ನಾಗಮಂಗಲ ಕೋಮುಗಲಭೆ ಪ್ರಕರಣ: ಬಂಧಿತ 55 ಆರೋಪಿಗಳಿಗೆ ಜಾಮೀನು ಮಂಜೂರು

| Updated By: ಗಂಗಾಧರ​ ಬ. ಸಾಬೋಜಿ

Updated on: Sep 27, 2024 | 9:44 PM

ಗಣೇಶನ ಮೂರ್ತಿ ವಿಸರ್ಜನೆ ವೇಳೆ ಕೋಮುಗಲಭೆ ಆರಂಭಗೊಂಡು ಜಿಲ್ಲೆಯ ನಾಗಮಂಗಲ ಹೊತ್ತಿ ಉರಿದಿತ್ತು. ಕಿಡಿಗೇಡಿಗಳು ಕಂಡಕಂಡಲ್ಲಿ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಿದ್ದರು. ಈ ಪ್ರಕರಣದಲ್ಲಿ ಬಂಧಿಸಿದ್ದ 55 ಆರೋಪಿಗಳಿಗೆ ಇದೀಗ ಜಾಮೀನು ಮಂಜೂರು ಮಾಡಲಾಗಿದೆ. ನಾಳೆ, ನಾಡಿದ್ದು ರಜೆ ಹಿನ್ನೆಲೆ ಸೋಮವಾರ ಬಿಡುಗಡೆ ಆಗಲಿದ್ದಾರೆ.

ನಾಗಮಂಗಲ ಕೋಮುಗಲಭೆ ಪ್ರಕರಣ: ಬಂಧಿತ 55 ಆರೋಪಿಗಳಿಗೆ ಜಾಮೀನು ಮಂಜೂರು
ನಾಗಮಂಗಲ ಕೋಮುಗಲಭೆ ಪ್ರಕರಣ: ಬಂಧಿತ 55 ಆರೋಪಿಗಳಿಗೆ ಜಾಮೀನು ಮಂಜೂರು
Follow us on

ಮಂಡ್ಯ, ಸೆಪ್ಟೆಂಬರ್​ 27: ಜಿಲ್ಲೆಯ ನಾಗಮಂಗಲದಲ್ಲಿ (Nagamangala Riot) ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದಿದ್ದ ಕೋಮುಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ 55 ಆರೋಪಿಗಳಿಗೆ ಮಂಡ್ಯ 1ನೇ ಜಿಲ್ಲಾ & ಸೆಷನ್ಸ್​ ಕೋರ್ಟ್​ನಿಂದ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ನಾಳೆ, ನಾಡಿದ್ದು ರಜೆ ಹಿನ್ನೆಲೆ ಸೋಮವಾರ ಬಿಡುಗಡೆ ಮಾಡಲಿದ್ದಾರೆ. ಸೆಪ್ಟೆಂಬರ್ 11ರಂದು ಆರೋಪಿಗಳನ್ನು ಬಂಧಿಸಲಾಗಿತ್ತು.

ಗಣೇಶನ ಮೂರ್ತಿ ವಿಸರ್ಜನೆ ವೇಳೆ ಕೋಮುಗಲಭೆ ಆರಂಭಗೊಂಡು ಜಿಲ್ಲೆಯ ನಾಗಮಂಗಲ ಹೊತ್ತಿ ಉರಿದಿತ್ತು. ಕಿಡಿಗೇಡಿಗಳು ಕಂಡಕಂಡಲ್ಲಿ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಿದ್ದರು. ಇಡೀ ಪ್ರಕರಣದ ಕೇಂದ್ರಬಿಂದು ಬದ್ರಿಕೊಪ್ಪಲು ಗ್ರಾಮ ಅಕ್ಷರಸಹಃ ಸ್ಮಶಾನ ಮೌನವಾಗಿತ್ತು. ಬಂಧನ ಭೀತಿಯಲ್ಲಿ ಹಲವು ಯುವಕರು ಗ್ರಾಮವನ್ನ ತೊರೆದಿದ್ದರು.

