ಮಂಡ್ಯ: ದಿಶಾ ಸಭೆ ನಡುವೆ ಮತ್ತೆ ಮಾತಿನ ಚಕಮಕಿ; ದಿಶಾ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಜೆಡಿಎಸ್ ಶಾಸಕ
ಜನಪ್ರತಿನಿಧಿಗಳು ಅಂದ್ರೆ ನಿಮಗೆ ಗೌರವ, ಬೆಲೆ ಇಲ್ವಾ? ಇಲ್ಲಿ ಒಂದು ತೊಟ್ಟು ನೀರು ಕೊಡುವವರು ಕೂಡ ಇಲ್ಲ. ಎಲ್ಲಾ ಅಜೆಂಡಾ ಪೂರ್ಣಗೊಳಿಸುವುದಾದರೆ ಸಭೆ ಮಾಡಿ ಎಂದು ಜಿ.ಪಂ. ಸಿಇಒಗೆ ಜೆಡಿಎಸ್ ಶಾಸಕ ಸುರೇಶ್‌ಗೌಡ ತರಾಟೆ ತೆಗೆದುಕೊಂಡಿದ್ದಾರೆ.
ಮಂಡ್ಯ: ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ದಿಶಾ ಸಭೆ ನಡೆದಿದೆ. ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಜೆಡಿಎಸ್ ಶಾಸಕರಾದ ಸಿ.ಎಸ್. ಪುಟ್ಟರಾಜು, ಡಾ.ಕೆ. ಅನ್ನದಾನಿ, ಸುರೇಶ್‌ಗೌಡ ಭಾಗಿ ಆಗಿದ್ದಾರೆ. ಕಳೆದ ಬಾರಿ ದಿಶಾ ಸಭೆಯಲ್ಲಿ ಭಾರಿ ವಾಕ್ಸಮರ ನಡೆದಿತ್ತು. ದಳಪತಿಗಳು, ಸಂಸದೆಯ ನಡುವೆ ವಾಕ್ಸಮರ ನಡೆದಿತ್ತು. ಈ ಬಾರಿ ಕೂಡ ದಿಶಾ ಸಭೆ ಆರಂಭದಲ್ಲಿಯೇ ಮಾತಿನ ಚಕಮಕಿ ಉಂಟಾಗಿದೆ.
ಶಾಸಕರು, ದಿಶಾ ಸಮಿತಿ ಸದಸ್ಯರ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ. ತಡವಾಗಿ ಸಭೆ ಆರಂಭಿಸಿದ್ದಕ್ಕೆ ಸುರೇಶ್ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಿಶಾ ಸಭೆಗೆ ನಾವು ಮಧ್ಯಾಹ್ನ 2 ಗಂಟೆಗೆ ಬಂದಿದ್ದೇವೆ. ಜನಪ್ರತಿನಿಧಿಗಳು ಅಂದ್ರೆ ನಿಮಗೆ ಗೌರವ, ಬೆಲೆ ಇಲ್ವಾ? ಇಲ್ಲಿ ಒಂದು ತೊಟ್ಟು ನೀರು ಕೊಡುವವರು ಕೂಡ ಇಲ್ಲ. ಎಲ್ಲಾ ಅಜೆಂಡಾ ಪೂರ್ಣಗೊಳಿಸುವುದಾದರೆ ಸಭೆ ಮಾಡಿ ಎಂದು ಜಿ.ಪಂ. ಸಿಇಒಗೆ ಜೆಡಿಎಸ್ ಶಾಸಕ ಸುರೇಶ್‌ಗೌಡ ತರಾಟೆ ತೆಗೆದುಕೊಂಡಿದ್ದಾರೆ.
ಈ ವೇಳೆ ಮಧ್ಯಪ್ರವೇಶಿಸಿದ ಸಂಸದೆ ಸುಮಲತಾ ಬೆಂಬಲಿಗ ಬೇಲೂರು ಸೋಮಶೇಖರ್ ಹಿಂದಿನ ಸಭೆಯಲ್ಲಿ ಅಜೆಂಡಾ ಪ್ರಕಾರ ಚರ್ಚಿಸಿದ್ದೀರಾ? ಎಂದು ಶಾಸಕರನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಶಾಸಕರು, ಸದಸ್ಯನ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಏರು ಧ್ವನಿಯಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದಾರೆ. ಮೊದಲು ಸಭೆ ಅಜೆಂಡಾ ಕೊಡುವಂತೆ ಶಾಸಕರು ಪಟ್ಟು ಹಿಡಿದಿದ್ದಾರೆ.
