ಕೈದಿಗಳ ವಿಶೇಷ ಆತಿಥ್ಯಕ್ಕೆ ರೇಟ್ ಫಿಕ್ಸ್: ಮಂಡ್ಯ ಜೈಲಾಧಿಕಾರಿಗಳ ವಿರುದ್ಧ ಮತ್ತೊಂದು ಗಂಭೀರ ಆರೋಪ

Mandya Jail Scandal: ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಗೆ ವಿಶೇಷ ಆತಿಥ್ಯ ನೀಡಲು ರೇಟ್ ಫಿಕ್ಸ್ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಜೈಲು ಅಧೀಕ್ಷಕಿ ಶಾಂತಮ್ಮ ಹಾಗೂ ಸಿಬ್ಬಂದಿ ವಿರುದ್ಧ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೈಲಧಿಕಾರಿಗಳು ವಸೂಲಿ ಜತೆಗೆ ಕ್ಯಾಟರಿಂಗ್ ವ್ಯವಸ್ಥೆ ಕೂಡ ಮಾಡುತ್ತಾರೆಂದು ದೂರಿರೋದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕೈದಿಗಳ ವಿಶೇಷ ಆತಿಥ್ಯಕ್ಕೆ ರೇಟ್ ಫಿಕ್ಸ್: ಮಂಡ್ಯ ಜೈಲಾಧಿಕಾರಿಗಳ ವಿರುದ್ಧ ಮತ್ತೊಂದು ಗಂಭೀರ ಆರೋಪ
ಮಂಡ್ಯ ಜೈಲಾಧಿಕಾರಿಗಳ ವಿರುದ್ಧ ಮತ್ತೊಂದು ಗಂಭೀರ ಆರೋಪ
Image Credit source: Tv9 Kannada
Edited By:

Updated on: Aug 27, 2026 | 7:16 PM

ಮುಖ್ಯಾಂಶಗಳು

  • ಮಂಡ್ಯ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ
  • ಕೈದಿಗಳ ವಿಶೇಷ ಆತಿಥ್ಯಕ್ಕೆ ರೇಟ್ ಫಿಕ್ಸ್​​
  • ಸಾಮಾಜಿಕ ಜಾಲತಾಣದಲ್ಲಿ ಪತ್ರ ವೈರಲ್​​

ಮಂಡ್ಯ, ಆಗಸ್ಟ್​​ 27: ಮಂಡ್ಯ ಜೈಲಿನಲ್ಲಿ ವಿಚಾರಣಾಧೀನ ಖೈದಿಗೆ ರಾಜಾತಿಥ್ಯ ಪ್ರಕರಣ ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ನಡುವೆಯೇ ಜೈಲಧಿಕಾರಿಗಳ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಕೈದಿಗಳ ವಿಶೇಷ ಆತಿಥ್ಯಕ್ಕೆ ರೇಟ್ ಫಿಕ್ಸ್ ಮಾಡಿರುವ ಸಂಬಂಧ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ. ಮಂಡ್ಯ ಜಿಲ್ಲಾ ಕಾರಾಗೃಹದ ಕೈದಿಗಳಿಂದ ಜೈಲು ಅಧೀಕ್ಷಕಿ ಶಾಂತಮ್ಮ, ಸಿಬ್ಬಂದಿ ಹಣ ವಸೂಲಿ ಬಗ್ಗೆ ಆರೋಪಿಸಲಾಗಿದೆ.

