ಸ್ವಾತಂತ್ರ್ಯ ಹೋರಾಟದಿಂದ ದೂರವೇ ಉಳಿದಿತ್ತು ಆರ್​ಎಸ್​ಎಸ್​: ಸಿದ್ದರಾಮಯ್ಯ ಪುನರುಚ್ಚಾರ

ಸ್ವಾತಂತ್ರ್ಯ ಹೋರಾಟದಿಂದ ದೂರವೇ ಉಳಿದಿತ್ತು ಆರ್​ಎಸ್​ಎಸ್​: ಸಿದ್ದರಾಮಯ್ಯ ಪುನರುಚ್ಚಾರ
ಮಂಡ್ಯ ಜಿಲ್ಲೆ ಶಿವಪುರದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ

Congress Foundation Day: ನಮ್ಮ ಜನರು ಅಂದು ಬ್ರಿಟಿಷರ ವಿರುದ್ಧ ಹೋರಾಡಿದ ಶ್ರಮದ ಫಲವನ್ನು ಇಂದು ನಾವು ಅನುಭವಿಸುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 28, 2021 | 6:05 PM


ಮಂಡ್ಯ: ಬ್ರಿಟಿಷರ ವಿರುದ್ಧ ಚಳವಳಿ ನಡೆಸಲು ಹುಟ್ಟಿದ ಸಂಘಟನೆ ಕಾಂಗ್ರೆಸ್ (Indian National Congress). ಸ್ವಾತಂತ್ರ್ಯಕ್ಕಾಗಿ ಹೋರಾಡುವುದಷ್ಟೇ ಕಾಂಗ್ರೆಸ್​ನ ಉದ್ದೇಶವಾಗಿರಲಿಲ್ಲ. ಭಾರತೀಯರ ಕಷ್ಟ ಸುಖವನ್ನು ಆಲಿಸಲು, ಬ್ರಿಟಿಷ್ ದುರಾಡಳಿತದ ವಿರುದ್ಧ ಹೋರಾಟಕ್ಕಾಗಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಕಾಂಗ್ರೆಸ್ ಪಕ್ಷ ಜನ್ಮತಳೆಯಿತು. ಕಾಂಗ್ರೆಸ್ ಪಕ್ಷದ ಇತಿಹಾಸ ಈ ದೇಶದ ಇತಿಹಾಸ. ಕಾಂಗ್ರೆಸ್ ಪಕ್ಷದ ಹೋರಾಟ, ತ್ಯಾಗ, ಬಲಿದಾನದ ಸ್ಮರಣೆ ಅತ್ಯಗತ್ಯ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ (Siddaramiah) ಹೇಳಿದರು. ಮದ್ದೂರು ತಾಲ್ಲೂಕು ಶಿವಪುರದಲ್ಲಿ (Shivapura Satyagraha) ಕಾಂಗ್ರೆಸ್ ಸಂಸ್ಥಾಪನೆ ದಿನದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಜನರು ಅಂದು ಬ್ರಿಟಿಷರ ವಿರುದ್ಧ ಹೋರಾಡಿದ ಶ್ರಮದ ಫಲವನ್ನು ಇಂದು ನಾವು ಅನುಭವಿಸುತ್ತಿದ್ದೇವೆ ಎಂದರು.

