AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮಗೆ ಬದುಕು ಬೇಕು. ಚುನಾವಣೆಯೇ ಬೇಡ.. ಮಲೆನಾಡಿನ ಜನರಿಂದ ಚುನಾವಣೆ ಬಹಿಷ್ಕಾರ

ಜಿಲ್ಲಾಡಳಿತ ಚುನಾವಣೆಗೆ ಸಿದ್ಧತೆ ಮಾಡಿಕೊಳ್ತಿದ್ರೆ, ಜನ ಮಾತ್ರ ನೀವು ಏನೇ ಮಾಡಿದ್ರು ನಾವಂತೂ ಚುನಾವಣಾ ಬಹಿಷ್ಕಾರ ಮಾಡಿಯೇ ತೀರುತ್ತೇವೆ ಅಂತಾ ವ್ಯವಸ್ಥೆಗೆ ಸೆಡ್ಡು ಹೊಡೆದಿದ್ದಾರೆ.

ನಮಗೆ ಬದುಕು ಬೇಕು. ಚುನಾವಣೆಯೇ ಬೇಡ.. ಮಲೆನಾಡಿನ ಜನರಿಂದ ಚುನಾವಣೆ ಬಹಿಷ್ಕಾರ
ಚುನಾವಣೆ ಬಹಿಷ್ಕರಿಸಿ ಜನರಿಂದ ರ್ಯಾಲಿ
Follow us
ಆಯೇಷಾ ಬಾನು
|

Updated on:Mar 14, 2021 | 7:47 AM

ಚಿಕ್ಕಮಗಳೂರು: ಈ ಹಿಂದೆ ಬದುಕಿಗಾಗಿ ಎಲೆಕ್ಷನ್ ಬ್ಯಾನ್ ಮಾಡಿದ್ದ ಮಲೆನಾಡಿನ ಗ್ರಾಮಗಳಲ್ಲಿ ಮತ್ತೆ ಚುನಾವಣೆ ದಿನಾಂಕ ಅನೌನ್ಸ್ ಆಗಿದೆ. ಹೀಗಾಗಿ ಜಿಲ್ಲಾಡಳಿತ ಚುನಾವಣೆಗೆ ಸಿದ್ಧತೆ ಮಾಡಿಕೊಳ್ತಿದ್ರೆ, ಜನ ಮಾತ್ರ ನೀವು ಏನೇ ಮಾಡಿದ್ರು ನಾವಂತೂ ಚುನಾವಣಾ ಬಹಿಷ್ಕಾರ ಮಾಡಿಯೇ ತೀರುತ್ತೇವೆ ಅಂತಾ ವ್ಯವಸ್ಥೆಗೆ ಸೆಡ್ಡು ಹೊಡೆದಿದ್ದಾರೆ. ಹಾಗಾದ್ರೆ ಅಲ್ಲಿ ಆಗ್ತಿರೋದು ಏನು? ಅದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ಕಸ್ತೂರಿ ರಂಗನ್ ವರದಿ, ಹುಲಿ ಸಂರಕ್ಷಿತ ಪ್ರದೇಶ, ಪರಿಸರ ಸೂಕ್ಷ್ಮ ವಲಯ ಸೇರಿದಂತೆ ಮುಳ್ಳಯ್ಯನ ಗಿರಿ ಮೀಸಲು ಅರಣ್ಯದ ಆತಂಕದಿಂದ ಜನ ರೊಚ್ಚಿಗೆದ್ದಿದ್ದರು. ಕಾಫಿನಾಡಿನ 14 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರು ಡಿಸೆಂಬರ್​ನಲ್ಲಿ ನಡೆದಿದ್ದ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು. ಸರ್ಕಾರದ ಕ್ರಮದ ವಿರುದ್ಧ ಧ್ವನಿ ಎತ್ತಿದ್ದರು. ಆದ್ರೆ ಈಗ ಮತ್ತೆ ಚುನಾವಣಾ ಆಯೋಗ ಎಲೆಕ್ಷನ್​ಗೆ ಡೇಟ್ ಫಿಕ್ಸ್ ಮಾಡಿದೆ. ಜಿಲ್ಲಾಡಳಿತ ಚುನಾವಣೆ ತಯಾರಿಯಲ್ಲಿದೆ. ಆದ್ರೆ ಜನ ಮತ್ತೆ ಚುನಾವಣೆ ಬಹಿಷ್ಕಾರದ ಸಿದ್ಧತೆಯಲ್ಲಿದ್ದಾರೆ. ಕರಪತ್ರ ಹಂಚುತ್ತಿದ್ದಾರೆ. ಬ್ಯಾನರ್ ಕಟ್ಟುತ್ತಿದ್ದಾರೆ. ನಮಗೆ ಬದುಕು ಬೇಕು. ಚುನಾವಣೆಯೇ ಬೇಡ ಅಂತ ಸರ್ಕಾರಕ್ಕೆ ಆಗ್ರಹಿಸ್ತಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಿದಾಗ ಸ್ಥಳಕ್ಕೆ ಬಂದಿದ್ದ ಮುಖಂಡರು, ಅಧಿಕಾರಿಗಳು ಎಲೆಕ್ಷನ್​ನ ನಂತರ ಮತ್ತೆ ಕಷ್ಟ-ಸುಖ, ದೂರುಗಳನ್ನ ಕೇಳಲು ಬರ್ಲಿಲ್ಲ ಅಂತ ಜನ ವ್ಯವಸ್ಥೆ ವಿರುದ್ಧ ಗರಂ ಆಗಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಜಾಗರ ಮತ್ತು ಖಾಂಡ್ಯ ಹೋಬಳಿಯಲ್ಲಿ 7ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳು ಹಾಗೇ ಮೂಡಿಗೆರೆ ತಾಲೂಕಿನ ಊರಬಗೆ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರಕ್ಕೆ ಜನ ನಿರ್ಧಾರಿಸಿದ್ದಾರೆ. ಇನ್ನು ತರೀಕೆರೆ ತಾಲೂಕಿನ ಕೆಂಚಿಕೊಪ್ಪ ಗ್ರಾಮ ಪಂಚಾಯಿತಿಯಲ್ಲೂ ಜನ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಡ್ಯಾಂ ನಿರ್ಮಾಣಕ್ಕಾಗಿ ಜಾಗ ಬಿಟ್ಟುಕೊಟ್ಟು ದಶಕ ಕಳೆದ್ರೂ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ಈಗಾಗಲೇ ಹಳ್ಳಿಗರು ಎರಡ್ಮೂರು ಸುತ್ತಿನ ಮಾತುಕತೆ ನಡೆಸಿ ಚುನಾವಣೆಗಿಂತ ಬದುಕೇ ದೊಡ್ಡದ್ದೆಂದು ನಿರ್ಧರಿಸಿದ್ದಾರೆ. ಸರ್ಕಾರ ಬೇಡಿಕೆ ಈಡೇರಿಸದಿದ್ರೆ ಕೇವಲ ಗ್ರಾಪಂ ಚುನಾವಣೆಯಷ್ಟೇ ಅಲ್ಲದೆ ಮುಂಬರೋ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯನ್ನೂ ಬಹಿಷ್ಕರಿಸೋದಾಗಿ ಎಚ್ಚರಿಸಿದ್ದಾರೆ.

