಾರೆ. ಅಂದು ರಾತ್ರಿ ನಡೆದ ಘಟನೆಯ ಬಗ್ಗೆ ಆಟೋ ಚಾಲಕ ಮಾಧ್ಯಮಗಳ ಬಳಿ ಮಾತನಾಡಿದ್ದಾರೆ.
ಅಂದಹಾಗೆ ಸೈಫ್ ಅಲಿ ಖಾನ್ ಅನ್ನು ತ್ವರಿತವಾಗಿ ಆಸ್ಪತ್ರೆಗೆ ಸೇರಿಸಿ ಅವರ ಜೀವ ಉಳಿಯುವಂತೆ ಮಾಡಿದ್ದು ಆಟೋ ಚಾಲಕ ಭಜನ್ ಸಿಂಗ್. ಮಧ್ಯ ರಾತ್ರಿ ಸಮಯದಲ್ಲಿ ಸೈಫ್ ಅಲಿ ಖಾನ್ರ ಸಹಾಯಕ ಹರಿ ಎಂಬಾತ ಹೊರಗೆ ಬಂದು ಸಹಾಯಕ್ಕಾಗಿ ಅಂಗಲಾಚುತ್ತಿದ್ದುದನ್ನು ಗಮನಿಸಿದ ಭಜನ್ ಸಿಂಗ್, ಕೂಡಲೇ ಧಾವಿಸಿ ಬಂದಿದ್ದಾರೆ. ಆಟೋದಲ್ಲಿ ಬಿಳಿ ಬಟ್ಟೆ ತೊಟ್ಟು ರಕ್ತದಿಂದ ತೊಯ್ದು ಹೋಗಿದ್ದ ವ್ಯಕ್ತಿ ಹತ್ತಿದ್ದನ್ನಷ್ಟೆ ನೋಡಿದ ಭಜನ್ ಸಿಂಗ್ಗೆ ಆ ವ್ಯಕ್ತಿ ಸೈಫ್ ಅಲಿ ಖಾನ್ ಎಂಬುದು ಸಹ ಗೊತ್ತಾಗಿಲ್ಲ.
ಇದನ್ನೂ ಓದಿ:ಸೈಫ್ ಅಲಿ ಖಾನ್ ಮೇಲೆ ದಾಳಿ ಮಾಡಿದವ ಬಾಂಗ್ಲಾದೇಶಿ ಪ್ರಜೆ
ಇದೀಗ ಮಾಧ್ಯಮಗಳೊಂದಿಗೆ ಮಾತನಾಡಿರುವ ಭಜನ್ ಸಿಂಗ್, ‘ರಕ್ತದಲ್ಲಿ ನೆನೆಯುತ್ತಿದ್ದ ವ್ಯಕ್ತಿ ನನ್ನ ಆಟೋ ಹತ್ತಿದ್ದಷ್ಟೆ ಗೊತ್ತು, ಅದು ಯಾರೆಂದು ಸಹ ಆಗ ನಾನು ನೋಡಲಿಲ್ಲ. ನನ್ನ ಗುರಿ ಇದ್ದಿದ್ದು ಆದಷ್ಟು ಶಾರ್ಟ್ ಕಟ್ಗಳನ್ನು ತೆಗೆದುಕೊಂಡು ಆ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಬೇಕಿತ್ತು. ಆ ಕಾರ್ಯವನ್ನು ನಾನು ಮಾಡಿದೆ. ಆ ದಿನ ಸೈಫ್ ಅಲಿ ಖಾನ್ ಬಿಳಿ ಬಟ್ಟೆ ತೊಟ್ಟಿದ್ದರು. ಅವರೊಟ್ಟಿಗೆ ಅವರ ಸಹಾಯಕ ಹಾಗೂ ಅವರ ಪುತ್ರ ತೈಮೂರ್ ಮಾತ್ರವೇ ಇದ್ದರು’ ಎಂದಿದ್ದಾರೆ ಭಜನ್ ಸಿಂಗ್.
ಗಾಯಗೊಂಡಿದ್ದ ಸೈಫ್ ಅಲಿ ಖಾನ್ ನನ್ನ ಆಟೋ ಹತ್ತಿದಾಗ ಪ್ರಜ್ಞೆಯಲ್ಲಿಯೇ ಇದ್ದರು. ಅವರು ಗಾಬರಿ ಆಗಿರಲಿಲ್ಲ. ಸಾವಧಾನವಾಗಿಯೇ ಇದ್ದರು, ಆಸ್ಪತ್ರೆ ತಲುಪಲು ಇನ್ನೆಷ್ಟು ಸಮಯ ಬೇಕಾಗುತ್ತದೆ ಎಂದಷ್ಟೆ ಅವರು ಕೇಳಿದರು. ಅವರ ಸಾವಧಾನದ ಸ್ವಭಾವ ನನಗೆ ಬಹಳ ಹಿಡಿಸಿತು. ಸೈಫ್ ಅವರನ್ನು ತ್ವರಿತವಾಗಿ ಆಸ್ಪತ್ರೆಗೆ ತಲುಪಸಿದ್ದರ ಬಗ್ಗೆ ನನಗೆ ಬಹಳ ಖುಷಿ ಇದೆ’ ಎಂದಿದ್ದಾರೆ ಭಜನ್ ಸಿಂಗ್. ‘ಅಲ್ಲದೆ ನಾನು ಅವರ ಬಳಿ ಹಣವನ್ನು ಸಹ ತೆಗೆದುಕೊಳ್ಳಲಿಲ್ಲ, ನನ್ನ ಗುರಿ ಅವರನ್ನು ಆಸ್ಪತ್ರೆಗೆ ಸೇರಿಸುವುದು ಅಷ್ಟೆ ಆಗಿತ್ತು’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:29 pm, Sun, 19 January 25