ಮಲ್ಲಿಕಾರ್ಜುನ ಖರ್ಗೆ ಪೂರ್ತಿ ಫಿಟ್: ಪೇಸ್‌ಮೇಕರ್ ಅಳವಡಿಕೆ ನಂತರ ಆಸ್ಪತ್ರೆಯಿಂದ ಬಿಡುಗಡೆಯಾದ ಎಐಸಿಸಿ ಅಧ್ಯಕ್ಷ
ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದ ಮಲ್ಲಿಕಾರ್ಜುನ ಖರ್ಗೆಗೆ ಯಶಸ್ವಿಯಾಗಿ ಪೇಸ್‌ಮೇಕರ್ ಅಳವಡಿಸಲಾಗಿದ್ದು, ಚಿಕಿತ್ಸೆ ಬಳಿಕ ಖರ್ಗೆ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ ಅವರು ವಿಶ್ರಾಂತಿ ಪಡೆಯುತ್ತಿದ್ದು, ಶೀಘ್ರದಲ್ಲೇ ರಾಜಕೀಯ ಚಟುವಟಿಕೆಗಳಿಗೆ ಮರಳುವ ನಿರೀಕ್ಷೆಯಿದೆ ಎಂದು ಕಾಂಗ್ರೆಸ್ ಮಾಹಿತಿ ನೀಡಿದೆ.

ಬೆಂಗಳೂರು, ಅಕ್ಟೋಬರ್ 3: ಅನಾರೋಗ್ಯದಿಂದ ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಗುರುವಾರ ಸಂಜೆಯೇ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಅವರಿಗೆ ಪೇಸ್‌ಮೇಕರ್ ಅನ್ನು ಯಶಸ್ವಿಯಗಿ ಅಳವಡಿಸಲಾಗಿದೆ. ಶೀಘ್ರದಲ್ಲೇ ಚೇತರಿಸಿಕೊಂಡ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಖರ್ಗೆ ಆರೋಗ್ಯವಾಗಿದ್ದು, ಮನೆಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಶೀಘ್ರದಲ್ಲೇ ಅವರು ಕರ್ತವ್ಯಕ್ಕೆ ಮರಳಲಿದ್ದಾರೆ. ಖರ್ಗೆ ಅವರ ಆರೋಗ್ಯದ ಕುರಿತು ಕಾಂಗ್ರೆಸ್ (Congress) ಮಾಹಿತಿ ಹಂಚಿಕೊಂಡಿದೆ. ಖರ್ಗೆ ಜೀ ಚೆನ್ನಾಗಿದ್ದಾರೆ. ನಿಮ್ಮೆಲ್ಲರ ಶುಭ ಹಾರೈಕೆ ಮತ್ತು ಬೆಂಬಲಕ್ಕೆ ಧನ್ಯವಾದಗಳು. ಶೀಘ್ರವೇ ತಮ್ಮ ಚಟುವಟಿಕೆಗಳನ್ನು ಪುನಾರಂಭಿಸುವ ನಿರೀಕ್ಷೆಯಿದೆ ಎಂದು ಕಾಂಗ್ರೆಸ್ ಪ್ರಕಟಣೆ ತಿಳಿಸಿದೆ.
‘ನನ್ನ ಆರೋಗ್ಯಕ್ಕಾಗಿ ಶುಭಾಶಯಗಳ ಮಹಾಪೂರವನ್ನೇ ಹಾರೈಸಿದ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಮತ್ತು ಬೆಂಬಲಿಗರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ನಾನು ಶೀಘ್ರದಲ್ಲೇ ನನ್ನ ಕೆಲಸ ಕಾರ್ಯಗಳನ್ನು ಪ್ರಾರಂಭಿಸಲು ಉದ್ದೇಶಿಸಿದ್ದೇನೆ’ ಎಂದು ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಟ್ವೀಟ್
My sincere thanks to the Congress cadres, leaders and supporters for the outpouring of wishes. My deepest gratitude. 🙏
I intend to start my work schedule soon. https://t.co/YbioqVkNPP
— Mallikarjun Kharge (@kharge) October 2, 2025
ಮಲ್ಲಿಕಾರ್ಜುನ ಖರ್ಗೆಗೆ ಏನಾಗಿತ್ತು?
ಉಸಿರಾಟದ ಸಮಸ್ಯೆ ಕಂಡುಬಂದ ಕಾರಣ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಂಗಳವಾರ ರಾತ್ರಿ ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟದಲ್ಲಿ ಅಸಹಜತೆ ಕಂಡುಬಂದ ಕಾರಣ ವೈದ್ಯರ ಸಲಹೆ ಮೇರೆಗೆ ಪೇಸ್‌ಮೇಕರ್ ಅಳವಡಿಸಲು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ, ಅವರಿಗೆ ಯಶಸ್ವಿಯಾಗಿ ಪೇಸ್‌ಮೇಕರ್ ಅಳವಡಿಕೆ ಮಾಡಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ. ಎರಡ್ಮೂರು ದಿನಗಳ ವಿಶ್ರಾಂತಿಯ ನಂತರ ಅವರು ಕೆಲಸ ಕಾರ್ಯಗಳಿಗೆ ಹಾಜರಾಗಲಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಪುತ್ರನೂ ಆಗಿರುವ ಕರ್ನಾಟಕ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದರು.
ಮಲ್ಲಿಕಾರ್ಜುನ ಖರ್ಗೆ ಅನಾರೋಗ್ಯದ ಸುದ್ದಿ ತಿಳಿದ ಕೂಡಲೇ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅನೇಕ ನಾಯಕರು ಖರ್ಗೆ ಅವರ ಆರೋಗ್ಯ ವಿಚಾರಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವಾರು ಹಿರಿಯ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದರೆ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಕೇಂದ್ರ ನಾಯಕರು ದೂರವಾಣಿ ಮೂಲಕ ಮಾತನಾಡಿ ಖರ್ಗೆಗೆ ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದರು.
ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆಗೆ ಪೇಸ್‌ಮೇಕರ್ ಅಳವಡಿಕೆ ಯಶಸ್ವಿ: ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದ ಪ್ರಧಾನಿ ಮೋದಿ
ಇತ್ತ ಖರ್ಗೆ ಆಸ್ಪತ್ರೆಯಿಂದ ಬಿಡುಗಡೆಯಾದ ಸುದ್ದಿ ಕೇಳಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ಸಂತೋಷ ವ್ಯಕ್ತಪಡಿಸಿದ್ದಾರೆ. ಶೀಘ್ರವೇ ಮಲ್ಲಿಕಾರ್ಜುನ ಖರ್ಗೆ ಸಾರ್ವಜನಿಕ ಜೀವನಕ್ಕೆ ಮರಳಿ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.