ಒಟ್ಟಾರೆ, ಕಳೆದ ಬಾರಿ ಬಹಿಷ್ಕಾರವಾಗಿದ್ದ ಕಡೆಗಳಲ್ಲಿ ಆಯೋಗ ಎರಡನೇ ಬಾರಿ ಚುನಾವಣೆಗೆ ದಿನಾಂಕ ನಿಗದಿ ಮಾಡಿದೆ. ಅಂದು ಸ್ಥಳಕ್ಕೆ ಹೋಗಿ ಭರವಸೆ ಕೊಟ್ಟಿದ್ದ ಅಧಿಕಾರಿಗಳು ಇಂದಿಗೂ ಮತ್ತೆ ಹೋಗಿ ಮುಖ ಹಾಕಿಲ್ಲ. ಜನರ ಕಷ್ಟ-ಸುಖ ಕೇಳಿಲ್ಲ. ಮೊದಲು ನಮ್ಮ ಸಮಸ್ಯೆ ಬಗೆಹರಿಸಿ ಬಳಿಕ ಮತ ಕೇಳಿ ಅಂತಿದ್ದಾರೆ. ಜನರ ಆಕ್ರೋಶದ ಜ್ವಾಲೆಯನ್ನ ಅಧಿಕಾರಿಗಳು ಹಾಗೂ ಸರ್ಕಾರ ಹೇಗೆ ತಣ್ಣಗಾಗಿಸುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಚುನಾವಣೆಗೆ ಬಹಿಷ್ಕಾರ ಹಾಕಿದ ನಾಲ್ಕು ಗ್ರಾಮ ಪಂಚಾಯಿತಿಗಳು

Published On - 7:42 am, Sun, 14 March 21