ಬ್ರಿಟಿಷರ ಅಧೀನದಲ್ಲಿದ್ದ ಮೈಸೂರು ಮಹಾರಾಜರು ಅವರ ಆದೇಶಗಳನ್ನೇ ಪಾಲಿಸುತ್ತಿದ್ದರು. ಆರ್​ಎಸ್​ಎಸ್​ನವರು ಯಾರೂ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿಲ್ಲ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಗರ ಪಾಲು ಶೂನ್ಯ. ಅಂಥವರು ಇಂದು ಕಾಂಗ್ರೆಸ್ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ ಈ ದೇಶಕ್ಕೆ ನೀಡಿರುವ ಕೊಡುಗೆ ಏನು ಎಂದು ಪ್ರಧಾನಿ ನರೇಂದ್ರ ಮೋದಿ ಕೇಳುತ್ತಾರೆ. ಅವರಿಗೆ ಇತಿಹಾಸ ಗೊತ್ತಿಲ್ಲದಿರಬಹುದು ಅಥವಾ ಗೊತ್ತಿದ್ದರೂ ರಾಜಕೀಯಕ್ಕಾಗಿ ಸುಳ್ಳು ಹೇಳುತ್ತಿರಬಹುದು. ಮೋದಿಯವರೇ ದೇಶದ ಸ್ವಾತಂತ್ರ್ಯಕ್ಕೆ ನಿಮ್ಮ ಕೊಡುಗೆ ಏನು ಎಂದು ನಾನು ಕೇಳುತ್ತೇನೆ. ದೇಶಕ್ಕೆ ಸಾಮಾಜಿಕ, ಆರ್ಥಿಕ ಕೊಡುಗೆ ಕೊಟ್ಟಿದ್ದು ಕಾಂಗ್ರೆಸ್. ಅಂಥ ಪಕ್ಷದ ಸದಸ್ಯನಾಗಿರೋದೇ ನಮಗೆ ಹೆಮ್ಮೆ ಎಂದು ಘೋಷಿಸಿದರು.

ಕೇಂದ್ರ ಸರ್ಕಾರವು ರೈತರಿಗೆ ವಿರುದ್ಧವಾದ ಮೂರು ಕಾಯ್ದೆ ಜಾರಿ ಮಾಡಿತ್ತು. ಆದರೆ ಇದೀಗ ಚುನಾವಣೆ ಹಿನ್ನೆಲೆಯಲ್ಲಿ ಕಾಯ್ದೆಗಳನ್ನು ಹಿಂಪಡೆಯಲಾಗಿದೆ. ನಮ್ಮದು ರೈತರು, ದೇಶದ ಜನರ ಪರವಾದ ಕಾನೂನು. ಇವರು ಕೊಡ್ತಿರೋದು ದೇಶಕ್ಕೆ ಮಾರಕವಾದ ಕಾನೂನು ಎಂದು ಆರೋಪ ಮಾಡಿದರು.

ಕಾಂಗ್ರೆಸ್ ಪಕ್ಷವು ಸ್ಥಾಪನೆಯಾಗಿ 136 ವರ್ಷವಾಗಿದೆ. ಇದೀಗ 137ನೇ ವರ್ಷಾಚರಣೆ ಮಾಡುತ್ತಿದ್ದೇವೆ. ಬ್ರಿಟಿಷರ ವಿರುದ್ಧ ಅಂದು ನಮ್ಮ ಹಿರಿಯರು ಎದೆ ಕೊಟ್ಟ, ರಕ್ತ ಸುರಿಸಿದ ಜನರ ಶ್ರಮದ ಫಲವೇ ನಾವು. ಮೋದಿ ಪ್ರಧಾನಿ ಆಗಿರೋದು ಕೂಡ ಸ್ವಾತಂತ್ರ್ಯ ಹೋರಾಟಗಾರರ ಶ್ರಮದಿಂದ ಎಂದು ನುಡಿದರು. ಮತಾಂತರ ನಿಷೇಧ ಕಾಯ್ದೆಯು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್​ಎಸ್​ಎಸ್​) ಚಿಂತನೆ. ಆರ್​ಎಸ್​ಎಸ್​ ಹೇಳಿದಂತೆ ಬಿಜೆಪಿಯು ಈ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದೆ. ಇದನ್ನ ನಾನು ಅಧಿಕಾರದಲ್ಲಿದ್ದಾಗ ತಂದಿದ್ದು ಎಂದು ಆರೋಪಿಸುತ್ತಿದ್ದಾರೆ. ಆಗ ಈ ವಿಧೇಯಕವನ್ನು ನನ್ನೆದುರು ಇಟ್ಟಿದ್ದರು. ನಾನು ಆಂಜನೇಯಗೆ ಅದನ್ನು ಮುಗಿಸಿಬಿಡು ಅಂದಿದ್ದೆ. ಅದರಂತೆ ಅವರು ವಿಧೇಯಕ ತಿರಸ್ಕರಿಸುವಂತೆ ಟಿಪ್ಪಣಿ ಬರೆದಿದ್ದರು ಎಂದು ವಿವರಿಸಿದರು.

