ಮನೆಯ ತಾರಸಿಯಲ್ಲಿ ಜೀವಿಗಳಿಗೆ ಆಶ್ರಯ ನೀಡಿ ಮಾದರಿಯಾದ ಹುಬ್ಬಳ್ಳಿಯ ದೇವಾನಂದ್ ಜಗಾಪೂರ
ಇಲ್ಲೊಬ್ಬರು ತನ್ನ ಮನೆಯ ಟೆರೇಸ್ ವಿನೂತನವಾಗಿ ಬಳಕೆ ಮಾಡಿಕೊಂಡಿದ್ದು, ಹಲವಾರು ಜೀವಿಗಳಿಗೆ ಆಶ್ರಯದಾತನಾಗುವ ಮೂಲಕ ತನ್ನ ಜೀವನದ ಸಾರ್ಥಕತೆಯನ್ನು ಕಂಡುಕೊಳ್ಳುತ್ತಿದ್ದಾರೆ. ಯಾರವರು ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಹುಬ್ಬಳ್ಳಿ: ಮನೆ ತಾರಸಿ ಮೇಲೆ ತರಕಾರಿ ಬೆಳೆದು ಕೃಷಿ ಮಾಡಿರೋದನ್ನು ನೋಡುತ್ತಲೇ ಇರುತ್ತೇವೆ. ಆದರೆ, ಇಲ್ಲೊಬ್ಬರು ತನ್ನ ಮನೆಯ ಟೆರೇಸ್ ವಿನೂತನವಾಗಿ ಬಳಕೆ ಮಾಡಿಕೊಂಡಿದ್ದು, ಹಲವಾರು ಜೀವಿಗಳಿಗೆ ಆಶ್ರಯದಾತನಾಗುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಪಕ್ಷಿಗಳ ಬಗ್ಗೆ ಪ್ರೇಮವನ್ನು ಮೆರೆಯುವ ಮೂಲಕ ಹುಬ್ಬಳ್ಳಿಯಲ್ಲೊಬ್ಬರು ತನ್ನ ಮನೆಯ ಟೆರೇಸ್ ಮೇಲೆ ಪಕ್ಷಿಗಳಿಗೆ ಆಶ್ರಯವನ್ನು ನೀಡುವ ಮೂಲಕ ಐವತ್ತಕ್ಕೂ ಹೆಚ್ಚು ಲವ್ ಬರ್ಡ್ಸ್ ಸಾಕಿದ್ದಾರೆ. ಅವರೇ, ಹುಬ್ಬಳ್ಳಿಯ ಬೆಂಗೇರಿಯ ವೆಂಕಟೇಶ್ವರ ಕಾಲೋನಿಯ ನಿವಾಸಿ ದೇವಾನಂದ್ ಜಗಾಪೂರ.
ಮೊದಲು ಹವ್ಯಾಸದಿಂದ ನಾಯಿ, ಪಾರಿವಾಳ ಸಾಕುತ್ತಿದ್ದ ದೇವಾನಂದ್ ಈಗ ಐವತ್ತಕ್ಕೂ ಹೆಚ್ಚು ಲವ್ ಬರ್ಡ್ಸ್ ಸಾಕಿದ್ದಾರೆ. ಮನೆಯ ಮೇಲ್ಛಾವಣಿಯಲ್ಲಿ ಒಂದು ಶೆಡ್ ನಿರ್ಮಾಣ ಮಾಡಿ ಅವುಗಳಿಗೆ ಅರಣ್ಯದ ಸೊಬಗನ್ನು ಕೂಡ ಅವರೇ ನಿರ್ಮಾಣ ಮಾಡಿದ್ದಾರೆ.
ಈ ಕುರಿತಂತೆ tv9 ಡಿಜಿಟಲ್ ಜೊತೆ ಮಾತನಾಡಿದ ದೇವಾನಂದ್, ಮನೆಗೆ ಬಂದ ಅತಿಥಿಗಳು ಲವ್ ಬರ್ಡ್ಸ್ ನೋಡಿ ಆನಂದಿಸುತ್ತಾರೆ. ಇಂತಹ ಹವ್ಯಾಸದಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಆರೋಗ್ಯ ವೃದ್ಧಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮನೆ ಮಂದಿಯೂ ಸಾಥ್: ಇನ್ನೂ ದೇವಾನಂದ್ ಜಗಾಪೂರ ಅವರು ಮಾತ್ರವಲ್ಲದೆ ಮನೆಯ ಮಂದಿ ಕೂಡ ಇವರಿಗೆ ಸಾಥ್ ನೀಡಿತ್ತ ಬಂದಿದ್ದಾರೆ. ಮಕ್ಕಳು ಮೊಮ್ಮಕ್ಕಳು ಕೂಡ ಈ ಲವ್ ಬರ್ಡ್ಸ್ ಪೋಷಣೆಗೆ ಕೈ ಜೋಡಿಸಿರುವುದು ವಿಶೇಷವಾಗಿದೆ. ಮಕ್ಕಳಿಗೆ ಲವ್ ಬರ್ಡ್ಸ್ ಅಂದ್ರೇ ತುಂಬಾ ಅಚ್ಚು ಮೆಚ್ಚು ಅಜ್ಜನ ಕಾರ್ಯಕ್ಕೆ ಮೊಮ್ಮಕ್ಕಳು ಕೂಡ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.