ಒಂದೊಂದು ಸೆಲ್​ಗೂ ಒಂದೊಂದು ರೇಟ್

  • ಸೆಲ್-1ರಿಂದ ಪ್ರತಿ ತಿಂಗಳು 10 ಸಾವಿರ ರೂಪಾಯಿ ವಸೂಲಿ
  • ಸೆಲ್-3ರಿಂದ ಪ್ರತಿ ತಿಂಗಳು 15 ಸಾವಿರ ರೂಪಾಯಿ ವಸೂಲಿ
  • ಸೆಲ್-4ರಿಂದ ಪ್ರತಿ ತಿಂಗಳು 15 ಸಾವಿರ ರೂಪಾಯಿ ವಸೂಲಿ
  • ಸೆಲ್-5ರಿಂದ ಪ್ರತಿ ತಿಂಗಳು 5 ಸಾವಿರ ರೂಪಾಯಿ ವಸೂಲಿ
  • ಸೆಲ್-6ರಿಂದ ಪ್ರತಿ ತಿಂಗಳು 8 ಸಾವಿರ ವಸೂಲಿ ಆರೋಪ
  • ಜೈಲಿನ ಕೊಠಡಿ ಬದಲಿಸಲು 2 ಸಾವಿರ ರೂ. ವಸೂಲಿ ಆರೋಪ
  • ಪನಿಷ್ಮೆಂಟ್ ಸೆಲ್​ನಿಂದ ಹೊರ ಬರಲು 10 ಸಾವಿರ ವಸೂಲಿ

ಇದನ್ನೂ ಓದಿ:  ಜೈಲಲ್ಲಿರಬೇಕಿದ್ದ ಆರೋಪಿಗೆ ಮಿಮ್ಸ್​ನಲ್ಲಿ ರಾಜಾತಿಥ್ಯ: ಜಿಲ್ಲಾ ನ್ಯಾಯಾಧೀಶರ ದಿಢೀರ್ ದಾಳಿ ವೇಳೆ ಯುವತಿ ಜತೆ ಸಿಕ್ಕಿಬಿದ್ದ ಆರೋಪಿ!

ಹಣ ನೀಡಿದ್ರೆ ಲಭ್ಯವಿದೆ ಕ್ಯಾಟರಿಂಗ್ ವ್ಯವಸ್ಥೆ!

ಜೈಲಧಿಕಾರಿಗಳು ವಸೂಲಿ ಜತೆಗೆ ಕ್ಯಾಟರಿಂಗ್ ವ್ಯವಸ್ಥೆ ಕೂಡ ಮಾಡುತ್ತಾರಂತೆ. 1 ಕೆಜಿ ಮಟನ್​​ 1,250, ಚಿಕನ್ ಬೇಕಾದ್ರೆ ಕೆಜಿಗೆ 700 ರೂ. ದರ ನಿಗದಿಪಡಿಸಲಾಗಿದ್ದು, ಕೈದಿಗಳ ಬೇಡಿಕೆಗೆ ಅನುಗುಣವಾಗಿ ಹಣ ಪಡೆದು ಅಡುಗೆ ಮಾಡಿಕೊಡಲಾಗುತ್ತೆ. ಹಣ ನೀಡದಿದ್ದರೆ ಬೆದರಿಸುತ್ತಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಡಿಜಿಪಿ ಅಲೋಕ್ ಕುಮಾರ್​​ ಅವರನ್ನು ಆಗ್ರಹಿಸಲಾಗಿದೆ.

ಜೈಲಿನಲ್ಲಿ ಇರಬೇಕಾಗಿದ್ದ ಭೂ ದಾಖಲೆಗಳ ಪ್ರಕರಣದ ಪ್ರಮುಖ ಆರೋಪಿಯೊಬ್ಬನನ್ನು ಅನಧಿಕೃತವಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿರುವುದು ಜಿಲ್ಲಾ ನ್ಯಾಯಾಧೀಶರ ದಿಢೀರ್ ತಪಾಸಣೆ ವೇಳೆ ಬೆಳಕಿಗೆ ಬಂದಿತ್ತು. ರೋಗ ಇಲ್ಲದಿದ್ದರೂ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿರುವುದು ಹಾಗೂ ಆತನೊಂದಿಗೆ ಯುವತಿಯೊಬ್ಬಳು ವಿಶೇಷ ಕೊಠಡಿಯಲ್ಲಿ ಇರುವುದು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಈ ಘಟನೆ ಮಾಸುವ ಮುನ್ನವೇ ಜೈಲು ಅಧಿಕಾರಿಗಳ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿರೋದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:49 pm, Thu, 27 August 26

Loading...
Unable to load recommendations.
Follow Us