ಬಿ.ಎಸ್.ಯಡಿಯೂರಪ್ಪ ಮತಾಂತರ ನಿಷೇಧ ಕಾಯ್ದೆಯನ್ನು ಬೆಂಬಲಿಸಿದರು. ಈ ಕಾಯ್ದೆ ಆರ್​ಎಸ್​ಎಸ್​ನವರು ಮಾಡಿರೋದು ಎಂದು ಹೇಳಿದೆ. ಹೌದು ಎಂದು ಸಚಿವ ಈಶ್ವರಪ್ಪ ಸದನದಲ್ಲಿ ಒಪ್ಪಿಕೊಂಡ. ಈಶ್ವರಪ್ಪ ಒಬ್ಬ ಪೆದ್ದ ಎಂದು ವ್ಯಂಗ್ಯವಾಡಿದರು. ಪ್ರೀತಿಸಿ ಮದುವೆ ಆಗೋದನ್ನ ಪ್ರಶ್ನಿಸುವುದಕ್ಕೆ ಅವನ್ಯಾರು? ಬಿಜೆಪಿಯವರದ್ದು ಜನ ವಿರೋಧಿ ಆರ್​ಎಸ್​ಎಸ್​ ಸಿದ್ಧಾಂತ. ಕಾಂಗ್ರೆಸ್ ಪಕ್ಷದ್ದು ಜನಪರವಾದ ಸಿದ್ಧಾಂತ. ಬಿಜೆಪಿಯವರು ಜನರನ್ನು ಬೇರ್ಪಡಿಸುತ್ತಾರೆ ಎಂದು ಸಿದ್ದರಾಮಯ್ಯ ನುಡಿದರು.

ಮೇಕೆದಾಟು ಅತ್ಯಗತ್ಯ: ಡಿ.ಕೆ.ಶಿವಕುಮಾರ್
ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾವೇರಿ ಉಳಿವಿಗಾಗಿ ಮೇಕೆದಾಟು ಯೋಜನೆ ಅಗತ್ಯ. ಎಲ್ಲರಿಗಾಗಿ ಈ ಅಭಿಯಾನ ಮಾಡುತ್ತಿದ್ದೇವೆ. 5 ಸಾವಿರ ಎಕರೆ ಜಮೀನಿನಲ್ಲಿ ಮೇಕೆದಾಟು ಯೋಜನೆ ಅನುಷ್ಠಾನಗೊಳ್ಳಲಿದೆ. ಮಂಡ್ಯದವರ ಅರೆಬೆತ್ತಲೆ ಮೆರವಣಿಗೆ ಗಮನಿಸಿದ್ದೇನೆ. ಶಿವಪುರ ಧ್ವಜ ಸತ್ಯಾಗ್ರಹ ಸೌಧದ ಕಿಚ್ಚು ಕೇಳಿದ್ದೇನೆ. ಮತ್ತೊಮ್ಮೆ ಅಂತಹ ಹೋರಾಟ ನಡೆಸಬೇಕಾದ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು. ಮೇಕೆದಾಟು ಯೋಜನೆಗೆ ಜೆಡಿಎಸ್​ನ ಎಚ್​.ಡಿ.ಕುಮಾರಸ್ವಾಮಿ ಟೀಕೆ ಮಾಡುತ್ತಿರುವ ಬಗ್ಗೆ ನಮಗೆ ಬೇಸರವಿಲ್ಲ. ಇದು ಪಕ್ಷಾತೀತವಾಗಿ ನಡೆಯುತ್ತಿರುವ ಪಾದಯಾತ್ರೆ. ಎಲ್ಲ ಪಕ್ಷದವರಿಗೂ ಅವಶ್ಯಕತೆ ಇರುವ ಯೋಜನೆ ಇದು. ಇದರಲ್ಲಿ ಭಾಗಿಯಾಗುವವರಿಗೆ ಪ್ರಮಾಣಪತ್ರ ಕೊಡುತ್ತೇವೆ. ಈ ದೇಶದ ಚರಿತ್ರೆಗೆ ಎಲ್ಲರೂ ಪಾಲುದಾರರಾಗಬೇಕು ಎಂದರು.

