ಸೈಫ್ ಅಲಿ ಖಾನ್ ಪ್ರಕರಣದಲ್ಲಿ ಹಲವು ಅನುಮಾನ, ಪೊಲೀಸರ ಉತ್ತರ ಏನು?
Saif Ali Khan: ನಟ ಸೈಫ್ ಅಲಿ ಖಾನ್ಗೆ ಚಾಕು ಇರಿತ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ ಪೊಲೀಸರು ತಪ್ಪು ಆರೋಪಿಯನ್ನು ಬಂಧಿಸಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಅಲ್ಲದೆ ಪ್ರಕರಣದ ಬಗ್ಗೆ ಹಲವು ಅನುಮಾನಗಳು ಎದ್ದಿದ್ದು ಇದೀಗ ಮುಂಬೈ ಪಶ್ಚಿಮ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಅನುಮಾನಗಳಿಗೆ ಉತ್ತರ ನೀಡಿದ್ದಾರೆ.
![ಸೈಫ್ ಅಲಿ ಖಾನ್ ಪ್ರಕರಣದಲ್ಲಿ ಹಲವು ಅನುಮಾನ, ಪೊಲೀಸರ ಉತ್ತರ ಏನು?](https://images.tv9kannada.com/wp-content/uploads/2025/01/saif-ali-khan-14.jpg?w=1280)
ನಟ ಸೈಫ್ ಅಲಿ ಖಾನ್ ಮೇಲೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ನಡೆಸುತ್ತಿರುವ ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸೈಫ್ ಅಲಿ ಖಾನ್ ಮೇಳೆ ದಾಳಿ ಮಾಡಿದ ವ್ಯಕ್ತಿ ಹಾಗೂ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಮಹಿಳೆಯೊಬ್ಬಾಕೆಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆದರೆ ಸೈಫ್ ಅಲಿ ಖಾನ್ ಮೇಲೆ ದಾಳಿ ಮಾಡಿದ ವ್ಯಕ್ತಿಯ ಬಂಧನದ ಬಗ್ಗೆ ಹಲವರು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಆ ಬಗ್ಗೆ ಮುಂಬೈ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಮುಂಬೈ ಪಶ್ಚಿಮ ವಿಭಾಗದ ಎಡಿಜಿಪಿ ಪರಮ್ಜೀತ್ ದಹಿಯಾ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದು, ‘ನಾವು (ಪೊಲೀಸರು) ಸರಿಯಾದ ಆರೋಪಿಯನ್ನೇ ಹಿಡಿದಿದ್ದೇವೆ ಎಂಬುದನ್ನು ಸಾಬೀತುಪಡಿಸಲು ಸಾಕಷ್ಟು ಸಾಕ್ಷ್ಯಗಳು ಇವೆ. ಸಾಕ್ಷ್ಯಗಳ ಆಧಾರದಲ್ಲಿಯೇ ನಾವು ಆರೋಪಿಯನ್ನು ಬಂಧಿಸಿದ್ದೇವೆ’ ಎಂದಿದ್ದಾರೆ. ಸೈಫ್ ಅಲಿ ಖಾನ್ ಮನೆಯಲ್ಲಿ ಕಲೆ ಹಾಕಲಾಗಿರುವ ಬೆರಳಚ್ಚು ಮತ್ತು ಈಗ ಬಂಧಿಸಲಾಗಿರುವ ಆರೋಪಿಯ ಬೆರಳಚ್ಚು ಮ್ಯಾಚ್ ಆಗುತ್ತಿಲ್ಲ ಎಂಬ ಸುದ್ದಿಯನ್ನು ತಳ್ಳಿ ಹಾಕಿರುವ ಎಡಿಜಿಪಿ ಪರಮ್ಜೀತ್ ದಹಿಯಾ, ಸೈಫ್ ಮನೆಯಲ್ಲಿ ಕಲೆಹಾಕಲಾಗಿರುವ ಬೆರಳಚ್ಚಿನ ಜೊತೆಗೆ ಆರೋಪಿಯ ಬೆರಳಚ್ಚನ್ನು ಹೋಲಿಸಿ ನೋಡಲಾಗಿಲ್ಲ, ಬೆರಳಚ್ಚು ಮಾಹಿತಿ ನಮಗೆ ಇನ್ನೂ ಲಭ್ಯ ಆಗಿಲ್ಲ’ ಎಂದಿದ್ದಾರೆ.