ಇದನ್ನೂ ಓದಿ: ನಾಗಮಂಗಲ ಗಲಭೆ ಕೇಸ್​: ಬಂಧನ ಭೀತಿಯಲ್ಲಿ ಗ್ರಾಮ ತೊರೆದಿದ್ದ ಯುವಕ ಸಾವು

ಘಟನೆ ನಡೆದ ಹದಿನೈದು ದಿನಗಳು ಕಳೆಯುತ್ತಾ ಬಂದರೂ ಗ್ರಾಮದತ್ತ ಮುಖ ಮಾಡಿಲ್ಲ. ಅದರಲ್ಲೂ ಬಂಧನದ ಭೀತಿ ಅಲ್ಲಿ ಇದ್ದ ಕಿರಣ್ ಎಂಬಾತ ಬ್ರೈನ್ ಸ್ಟೋಕ್​ನಿಂದಾಗಿ ಇತ್ತೀಚೆಗೆ ಸಾವನ್ನಪ್ಪಿದ್ದ. ಈ ನಿಟ್ಟಿನಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಬದ್ರಿಕೊಪ್ಪಲು ಗ್ರಾಮಕ್ಕೆ ಭೇಟಿ ನೀಡಿ ಕಿರಣ್ ಕುಟುಂಬಕ್ಕೆ ಸಾಂತ್ವನ ಹೇಳಿ, ಆರ್ಥಿಕ ಸಹಾಯ ಮಾಡಿದ್ದಾರೆ.

ಇದನ್ನೂ ಓದಿ: ನಾಗಮಂಗಲ ಗಲಭೆ: ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷನ ಮಕ್ಕಳಿಂದಲೇ ಗಲಾಟೆ, ಬಿಜೆಪಿ ಸತ್ಯ ಶೋಧನಾ ಸಮಿತಿ ವರದಿಯಲ್ಲಿ ಬಹಿರಂಗ

ಘಟನೆಯಲ್ಲಿ ನಾಗಮಂಗಲ‌ ಪಟ್ಟಣದಾದ್ಯಂತ 26 ಅಂಗಡಿಗಳಿಗೆ ಕಿಡಿಗೇಡಿಗಳಿಂದ ಬೆಂಕಿ ಹಚ್ಚಲಾಗಿತ್ತು. ಅದರಲ್ಲಿ 1 ಕೋಟಿ 47 ಲಕ್ಷ‌ ರೂ. ಮೌಲ್ಯದ ಕಟ್ಟಡವಾಗಿದ್ದರೇ, 1 ಕೋಟಿ 18 ಲಕ್ಷ ರೂ. ಮೌಲ್ಯದ ಸರಕು ಬೆಂಕಿಗೆ ಆಹುತಿಯಾಗಿದ್ದವು. ಇನ್ನೂ ವರದಿ ತಯಾರು ಮಾಡಲು ಎಸಿ ನೇತೃತ್ವದಲ್ಲಿ ಏಳು ಅಧಿಕಾರ ತಂಡ ರಚನೆ ಮಾಡಲಾಗಿತ್ತು. ಈ‌ ನಡುವೆ ಎಫ್​ಐಆರ್​ನಲ್ಲಿ 4.5 ಕೋಟಿ ರೂ. ನಷ್ಟದ ಬಗ್ಗೆ ಉಲ್ಲೇಖ ಮಾಡಿರುವುದು ಕಂಡು ಬಂದಿತ್ತು.

ಸದ್ಯ ನಾಗಮಂಗಲ ಪಟ್ಟಣ ಇದೀಗ ಸಹಜಸ್ಥಿತಿಗೆ ಮರಳಿದೆ. ಎಂದಿನಂತೆ ವ್ಯಾಪಾರ, ವಹಿವಾಟು ನಡೆಯುತ್ತಿವೆ. ಆದರೆ ಗಲಾಟೆಯಲ್ಲಿ ಕೆಲವು ಅಮಾಯಕರ ಬಂಧನವಾಗಿದ್ದು, ಸದ್ಯ ಅವರಿಗೂ ಬಿಡುಗಡೆ ಭಾಗ್ಯ ಸಿಕ್ಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.