ನಾವಿನ್ನೂ ಕೋರ್ಟ್​ನಲ್ಲಿ ಭಿಕ್ಷೆ ಬೇಡಲ್ಲ ಎಂದ ಮುಸ್ಲಿಂ ಮೌಲ್ವಿ ವಿರುದ್ಧ ಮಂಡ್ಯದಲ್ಲಿ ದೂರು ದಾಖಲು

| Updated By: ರಮೇಶ್ ಬಿ. ಜವಳಗೇರಾ

Updated on: Dec 03, 2024 | 3:34 PM

ಪ್ರಚೋದನಕಾರಿ ಹಾಗೂ ನ್ಯಾಯಾಲಯಕ್ಕೆ ಅಗೌರವ ತೋರುವ ಹೇಳಿಕೆ‌ ನೀಡಿದ್ದಾರೆ ಎಂದು ಆರೋಪಿಸಿ ಮೌಲ್ವಿ ಮೌಲಾನಾ ಅಬು ತಾಲಿಬ್ ರೆಹಮಾನಿ ವಿರುದ್ಧ ಮಂಡ್ಯ ಬಿಜೆಪಿ ಕಾರ್ಯಕರ್ತರು ದೂರು ನೀಡಿದ್ದಾರೆ. ಮಂಡ್ಯ ಅಡಿಷನಲ್​ ಎಸ್ ಪಿಗೆ ದೂರು ನೀಡಿದ್ದು, ಮೌಲ್ವಿ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದಾರೆ. ಇನ್ನು ಮೌಲ್ವಿ ಭಾಷಣವನ್ನು ವಿಪಕ್ಷ ನಾಯಕ ಆರ್ ಅಶೋಕ್ ಖಂಡಿಸಿ ಆಕ್ರೋಶ​ ವ್ಯಕ್ತಪಡಿಸಿದ್ದಾರೆ.

ನಾವಿನ್ನೂ ಕೋರ್ಟ್​ನಲ್ಲಿ ಭಿಕ್ಷೆ ಬೇಡಲ್ಲ ಎಂದ ಮುಸ್ಲಿಂ ಮೌಲ್ವಿ ವಿರುದ್ಧ ಮಂಡ್ಯದಲ್ಲಿ ದೂರು ದಾಖಲು
Follow us on

ಮಂಡ್ಯ/ಬೆಂಗಳೂರು, (ಡಿಸೆಂಬರ್ 03): ಮೌಲ್ವಿ ಮೌಲಾನಾ ಅಬು ತಾಲಿಬ್ ರೆಹಮಾನಿ ವಿರುದ್ಧ ಪ್ರಚೋದನಕಾರಿ ಹಾಗೂ ನ್ಯಾಯಾಲಯಕ್ಕೆ ಅಗೌರವ ತೋರುವ ಹೇಳಿಕೆ‌ ನೀಡಿರುವ ಆರೋಪ ಕೇಳಿಬಂದಿದೆ. ಬಹಿರಂಗ ಸಭೆಯಲ್ಲಿ ಸಂವಿಧಾನಕ್ಕೆ ಸೆಡ್ಡು ಹೊಡೆಯುವ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಮೌಲ್ವಿ ಮೌಲಾನಾ ಅಬು ತಾಲಿಬ್ ರೆಹಮಾನಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಮಂಡ್ಯದ ಬಿಜೆಪಿ ಕಾರ್ಯಕರ್ತರು ದೂರು ನೀಡಿದ್ದಾರೆ.