ಅಜೆಂಡಾ ಬದಲು ಪ್ರೋಗ್ರೆಸ್ ರಿಪೋರ್ಟ್ ಕೊಟ್ಟಿದ್ದೀರಿ. ಇದನ್ನು ಸಭೆಯ ಅಜೆಂಡಾ ಎಂದು ಒಪ್ಪಲು ಸಾಧ್ಯವಿಲ್ಲ. ನಿಮ್ಮ ಪಿಎಗಳಿಗೆ ಅಜೆಂಡಾ ಕೊಟ್ಟಿದ್ದೇವೆ ಎಂದು ಸಿಇಒ ಹೇಳಿದ್ದಾರೆ. ಯಾರು ಯಾರಿಗೆ ಅಜೆಂಡಾ ಕೊಟ್ಟಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಯಾರು ರಿಸೀವ್ ಮಾಡಿಕೊಂಡಿದ್ದಾರೆ ಮಾಹಿತಿ ಕೊಡಿ ಎಂದು ದಿಶಾ ಸಭೆಯಲ್ಲಿ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು ಪಟ್ಟು ಹಿಡಿದಿದ್ದಾರೆ.
ಕರ್ನಾಟಕ ಬಂದ್ ಬಗ್ಗೆ ಮಂಡ್ಯದಲ್ಲಿ ಪಕ್ಷೇತರ ಸಂಸದೆ ಸುಮಲತಾ ಪ್ರತಿಕ್ರಿಯೆ ಎಂಇಎಸ್ ನಿಷೇಧಕ್ಕೆ ಒತ್ತಾಯಿಸಿ ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಆಚರಿಸಲಿರುವ ಬಗ್ಗೆ ಮಂಡ್ಯದಲ್ಲಿ ಪಕ್ಷೇತರ ಸಂಸದೆ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ. ಸಮಸ್ಯೆಗೆ ಪರಿಹಾರ ಸಿಗುವುದಾದರೆ ಬಂದ್ ಮಾಡಬೇಕು. ಬಂದ್ನಿಂದ ಆಗುವ ಉಪಯೋಗ, ನಷ್ಟದ ಯೋಚಿಸಬೇಕು. ಡಿಸಂಬರ್ 31ರ ಕರ್ನಾಟಕ ಬಂದ್‌ಗೆ ನನ್ನ ಬೆಂಬಲ ಇಲ್ಲ. ಎಂಇಎಸ್, ಶಿವಸೇನೆ ವಿರುದ್ಧ ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದು ಸಂಸದೆ ಸುಮಲತಾ ಹೇಳಿದ್ದಾರೆ. ಯಾರೇ ಆದರೂ ಮಾನವೀಯತೆಯಿಂದ ಚಿಂತಿಸಬೇಕು. ಡಿ.31ರಂದೇ ಬಂದ್ ಮಾಡ್ಬೇಕಾ ಎಂದು ಸುಮಲತಾ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಮಂಡ್ಯ: ದಿಶಾ ಸಭೆ ಆರಂಭದಲ್ಲೇ ಸಂಸದೆ ಸುಮಲತಾಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಟಾಂಗ್, ಸುಮಲತಾ ಸಿಬ್ಬಂದಿ ವಿರುದ್ಧ ಗರಂ
ಇದನ್ನೂ ಓದಿ: ಮಹಿಳೆ ಹುಟ್ಟಿನಿಂದಲೇ ಸಾಧಕಿ, ಕುಟುಂಬದ ಜೊತೆಯಲ್ಲಿ ಸಮಾಜದ ಅಭಿವೃದ್ದಿಗೆ ಚಿಂತನೆ ಮಾಡುತ್ತಾಳೆ; ಸುಮಲತಾ ಅಂಬರೀಶ್