ನಾಗಮಂಗಲ ಗಲಭೆ: ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷನ ಮಕ್ಕಳಿಂದಲೇ ಗಲಾಟೆ, ಬಿಜೆಪಿ ಸತ್ಯ ಶೋಧನಾ ಸಮಿತಿ ವರದಿಯಲ್ಲಿ ಬಹಿರಂಗ
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನಾ ಗಲಾಟೆ ಸಂಬಂಧ ಬಿಜೆಪಿ ಸತ್ಯ ಶೋಧನಾ ಸಮಿತಿ ಪಕ್ಷಕ್ಕೆ ವರದಿ ಸಲ್ಲಿಸಿದೆ. ತುಷ್ಠೀಕರಣದಿಂದಾಗಿ ಗಲಭೆ ನಡೆಯಲು ಕಾರಣವಾಗಿದ್ದು, ಯೋಜಿತವಾಗಿಯೇ ಕೃತ್ಯ ನಡೆದಿದೆ ಎಂದು ಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ.
ಬೆಂಗಳೂರು/ಮಂಡ್ಯ, (ಸೆಪ್ಟೆಂಬರ್ 20): ನಾಗಮಂಗಲ ಗಲಭೆಗೆ ಸಂಬಂಧಪಟ್ಟಂತೆ ಬಿಜೆಪಿಯಿಂದ ರಚನೆಯಾಗಿದ್ದ ಸತ್ಯ ಶೋಧನಾ ಸಮಿತಿ ಇಂದು ಪಕ್ಷಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ. ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿಯಲ್ಲಿ ಶಾಸಕ ಡಾ. ಅಶ್ವಥ್ ನಾರಾಯಣ ನೇತೃತ್ವದ ಸತ್ಯ ಶೋಧನಾ ಸಮಿತಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ವರದಿ ಹಸ್ತಾಂತರಿಸಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಗಲಭೆ ಪೀಡಿತ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿ ಸಂತ್ರಸ್ಥರನ್ನು ಭೇಟಿ ಮಾಡಿ ಸಮಿತಿ ತನ್ನ ವರದಿಯನ್ನು ತಯಾರಿಸಿದೆ.
ವರದಿಯಲ್ಲಿ ಉಲ್ಲೇಖಿತ ಅಂಶಗಳು
- ಕಾಲ ಕಾಲಕ್ಕೆ ನಡೆದ ತುಷ್ಠೀಕರಣದಿಂದಾಗಿ ನಾಗಮಂಗಲ ಘಟನೆ ನಡೆದಿದೆ.
- ಆಪಾದನೆಗೆ ಒಳಗಾದ ವ್ಯಕ್ತಿಗಳ ವಿರುದ್ಧ ಕೇಸ್ ಗಳನ್ನು ವಾಪಸ್ ಪಡೆಯಲಾಗಿದೆ.
- ಪೊಲೀಸರ ಕೈಗಳನ್ನು ಕಟ್ಟಿ ಹಾಕಲಾಗಿದೆ.
- ಕಳೆದ ವರ್ಷ ಆಗಿದ್ದ ಘಟನೆಯ ಹಿನ್ನೆಲೆ ಇದ್ದರೂ ಕ್ರಮ ವಹಿಸಿಲ್ಲ.
- ಪೆಟ್ರೋಲ್ ಬಾಂಬ್, ಮಾಸ್ಕ್, ನಿರ್ದಿಷ್ಟ ಅಂಗಡಿಗಳಿಗೆ ಬೆಂಕಿ ಎಲ್ಲವೂ ಯೋಜಿತವಾಗಿದೆ.
- ತಲೆಮರೆಸಿಕೊಂಡಿರುವವರಿಗೆ, ಪಿಎಫ್ ಐ ನವರಿಗೆ, ಸಮಾಜ ವಿರೋಧಿ ಕೃತ್ಯಗಳಿಗೆ ನಾಗಮಂಗಲ ನೆಲೆ ಆಗಿದೆ.
- ಪಿಎಫ್ ಐ ಚಟುವಟಿಕೆಗಳಲ್ಲಿ ನಾಗಮಂಗಲದಲ್ಲಿ ಜನ ಆಗಿದ್ದಾಗ್ಗೆ ಭಾಗವಹಿಸುತ್ತಿದ್ದಾರೆ.
- ಎಂಟು ಜನ ಪೊಲೀಸ್ ಸಿಬ್ಬಂದಿಗೆ ಗಲಾಟೆಯಲ್ಲಿ ಗಾಯವಾಗಿದೆ.
- ಅಮಾಯಕರ ಮೇಲೆ ಕೇಸ್ ದಾಖಲಾಗಿದೆ.
- ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷನ ಮಕ್ಕಳು ಗಲಾಟೆ ಶುರು ಮಾಡಿದ್ದಾರೆ, ಅವರ ಮೇಲೆ ಕ್ರಮ ಇಲ್ಲ.
- ಗಲಾಟೆ ಕುರಿತು ಎನ್ ಐಎ ತನಿಖೆ ಆಗಬೇಕು.
- ಸಮಾಜ ವಿರೋಧಿ ವ್ಯಕ್ತಿಗಳು ನಾಗಮಂಗಲದಲ್ಲಿ ನೆಲೆಯಾಗಿದ್ದಾರೆ.
- ಸರ್ಕಾರ ಏನೂ ಪರಿಹಾರ ಕೊಡುವ ಬಗ್ಗೆ ಕ್ರಮ ವಹಿಸಿಲ್ಲ.
- ಹಿಂದು ಸಮಾಜದ ವಿರೋಧವಾಗಿರುವ ವ್ಯಕ್ತಿಗಳಿಗೆ ತುಷ್ಠೀಕರಣ ಆಗಿದೆ.
- ಬೆಂಕಿ ಹಾಕಿದವರ ಆಸ್ತಿಗಳನ್ನು ಮುಟ್ಟುಗೋಲು ಹಾಕಬೇಕು.
ಒಂದು ಪಕ್ಷಕ್ಕೆ ಸಲ್ಲಿಕೆಯಾಗಿರುವ ವರದಿಯನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಗೃಹ ಇಲಾಖೆಗೆ ಕೂಡಾ ಸಲ್ಲಿಕೆ ಮಾಡಲು ಬಿಜೆಪಿ ಯೋಜಿಸಿದೆ. ಕೇಂದ್ರ ಗೃಹ ಸಚಿವರಿಗೂ ವರದಿ ಸಲ್ಲಿಸಿ, ಘಟನೆಗೆ ಕೇರಳ ಮೂಲದ ಲಿಂಕ್ ಬಗ್ಗೆಯೂ ಉಲ್ಲೇಖಿಸಿ ಎನ್ ಐಎ ತನಿಖೆಗೆ ಒತ್ತಡ ಹಾಕುವುದು ಬಿಜೆಪಿಯ ಚಿಂತನೆಯಾಗಿದೆ.
ಇದನ್ನೂ ಓದಿ: ಮಂಡ್ಯ ನಾಗಮಂಗಲ ಗಲಭೆ ಪ್ರಕರಣ: ಮತ್ತೊಬ್ಬ ಅಧಿಕಾರಿಯ ತಲೆದಂಡ
2.66 ಕೋಟಿ ಮೌಲ್ಯದ ಆಸ್ತಿ ನಾಶ
ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಾಗಮಂಗಲದಲ್ಲಿ ಕೋಮುಗಲಭೆ ಸಂಭವಿಸಿತ್ತು. ಈ ಗಲಭೆಯಲ್ಲಿ ಕಿಡಿಗೇಡಿಗಳು ಹಚ್ಚಿದ ಬೆಂಕಿ ಮತ್ತು ಪೆಟ್ರೋಲ್ ಬಾಂಬ್ನಿಂದ ಹಲವು ಅಂಗಡಿಗಳು, ಸರಕುಗಳು ಸುಟ್ಟು ಭಸ್ಮವಾಗಿವೆ. ಗಲಭೆಯಿಂದಾಗಿ ನಾಗಮಂಗಲದಲ್ಲಿ ಅಪಾರ ಮೌಲ್ಯದ ಆಸ್ತಿ-ಪಾಸ್ತಿ ನಾಶವಾಗಿದೆ. ಗಲಭೆಯಿಂದ ಒಟ್ಟು 2.66 ಕೋಟಿ ಮೌಲ್ಯದ ಆಸ್ತಿ ನಾಶವಾಗಿದೆ.
ನಾಗಮಂಗಲ ಪಟ್ಟಣದಾದ್ಯಂತ 26 ಅಂಗಡಿಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. 1 ಕೋಟಿ 47 ಲಕ್ಷ ಮೌಲ್ಯದ ಕಟ್ಟಡಗಳು ಸುಟ್ಟು ಭಸ್ಮವಾಗಿವೆ. 1 ಕೋಟಿ 18 ಲಕ್ಷ ಮೌಲ್ಯದ ಸರಕು ಬೆಂಕಿ ಕೆನ್ನಾಲಿಗೆಯಲ್ಲಿ ಸುಟ್ಟು ಕರಕಲಾಗಿದೆ. ಹಾನಿಗೊಳಗಾದ ಸಂತ್ರಸ್ತರಿಗೆ ಸರ್ಕಾರ ಪರಿಹಾರ ನೀಡುವ ಭರವಸೆ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:44 pm, Fri, 20 September 24