ಸರ್ಜರಿಯ ನಂತರ ಸೈಫ್ ಇಷ್ಟು ಬೇಗ ಚೇತರಿಸಿಕೊಂಡಿದ್ದು ಹೇಗೆ? ಇಲ್ಲಿದೆ ಉತ್ತರ
Saif Ali Khan: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಅಗಂತುಕನೊಬ್ಬ ದಾಳಿ ಮಾಡಿ ಆರು ಬಾರಿ ಚಾಕುವನಿಂದ ಇರಿದಿದ್ದ. ಗಾಯಗೊಂಡು ಲೀಲಾವತಿ ಆಸ್ಪತ್ರೆ ಸೇರಿದ್ದ ಸೈಫ್ ಅಲಿ ಖಾನ್, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಆರಾಮವಾಗಿ ನಡೆಯುತ್ತಾ ಮನೆ ಸೇರಿದ್ದರು. ಇದನ್ನು ಕಂಡು ಹಲವರು ಶಾಕ್ ಆಗಿದ್ದರು. ಆದರೆ ಸೈಫ್ ಇಷ್ಟು ಬೇಗ ಗುಣಮುಖ ಆಗಿದ್ದು ಹೇಗೆ? ಇಲ್ಲಿದೆ ಮಾಹಿತಿ.
![ಸರ್ಜರಿಯ ನಂತರ ಸೈಫ್ ಇಷ್ಟು ಬೇಗ ಚೇತರಿಸಿಕೊಂಡಿದ್ದು ಹೇಗೆ? ಇಲ್ಲಿದೆ ಉತ್ತರ](https://images.tv9kannada.com/wp-content/uploads/2025/01/saif-ali-khan-15.jpg?w=1280)
ನಟ ಸೈಫ್ ಅಲಿ ಖಾನ್ ಅವರು ಜನವರಿ 16ರಂದು ಬಾಂದ್ರಾದ ಅವರ ನಿವಾಸದಲ್ಲಿ ಕಳ್ಳನಿಂದ ಇರಿಯಲ್ಪಟ್ಟಿದ್ದರು. ಸೈಫ್ಗೆ ಕಳ್ಳ ಚಾಕುವಿನಿಂದ ಆರು ಬಾರಿ ಇರಿದಿದ್ದಾನೆ. ಅವರಲ್ಲಿ ಎರಡು ಗಾಯ ಆಳವಾಗಿತ್ತು. ಲೀಲಾವತಿ ಆಸ್ಪತ್ರೆಯಲ್ಲಿ ಸೈಫ್ ಸರ್ಜರಿ ಮಾಡಿಸಿಕೊಂಡರು. ಇಷ್ಟೇ ಅಲ್ಲ, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವೈದ್ಯರು ಬೆನ್ನುಮೂಳೆಯ ಬಳಿ ಹುದುಗಿದ್ದ ಎರಡೂವರೆ ಇಂಚಿನ ಚಾಕುವನ್ನು ತೆಗೆದುಹಾಕಿದ್ದಾರೆ. ಐದು ದಿನಗಳ ಚಿಕಿತ್ಸೆಯ ನಂತರ ಜನವರಿ 21ರಂದು ಅವರನ್ನು ಬಿಡುಗಡೆ ಮಾಡಲಾಯಿತು. ಮನೆಗೆ ವಾಪಸಾಗುತ್ತಿದ್ದಾಗ ಸೈಫ್ ಸರಿಯಾಗಿ ನಡೆದುಕೊಂಡು ಹೋಗುತ್ತಿರುವುದನ್ನು ಕಂಡು ಕೆಲವರು ಪ್ರಶ್ನೆಗಳನ್ನು ಎತ್ತಿದರು . ಇಷ್ಟು ತೀವ್ರ ಪೆಟ್ಟು ತಿಂದ ಸೈಫ್ ಇಷ್ಟು ಬೇಗ ಚೇತರಿಸಿಕೊಂಡಿದ್ದು ಹೇಗೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಇದೀಗ ಸೈಫ್ ಸಹೋದರಿ ಸಬಾ ಪಟೌಡಿ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ.