ಸೈಫ್ ಅಲಿ ಖಾನ್ ಮೇಲೆ ದಾಳಿ ನಡೆದ ಸಮಯಕ್ಕೂ ಸೈಫ್ ಅಲಿ ಖಾನ್ ಆಸ್ಪತ್ರೆಗೆ ದಾಖಲಾದ ಸಮಯಕ್ಕೂ ಅಂತರ ಇರುವ ಬಗ್ಗೆ ಉತ್ತರಿಸಿರುವ ಪೊಲೀಸ್ ವರಿಷ್ಠಾಧಿಕಾರಿ, ‘ಲೀಲಾವತಿ ಆಸ್ಪತ್ರೆ ಸಿಸಿಟಿವಿ ಫುಟೇಜ್ ಪ್ರಕಾರ ಸೈಫ್ ಅಲಿ ಖಾನ್ 2:47ಕ್ಕೆ ಆಸ್ಪತ್ರೆಗೆ ಬಂದಿರುವುದು ಗೊತ್ತಾಗಿದೆ. ಆದರೆ ಆಸ್ಪತ್ರೆಯವರು ತಪ್ಪಿನಿಂದ ಅಥವಾ ಆಡಳಿತ ಕಾರಣದಿಂದ 4:10ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಬರೆದಿರುವ ಸಾಧ್ಯತೆ ಇದೆ ಎಂದಿದ್ದಾರೆ. ಸೈಫ್ ಅಲಿ ಖಾನ್ ಮನೆಯಲ್ಲಿ ಕಲೆ ಹಾಕಲಾಗಿರುವ ಸಾಕ್ಷ್ಯಗಳ ಬಗ್ಗೆ ಮಾತನಾಡಿರುವ ಪೊಲೀಸರು. ಸೈಫ್ ಅಲಿ ಖಾನ್ ಮನೆಯಲ್ಲಿ ಡಿಜಿಟಲ್, ಫಿಸಿಕಲ್ ಮತ್ತು ಓರಲ್ (ಡಿಜಿಟಲ್, ವಸ್ತುಗಳು ಮತ್ತು ಹೇಳಿಕೆ) ರೀತಿಯ ಸಾಕ್ಷ್ಯಗಳನ್ನು ಕಲೆ ಹಾಕಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ:ಸೈಫ್ ಅಲಿ ಖಾನ್ ಪ್ರಕರಣ: ದಾಳಿಕೋರನನ್ನು ಪೊಲೀಸರು ಹಿಡಿದಿದ್ದು ಹೇಗೆ?
ಸೈಫ್ ಅಲಿ ಖಾನ್ ಮನೆಗೆ ಜನವರಿ 16ರ ತಡರಾತ್ರಿ ನುಗ್ಗಿದ್ದ ಅಗಂತುಕ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದ. ಜನವರಿ 17ರ ಮಧ್ಯಾಹ್ನದ ವೇಳೆ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ದಾಳಿಕೋರನ ಚಿತ್ರವೊಂದನ್ನು ಬಿಡುಗಡೆ ಮಾಡಲಾಗಿತ್ತು. ಅದಾದ ಸುಮಾರು ಎರಡು ದಿನದ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದರು. ಆದರೆ ಬಂಧಿತ ಆರೋಪಿಗೂ ಸಿಸಿಟಿವಿ ದೃಶ್ಯದಲ್ಲಿರುವ ವ್ಯಕ್ತಿಗೂ ಸಾಮ್ಯತೆ ಇಲ್ಲ ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಬಂಧಿತ ಆರೋಪಿ ಬಾಂಗ್ಲಾದೇಶಿ ಆಗಿದ್ದು ಆತನ ಪೋಷಕರು ಸಹ ಸಿಸಿಟಿವಿ ದೃಶ್ಯದಲ್ಲಿ ಇರುವುದು ನನ್ನ ಪುತ್ರನಲ್ಲ ಎಂದಿದ್ದಾರೆ. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದಲ್ಲಿ ಮಹಿಳೆಯೊಬ್ಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