ಡಿಜಿಟಲ್ ವೇದಿಕೆಗಳಲ್ಲಿಯೂ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ಎಲ್ಲ ನಾಯಕರೂ ಹೊಸಬರನ್ನು ಪಕ್ಷಕ್ಕೆ ಕರೆತರಲು, ಸದಸ್ಯತ್ವ ನೋಂದಣಿ ಮಾಡಿಸಿಕೊಳ್ಳಲು ಸಹಕರಿಸಬೇಕು. ವಿಧಾನ ಪರಿಷತ್​ನ ನೂತನ ಸದಸ್ಯ ಗೂಳಿಗೌಡರ ಸಂಬಳ ಮಂಡ್ಯ ಕಾಂಗ್ರೆಸ್ ಕಚೇರಿಗೆ ಮೀಸಲು ಎಂದು ಇದೇ ಸಂದರ್ಭದಲ್ಲಿ ಘೋಷಿಸಿದರು. ಪ್ರಪಂಚಕ್ಕೆ ಬಿಗ್ಗೆಸ್ಟ್ ಡೆಮಾಕ್ರಸಿ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಪಕ್ಷದ ಇತಿಹಾಸ ಈ ದೇಶದ ಇತಿಹಾಸವೇ ಆಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಇತಿಹಾಸಗಳಲ್ಲಿ ಬಹಳ ವ್ಯತ್ಯಾಸಗಳಿವೆ. ಕಾಂಗ್ರೆಸ್ ಪಕ್ಷದ್ದು ತ್ಯಾಗ, ಬಲಿದಾನದ ಇತಿಹಾಸ ಎಂದರು.

ಯಾರೂ ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ. ಇದ್ದಾಗ ಏನು ಮಾಡಿದ್ದೇವೆ ಅನ್ನೋದು ಮುಖ್ಯ. ಕೊವಿಡ್​ನಂಥ ಕಷ್ಟದ ಸಮಯದಲ್ಲಿ ನಮಗೆ ಅಧಿಕಾರ ಸಿಕ್ತು. ಪ್ರಾಣ ಮುಡಿಪಾಗಿಟ್ಟು ಕೊರೋನಾ ವಿರುದ್ಧ ಹೋರಾಟ ಮಾಡಿದ್ದೇವೆ. ದೇಶಕ್ಕೆ ಮಾದರಿಯಾಗಿ ಜನರನ್ನು ಉಳಿಸುವ ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ಯಾವತ್ತೂ ಅಧಿಕಾರಕ್ಕಾಗಿ ಅಂಟಿ ಕುಳಿತಿಲ್ಲ. ಅಧಿಕಾರ ಇಲ್ಲದಿದ್ದರೂ ದೇಶಕ್ಕಾಗಿ ಹೋರಾಟ ಮಾಡೋದು ಕಾಂಗ್ರೆಸ್ ಪಕ್ಷದ ಧ್ಯೇಯ ಎಂದು ನುಡಿದರು.

ಆಶೀರ್ವದಿಸಲು ಬಂದಿದ್ದ ಸಾಧುಗಳು
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಆಶೀರ್ವದಿಸಲು ಕೆಲ ಸಾಧುಗಳು ಶಿವಪುರಕ್ಕೆ ಬಂದಿದ್ದರು. ಡಿಕೆಶಿ ಸಮೀಪಕ್ಕೆ ತೆರಳಲು ಅನುಮತಿ ಕೇಳಿದರು. ದೂರದಿಂದಲೇ ಬೇಡ ಎಂದು ಡಿಕೆಶಿ ಕೈ ಆಡಿಸಿದರು. ನಂತರ ಸಾಧುಗಳು ವಿಧಿ ಇಲ್ಲದೆ ವಾಪಸ್ ತೆರಳಿದರು.

ಇದನ್ನೂ ಓದಿ: Video: ಕಾಂಗ್ರೆಸ್ ಸಂಸ್ಥಾಪನಾ ದಿನ ಇಂದು; ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಸೋನಿಯಾ ಗಾಂಧಿ
ಇದನ್ನೂ ಓದಿ: ರೈತರ ಪ್ರತಿಭಟನೆ, ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಮಧ್ಯೆ ಅಜ್ಜಿ ಊರಿಗೆ ಪ್ರವಾಸ ಹೊರಟ ರಾಹುಲ್ ಗಾಂಧಿ?

Follow us on

Related Stories

Most Read Stories

Click on your DTH Provider to Add TV9 Kannada