ನ್ಯಾಯಾಲಯದ ಬಾಗಿಲು ಮುಂದೆ ನಿಂತು ಇನ್ನು ಮುಂದೆ ಭೀಕ್ಷೆ ಬೇಡುವುದಿಲ್ಲ. ಸಂಸತ್ತು ನಿಮ್ಮದಾದರೆ. ಬೀದಿಗಳು ನಮ್ಮವು ಎಂದು ಬಹಿರಂಗ ಸಭೆಯಲ್ಲಿ ಸಂವಿಧಾನಕ್ಕೆ ಸೆಡ್ಡು ಹೊಡೆಯುವ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೌಲ್ವಿ ಮೌಲಾನಾ ಅಬು ತಾಲಿಬ್ ರೆಹಮಾನಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಂಡ್ಯ ಅಡಿಷನಲ್​ ಎಸ್​ಪಿ ಅವರಿಗೆ ಬಿಜೆಪಿ ದೂರು ನೀಡಿದೆ.

ಇದನ್ನೂ ಓದಿ: ಕ್ಯಾನ್ಸರ್​ ಇದೆ ಠಾಣೆಗೆ ಬರಲು ಆಗಲ್ಲ, ಮಠಕ್ಕೆ ಬಂದರೆ ಹೇಳಿಕೆ ನೀಡುವೆ: ಪೊಲೀಸರಿಗೆ ಚಂದ್ರಶೇಖರ್​ ಸ್ವಾಮೀಜಿ ಪತ್ರ

ಇನ್ನು ಈ ಸಂಬಂಧ ವಿಪಕ್ಷ ನಾಯಕ ಆರ್ ಅಶೋಕ್​ ಟ್ವಿಟ್ಟರ್​ನಲ್ಲಿ ಪ್ರತಿಕ್ರಿಯಿಸಿ “ನ್ಯಾಯಾಲಯದ ಮಾತನ್ನೂ ಕೇಳುವುದಿಲ್ಲ. ಸಂಸತ್ತು ನಿಮ್ಮದಾದರೆ, ಬೀದಿಗಳು ನಮ್ಮದು” ಎಂದು ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಮಾತುಗಳನ್ನು ಆಡಿರೋ ಮೌಲಾನಾ ಅಬು ತಾಲಿಬ್ ರೆಹಮಾನಿ ಅವರ ಮೇಲೆ FIR ಯಾವಾಗ ಹಾಕುತ್ತೀರಿ ಸಿಎಂ ಸಿದ್ದರಾಮಯ್ಯ, ಹಾಗೂ ಡಿಸಿಎಂ ಡಿಕೆ ಶಿವಕುಮಾರ್​​ ಎಂದು ಪ್ರಶ್ನಿಸಿದ್ದಾರೆ.


ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಒಬ್ಬ ಹಿಂದೂ ಸ್ವಾಮೀಜಿ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ, ಬಹಿರಂಗ ಕ್ಷಮೆ ಕೇಳಿದ ಮೇಲೂ ಅವರ ಮೇಲೆ FIR ಹಾಕಿ ವಿಚಾರಣೆಗೆ ಕರೆಯುವ ಕಾಂಗ್ರೆಸ್ ಸರ್ಕಾರಕ್ಕೆ, ಸಂವಿಧಾನ, ನ್ಯಾಯಾಲಯದ ಘನತೆ ಎಲ್ಲವನ್ನೂ ಗಾಳಿಗೆ ತೂರಿ ಪ್ರಚೋದನಕಾರಿ ಭಾಷಣ ಮಾಡುವ ಮುಸ್ಲಿಂ ಮತಾಂಧರು ನಿಮ್ಮ ಕಣ್ಣಿಗೆ ಕಾಣುವುದಿಲ್ಲ ಅಲ್ಲವೇ? ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಪಕ್ಷದ ಓಲೈಕೆ ರಾಜಕಾರಣವೇ ಅದಕ್ಕೆ ಮುಳುವಾಗಲಿದೆ. ಈಗಾಗಲೇ ದೇಶದ ಬಹುತೇಕ ರಾಜ್ಯಗಳಲ್ಲಿ ಅಡ್ರೆಸ್ ಇಲ್ಲದಂತಾಗಿರುವ ಹಿಂದೂ ವಿರೋಧ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲೂ ನಿರ್ನಾಮ ಆಗುವ ದಿನ ಬಹಳ ದೂರವಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