ಸಬಾ ಪಟೌಡಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನ ಶೀರ್ಷಿಕೆಯಲ್ಲಿ, ‘ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ’ ಎಂದು ಬರೆದಿದ್ದಾರೆ. ಸಬಾ ಅವರು ಹೃದ್ರೋಗ ತಜ್ಞ ವೈದ್ಯ ದೀಪಕ್ ಕೃಷ್ಣಮೂರ್ತಿ ಅವರ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯ ನಂತರವೂ ತನ್ನ 78 ವರ್ಷದ ಅಜ್ಜಿ ಆರಾಮವಾಗಿ ನಡೆಯಲು ಸಾಧ್ಯವಾಯಿತು ಎಂದು ಅದರಲ್ಲಿ ಹೇಳಿದ್ದಾರೆ. ‘ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾದ ಜನರು ಮೂರು ಅಥವಾ ನಾಲ್ಕೇ ದಿನಕ್ಕೆ ಮೆಟ್ಟಿಲುಗಳನ್ನು ಹತ್ತಬಹುದು. ನೀವೇ ಶಿಕ್ಷಣ ಪಡೆದುಕೊಳ್ಳಿ’ ಎಂದು ಈ ಪೋಸ್ಟ್ನಲ್ಲಿ ವ್ಯಂಗ್ಯವಾಡಿದ್ದಾರೆ. ಸಬಾ ಪಟೌಡಿ ತಮ್ಮ ಖಾತೆಯಲ್ಲಿ ಅದೇ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಸೈಫ್ ಚೇತರಿಕೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುವವರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಇದನ್ನೂ ಓದಿ:ಸೈಫ್ ಅಲಿ ಖಾನ್ ಪ್ರಕರಣದಲ್ಲಿ ಹಲವು ಅನುಮಾನ, ಪೊಲೀಸರ ಉತ್ತರ ಏನು?
ಸೈಫ್ ಡಿಸ್ಚಾರ್ಜ್ ಆದ ನಂತರ ಶಿವಸೇನೆ ನಾಯಕ ಸಂಜಯ್ ನಿರುಪಮ್ ಈ ಪ್ರಶ್ನೆಯನ್ನು ಎತ್ತಿದ್ದಾರೆ. ಆಸ್ಪತ್ರೆಯಿಂದ ಹೊರಬಂದ ಕೂಡಲೇ ಸೈಫ್ ಹೇಗೆ ಫಿಟ್ ಆಗಿದ್ದಾರೆ ಎಂದು ಕೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ‘ಸೈಫ್ ಅಲಿ ಖಾನ್ ಬೆನ್ನಿಗೆ 2.5 ಇಂಚುಗಳಷ್ಟು ಚಾಕು ತೂರಿಕೊಂಡಿದೆ ಎಂದು ವೈದ್ಯರು ಹೇಳಿದ್ದಾರೆ. ಬಹುಶಃ ಚಾಕು ಒಳಗೆ ಸಿಲುಕಿಕೊಂಡಿರಬಹುದು. ಸತತ ಆರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಇದೆಲ್ಲ ನಡೆದದ್ದು ಜನವರಿ 16ರಂದು. ಇಂದು ಜನವರಿ 21. ಆಸ್ಪತ್ರೆ ಬಿಟ್ಟ ನಂತರ ಸೈಫ್ ಫಿಟ್ ಆಗಿದ್ದಾರಾ? ಅದೂ ಕೇವಲ ಐದು ದಿನಗಳಲ್ಲಿ? ಅದ್ಭುತವಾಗಿದೆ’ ಎಂದು ನಿರುಪಮ್ ಟ್ವೀಟ್ ಮಾಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