ಮಂಡ್ಯ: ಅಂಡರ್ ಪಾಸ್ ನಿರ್ಮಿಸುವಂತೆ ರೈತ ಸಂಘದಿಂದ ಆಗ್ರಹ: ಪ್ರತಿಭಟನಾಕಾರರ ಮೇಲೆ ಲಾಠಿ ಬೀಸಿದ ಸ್ಥಳೀಯ ಪೊಲೀಸರು
ಮಂಡ್ಯ ಜಿಲ್ಲೆಯಲ್ಲಿ ಅಂಡರ್ ಪಾಸ್ ನಿರ್ಮಿಸುವಂತೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ಮಾಡಲಾಗಿದೆ. ಈ ವೇಳೆ ಪ್ರತಿಭಟನಾಕಾರರ ಮೇಲೆ ಸ್ಥಳೀಯ ಪೊಲೀಸರು ಲಾಠಿ ಬೀಸಿರುವಂತಹ ಘಟನೆ ನಡೆದಿದೆ.
ಮಂಡ್ಯ: ಜಿಲ್ಲೆಯ ಹನಕೆರೆ ಬಳಿ ಅಂಡರ್ ಪಾಸ್ (underpass) ನಿರ್ಮಿಸುವಂತೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ಮಾಡಲಾಗಿದೆ. ಈ ವೇಳೆ ಪ್ರತಿಭಟನಾಕಾರರ ಮೇಲೆ ಸ್ಥಳೀಯ ಪೊಲೀಸರು ಲಾಠಿ ಬೀಸಿರುವಂತಹ (lati charge) ಘಟನೆ ಕೂಡ ನಡೆದಿದೆ. ಬೆಳಗ್ಗೆಯಿಂದ ಪ್ರತಿಭಟನಾಕಾರರ ಮನವೊಲಿಕೆಗೆ ಪೊಲೀಸರು ಯತ್ನಿಸಿದ್ದಾರೆ. ಮನವೊಲಿಕೆ ಪ್ರಯತ್ನ ವಿಫಲವಾದ ಬಳಿಕ ತೆರವುಗೊಳಿಸಲು ಯತ್ನಿಸಿದ್ದು, ಈ ವೇಳೆ ಪೊಲೀಸರು-ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ಉಂಟಾಗಿ ಲಾಠಿ ಚಾರ್ಜ್ ಮಾಡಿ ಪ್ರತಿಭಟನಾಕಾರರನ್ನು ಪೊಲೀಸರು ಚದುರಿಸಿದ್ದಾರೆ.
ರಾಶಿ ಹಾಕಲಾಗಿದ್ದ ಹತ್ತಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ರಾಯಚೂರು: ರಾಶಿ ಹಾಕಲಾಗಿದ್ದ ಹತ್ತಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವಂತಹ ಘಟನೆ ರಾಯಚೂರು ತಾಲ್ಲೂಕಿನ ಕಾಡ್ಲೂರು ಗ್ರಾಮದಲ್ಲಿ ನಡೆದಿದೆ. ಸುಮಾರು 500 ಕ್ವಿಂಟಲ್ ಹತ್ತಿ ಸುಟ್ಟು ಭಸ್ಮವಾಗಿದೆ. ಇದೇ ಗ್ರಾಮದ ರೈತರಾದ ಮೌಲಾಲಿ, ನಬಿಸಾಬ್, ಸುರೇಶ್ ಹಾಗೂ ತಿಪ್ಪಣ್ಣ ಅನ್ನೋರಿಗೆ ಹತ್ತಿ ಸೇರಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ಹತ್ತಿ ಬಿಡಿಸಿ ಒಂದೇ ಕಡೆ ಹತ್ತಿಯನ್ನ ಕೂಡಿಟ್ಟಿದ್ದರು. ಹತ್ತಿ ಬೆಲೆ ಕುಸಿತವಾಗಿರೊ ಹಿನ್ನೆಲೆ ಹೊಲದಲ್ಲಿಯೇ ನಾಲ್ಕು ಜನ ರೈತರು ಹತ್ತಿ ರಾಶಿ ಮಾಡಿದ್ದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ರಾಯಚೂರು ಗ್ರಾಮೀಣ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಂಡ್ಯ: ಅಂಧಕಾರದಲ್ಲಿ ಮುಳುಗಿದ ಸರ್ಕಾರಿ ಶಾಲೆ, ವಿದ್ಯುತ್ ಬಿಲ್ ಬಾಕಿ ಹಿನ್ನೆಲೆ ಕರೆಂಟ್ ಕಟ್ ಮಾಡಿದ ಕೆಇಬಿ ಇಲಾಖೆ
ಮುಂಡ್ಕೂರಿನಲ್ಲಿ ಜಾತ್ರೆ ವೇಳೆ ಪಟಾಕಿ ಸಿಡಿದು 5 ಮಕ್ಕಳಿಗೆ ಗಾಯ
ದಕ್ಷಿಣ ಕನ್ನಡ: ಕಿನ್ನಿಗೋಳಿ ಸಮೀಪದ ಮುಂಡ್ಕೂರಿನಲ್ಲಿ ಜಾತ್ರೆ ವೇಳೆ ಪಟಾಕಿ ಸಿಡಿದು ಐವರು ಮಕ್ಕಳಿಗೆ ಗಾಯಗಳಾಗಿರುವಂತಹ ಘಟನೆ ನಡೆದಿದೆ. ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಮಹೋತ್ಸವ ಪ್ರಯುಕ್ತ ನಡೆಯುತ್ತಿದ್ದ ರಥೋತ್ಸವ ವೇಳೆ ಅವಘಡ ಸಂಭವಿಸಿದೆ. ಗಾಯಾಳು ಐವರು ಮಕ್ಕಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಇದನ್ನೂ ಓದಿ: ಜಮೀನಿನಲ್ಲಿ ಸಿಕ್ಕ ಚಿರತೆ ಮರಿಗಳನ್ನ ಮನೆಗೆ ಹೊತ್ತೊಯ್ದು ಸಾಕಿದ ಮಕ್ಕಳು: ಚಿರತೆ ಮರಿಗಳನ್ನು ನೋಡಲು ಮುಗಿಬಿದ್ದ ಗ್ರಾಮಸ್ಥರು
ಹೊಲಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಬಿಳಿ ಜೋಳ ಸುಟ್ಟು ಕರಕಲು
ಗದಗ: ಕಿಡಿಗೇಡಿಗಳು ಹೊಲಕ್ಕೆ ಬೆಂಕಿ ಹಚ್ಚಿದ ಪರಿಣಾಮ ಅಪಾರ ಪ್ರಮಾಣದ ಬಿಳಿ ಜೋಳ ಸುಟ್ಟು ಕರಕಲಾಗಿರುವಂತಹ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ನಡೆದಿದೆ. ಶಂಕ್ರಪ್ಪ, ಬಸಪ್ಪ, ಈರಪ್ಪ, ರಾಮಣ್ಣ ಕೊತಂಬರಿ ಎಂಬ ಸಹೋದರರಿಗೆ ಸೇರಿದ ಜಮೀನು. ಕಿಡಿಗೇಡಿಗಳಿಂದ ಪಕ್ಕದ ಪಾಳುಬಿದ್ದ ಜಮೀನಿಗೆ ಬೆಂಕಿ ಹಚ್ಚಿದ್ದು, ಅಲ್ಲಿಂದ ಬಿಳಿ ಜೋಳದ ಹೊಲಕ್ಕೆ ಬೆಂಕಿ ತಗುಲಿರೋ ಶಂಕೆ ವ್ಯಕ್ತವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು ರೈತರು ಕಂಗಾಲಾಗಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿಗಳಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:58 am, Mon, 20 February 23