ಮಂಡ್ಯ: ವಿದೇಶಕ್ಕೆ ತೆರಳಿದ ಮುಸ್ಕಾನ್; ಮದೀನಾದಿಂದ ಸೆಲ್ಫಿ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿನಿ ತಂದೆ
Muskan Khan: ಹಿಜಾಬ್ ಪ್ರಕರಣದ ವೇಳೆ ‘ಅಲ್ಲಾಹು ಅಕ್ಬರ್’ ಘೋಷಣೆ ಕೂಗಿ ಸಂಚಲನ ಸೃಷ್ಟಿಸಿದ್ದ ವಿದ್ಯಾರ್ಥಿನಿ ಬಿ.ಬಿ.ಮುಸ್ಕಾನ್ ವಿದೇಶಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ.
ಮಂಡ್ಯ: ಹಿಜಾಬ್ ಪ್ರಕರಣದ ವೇಳೆ ‘ಅಲ್ಲಾಹು ಅಕ್ಬರ್’ ಘೋಷಣೆ ಕೂಗಿ ಸಂಚಲನ ಸೃಷ್ಟಿಸಿದ್ದ ವಿದ್ಯಾರ್ಥಿನಿ ಬಿ.ಬಿ.ಮುಸ್ಕಾನ್ (Muskan Khan) ವಿದೇಶಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ. ಶಾಲೆಯಲ್ಲಿ ಹಿಜಾಬ್ ಬ್ಯಾನ್ಗೆ ಆಗ್ರಹಿಸಿ ನಡೀತಿದ್ದ ಪ್ರತಿಭಟನೆ ವೇಳೆ ಮಂಡ್ಯದಲ್ಲಿ ಅಲ್ಲಾಹು ಅಕ್ಬರ್ ಘೋಷಣೆಯನ್ನು ಹಿಂದೂ ಕಾರ್ಯಕರ್ತರ ಮುಂಭಾಗದಲ್ಲಿ ಮುಸ್ಕಾನ್ ಕೂಗಿದ್ದರು. ಈ ಘಟನೆಯಿಂದ ಮುಸ್ಕಾನ್ ಅವರಿಗೆ ಅಪಾರ ಪ್ರಚಾರ ಸಿಕ್ಕಿತ್ತು. ಇತ್ತೀಚೆಗೆ ಪರೀಕ್ಷೆಗಳಿಗೆ ಮುಸ್ಕಾನ್ ಹಾಜರಾಗಿರಲಿಲ್ಲ. ಇದೀಗ ಮುಸ್ಕಾನ್ ವಿದೇಶಕ್ಕೆ ತೆರಳಿರುವ ಬಗ್ಗೆ ವರದಿಯಾಗಿದ್ದು, ಏಪ್ರಿಲ್ 25ರಂದೇ ಅವರು ಸೌದಿಯ ಮೆಕ್ಕಾಗೆ ತೆರಳಿದ್ದಾರೆ.
ಮದೀನಾದಿಂದ ಸೆಲ್ಫಿ ವಿಡಿಯೋ ಹಂಚಿಕೊಂಡಿರುವ ಮುಸ್ಕಾನ್ ತಂದೆ ಮಹಮ್ಮದ್ ಹುಸೇನ್, ‘‘ನಮ್ಮ ಮಂಡ್ಯದಲ್ಲಿರುವ ಎಲ್ಲಾ ಅಕ್ಕತಂಗಿ-ಅಣ್ಣ ತಮ್ಮಂದಿರಿಗೂ ನಮಸ್ಕಾರ. ನಾನು ಮದೀನಾದ ಒಳಗಡೆ ಇದ್ದೇನೆ. ಇನ್ ಷಾ ಅಲ್ಲಾ, ನಿಮಗೆಲ್ಲರಿಗೂ ಒಳ್ಳೆಯದಾಗಲಿ. ನಾನು ಎಲ್ಲರಿಗಾಗಿ ಪ್ರಾರ್ಥನೆ ಮಾಡಿದ್ದೇನೆ. ಇನ್ನೂ ಹೆಚ್ಚು ಪ್ರಾರ್ಥನೆ ಮಾಡ್ತೇನೆ. ನಮ್ಮ ಮಂಡ್ಯ ಹಾಗೂ ಇಂಡಿಯಾದಲ್ಲಿ ಪ್ರೀತಿ, ವಿಶ್ವಾಸದಿಂದ ಎಲ್ಲರೂ ಒಟ್ಟಾಗಿ ಸೌಹಾರ್ದತೆಯಿಂದ ಬಾಳೋಣ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ. ಆ ದೇವರು ಆರೋಗ್ಯ ಕೊಟ್ಟು ಕಾಪಾಡಲಿ’’ ಎಂದು ನುಡಿದಿದ್ದಾರೆ.
ಈ ವರ್ಷ ಶಿಕ್ಷಣದಿಂದ ದೂರ ಉಳಿದ ಮುಸ್ಕಾನ್:
ಹಿಜಾಬ್ ವಿಚಾರದಲ್ಲಿ ಸರ್ಕಾರದ ಸಮವಸ್ತ್ರ ಸಂಹಿತೆಯನ್ನು ನ್ಯಾಯಾಲಯ ಎತ್ತಿಹಿಡಿದಲ್ಲಿಂದ ಮುಸ್ಕಾನ್ ಕಾಲೇಜಿಗೆ ಹಾಜರಾಗಿಲ್ಲ. ಪರೀಕ್ಷೆಗೂ ಅವರು ಗೈರಾಗಿದ್ದು, ಮುಂದೆ ಹಿಜಾಬ್ ಅವಕಾಶ ಇರುವ ಕಾಲೇಜಿಗೆ ಸೇರುವ ಪ್ಲಾನ್ ಮಾಡಿಕೊಂಡಿದ್ದಾರೆಂದು ವರದಿಯಾಗಿತ್ತು. ನ್ಯಾಯಾಲಯದ ತೀರ್ಪಿನ ನಂತರ ಮಾಧ್ಯಮಗಳೊಂದಿಗೂ ಅಂತರ ಕಾಯ್ದುಕೊಂಡಿರುವ ಅವರು ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ. ಇತ್ತೀಚೆಗೆ ಮುಸ್ಕಾನ್ ಘೋಷಣೆ ಕೂಗಿದ ಬಗ್ಗೆ ಆಲ್ಖೈದಾ ಮುಖ್ಯಸ್ಥ ಜವಾಹಿರಿಯೂ ಮಾತನಾಡಿದ್ದು ವಿವಾದ ಸೃಷ್ಟಿಸಿತ್ತು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:51 am, Wed, 11 May 22