
ಮಂಡ್ಯ, ಮೇ 26): ಕಳೆದ ಹಲವು ದಿನಗಳಿಂದ ಕರ್ನಾಟಕದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದೆ. ಪರಿಣಾಮ ಜಲಾಶಯಗಳಿಗೆ ಜೀವಕಳೆ ಬಂದಿದೆ. ಅದರಲ್ಲೂ ಕೆಆರ್ ಎಸ್ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಈ ಬಾರಿಯ ಬಿರು ಬೇಸಿಗೆ ಬಿಸಿಲಿನ ತಾಪಕ್ಕೆ ಕೃಷ್ಣರಾಜ ಸಾಗರ ಜಲಾಶಯದ (KRS) ನೀರಿನ ಪ್ರಮಾಣ 89 ಅಡಿಗೆ ಕುಸಿದಿತ್ತು.ಆದ್ರೆ, ಇದೀಗ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಒಳಹರಿವಿನ ಪ್ರಮಾಣದಲ್ಲಿ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದ್ದು, ಸದ್ಯ ಜಲಾಶಯಕ್ಕೆ 8869 ಕ್ಯೂಸೆಕ್ ನೀರು ಹರಿದುಬರುತ್ತಿದೆ.
ಇಂದು(ಮೇ 26) ಬೆಳಿಗ್ಗೆ 89 ಅಡಿ ನೀರಿನ ಮಟ್ಟ ಇತ್ತು. ಮಧ್ಯಾಹ್ನ 12 ಗಂಟೆ ವೇಳೆಗೆ ಹೆಚ್ಚುವರಿ 1 ಅಡಿ ನೀರು ಹರಿದುಬಂದಿತ್ತು. ಅದು ಸಂಜೆ ವೇಳೆ ಸಂಜೆ ವೇಳೆಗೆ 90.20 ಅಡಿಗೆ ನೀರಿನ ಮಟ್ಟ ಏರಿಕೆಯಾಗಿದೆ. ಮಳೆಗಾಲ ಆರಂಭಕ್ಕೂ ಮುನ್ನವೇ ಕೆಆರ್ ಎಸ್ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾಗಿದ್ದರಿಂದ ರೈತರಲ್ಲಿ ಮಂದಹಾಸ ಮೂಡಿದೆ.
ನಿನ್ನೆಯ (ಮೇ 25) 150 ಕ್ಯೂಸೆಕ್ ಮಾತ್ರ ಒಳಹರಿವು ಇತ್ತು. ಇಂದು ಏಕಾಏಕಿ ಒಳಹರಿವಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದ್ದು, ಈ ಬಾರಿ ಸಂಪೂರ್ಣವಾಗಿ ಭರ್ತಿಯಾಗುವ ನಿರೀಕ್ಷೆಗಳಿವೆ. ಜಲಾಶಯ 124.80 ಅಡಿ ಗರಿಷ್ಠ ಮಟ್ಟ ಹೊಂದಿದ್ದು, ಸದ್ಯದ ನೀರಿನ ಮಟ್ಟ 90.20 ಅಡಿ ಇದೆ. ಮಳೆಗಾಲ ಆರಂಭಕ್ಕೂ ಮುನ್ನವೇ ಒಳಹರಿವಿನಲ್ಲಿ ಹೆಚ್ಚಳವಾಗುತ್ತಿರುವುದರಿಂದ ಮಳೆಗಾದ ವೇಳೆಗೆ ಡ್ಯಾಂ ತುಂಬುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಇನ್ನು ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದ ಒಳಹರಿವಿನಲ್ಲಿ ಏಕಾಏಕಿ ಹೆಚ್ಚಳವಾಗಿದೆ. ಜಲಾಶಯದ ಗರಿಷ್ಟ ನೀರಿನ ಮಟ್ಟ 2284 ಅಡಿ ಆಗಿದೆ. ಇಂದಿನ ನೀರಿನ ಮಟ್ಟ 2263.50 ಅಡಿ ಆಗಿದೆ. ಜಲಾಶಯದ ಒಳಹರಿವಿನ ಪ್ರಮಾಣ 13500 ಕ್ಯೂಸೆಕ್ ನೀರಿದೆ. ಹೊರಹರಿವನ್ನು ಸಂಪೂರ್ಣ ನಿಲ್ಲಿಸಲಾಗಿದೆ.
ಹಾಗೇ ಶಿವಮೊಗ್ಗದ ತುಂಗಾ ಡ್ಯಾಮ್ ಸಂಪೂರ್ಣವಾಗಿ ಭರ್ತಿಯಾಗಿದ್ದು, ಇಂದು 10 ಗೇಟ್ ಗಳ ಮೂಲಕ ನೀರನ್ನು ಹೊರಗೆ ಬಿಡಲಾಗಿದೆ.
ಬಾಗಲಕೋಟೆ ಭಾಗದಲ್ಲೂ ಮಳೆಯ ಆರ್ಭಟ ಜೋರಾಗಿರೋದ್ರಿಂದ ಕೃಷ್ಣೆ ನದಿ ನೀರಿನ ಒಳ ಹರಿವು ಹೆಚ್ಚಳವಾಗಿದೆ. ಹಿಪ್ಪರಗಿ ಜಲಾಶಯಕ್ಕೆ 25 ಸಾವಿರ ಕ್ಯೂಸೆಕ್ಸ್ ನೀರು ಹರಿದುಬರುತ್ತಿದೆ. ಸದ್ಯ 42 ಸಾವಿರ ಕ್ಯೂಸೆಕ್ ಹೊರ ಹರಿವು ಇದೆ. ನೀರಿನ ಒಳ ಹರಿವಿನ ಪ್ರಮಾಣ ನೋಡಿಕೊಂಡು ಹೊರ ಹರಿವಿನ ಪ್ರಮಾಣ ನಿಗದಿ ಮಾಡಲಾಗಿದೆ. ಪ್ರವಾಹಕ್ಕೆ ಅವಕಾಶವಾಗದಂತೆ ಮುನ್ನೆಚ್ಚರಿಕೆ ಕ್ರಮವನ್ನು ಅಧಿಕಾರಿಗಳು ತೆಗೆದುಕೊಂಡಿದ್ದಾರೆ.