AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಲಲ್ಲಿರಬೇಕಿದ್ದ ಆರೋಪಿಗೆ ಮಿಮ್ಸ್​ನಲ್ಲಿ ರಾಜಾತಿಥ್ಯ: ಜಿಲ್ಲಾ ನ್ಯಾಯಾಧೀಶರ ದಿಢೀರ್ ದಾಳಿ ವೇಳೆ ಯುವತಿ ಜತೆ ಸಿಕ್ಕಿಬಿದ್ದ ಆರೋಪಿ!

Mandya News: ಜೈಲಿನಲ್ಲಿರಬೇಕಿದ್ದ ಭೂ ದಾಖಲೆಗಳ ಪ್ರಕರಣದ ಆರೋಪಿ ಮೊಹಮ್ಮದ್ ಹುಸೇನ್ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ವಿಶೇಷ ಕೊಠಡಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಜಿಲ್ಲಾ ನ್ಯಾಯಾಧೀಶರ ದಿಢೀರ್ ತಪಾಸಣೆಯಲ್ಲಿ ಪತ್ತೆಯಾಗಿದೆ. ರೋಗ ಇಲ್ಲದಿದ್ದರೂ ದಾಖಲಿಸಿದ್ದೇಕೆ ಎಂದು ಪ್ರಶ್ನಿಸಿ, ಜೈಲಾಧಿಕಾರಿ ಮತ್ತು ವೈದ್ಯಾಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಲಾಗಿದೆ.

ಜೈಲಲ್ಲಿರಬೇಕಿದ್ದ ಆರೋಪಿಗೆ ಮಿಮ್ಸ್​ನಲ್ಲಿ ರಾಜಾತಿಥ್ಯ: ಜಿಲ್ಲಾ ನ್ಯಾಯಾಧೀಶರ ದಿಢೀರ್ ದಾಳಿ ವೇಳೆ ಯುವತಿ ಜತೆ ಸಿಕ್ಕಿಬಿದ್ದ ಆರೋಪಿ!
ಮಿಮ್ಸ್ ಆಸ್ಪತ್ರೆಯಲ್ಲಿ ಜೈಲಾಧಿಕಾರಿಗಳನ್ನು ವಿಚಾರಿಸುತ್ತಿರುವ ಜಡ್ಜ್Image Credit source: tv9
ದಿಲೀಪ್​, ಚೌಡಹಳ್ಳಿ
| Edited By: |

Updated on:Aug 25, 2026 | 8:54 AM

Share

ಮುಖ್ಯಾಂಶಗಳು

  • ಮಿಮ್ಸ್ ಆಸ್ಪತ್ರೆಯಲ್ಲಿ ಆರೋಪಿ ರಾಜಾತಿಥ್ಯ
  • ರೋಗ ಇಲ್ಲದಿದ್ದರೂ ಆಸ್ಪತ್ರೆಗೆ ದಾಖಲು
  • ಜೈಲಾಧಿಕಾರಿ, ವೈದ್ಯಾಧಿಕಾರಿಗಳಿಗೆ ವರದಿ ಸೂಚನೆ

ಮಂಡ್ಯ, ಆಗಸ್ಟ್ 25: ಜೈಲಿನಲ್ಲಿ ಇರಬೇಕಾಗಿದ್ದ ಭೂ ದಾಖಲೆಗಳ ಪ್ರಕರಣದ ಪ್ರಮುಖ ಆರೋಪಿಯೊಬ್ಬನನ್ನು ಅನಧಿಕೃತವಾಗಿ ಮಂಡ್ಯದ (Mandya) ಮಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿರುವುದು ಜಿಲ್ಲಾ ನ್ಯಾಯಾಧೀಶರ ದಿಢೀರ್ ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ರೋಗ ಇಲ್ಲದಿದ್ದರೂ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿರುವುದು ಹಾಗೂ ಆತನೊಂದಿಗೆ ಯುವತಿಯೊಬ್ಬಳು ವಿಶೇಷ ಕೊಠಡಿಯಲ್ಲಿ ಇರುವುದು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮಂಡ್ಯ ಜಿಲ್ಲಾ ಸತ್ರ ನ್ಯಾಯಾಧೀಶ ಸಿ. ಚಂದ್ರಶೇಖರ್ ನೇತೃತ್ವದಲ್ಲಿ ಮಿಮ್ಸ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಜೈಲಿನಲ್ಲಿ ಇರಬೇಕಿದ್ದ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಮೊಹಮ್ಮದ್ ಹುಸೇನ್ ಆಸ್ಪತ್ರೆಯ ವಿಶೇಷ ಕೊಠಡಿಯಲ್ಲಿ ಇರುವುದು ಕಂಡುಬಂದಿದೆ.

ರೋಗ ಇಲ್ಲದಿದ್ದರೂ ಆಸ್ಪತ್ರೆಗೆ ದಾಖಲು?

ಶ್ರೀರಂಗಪಟ್ಟಣ ತಹಶೀಲ್ದಾರ್ ಕಚೇರಿಯಲ್ಲಿ ಎಡಿಎಲ್‌ಆರ್ ಆಗಿ ಕಾರ್ಯನಿರ್ವಹಿಸಿದ್ದ ಮೊಹಮ್ಮದ್ ಹುಸೇನ್ ವಿರುದ್ಧ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿಯನ್ನು ಬೇರೆಯವರಿಗೆ ಮಾಡಿಕೊಟ್ಟ ಆರೋಪವಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಆತನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದು, ಬಳಿಕ ಜೈಲಿಗೆ ಕಳುಹಿಸಲಾಗಿತ್ತು. ಆದರೆ ಜೈಲಿನಲ್ಲಿ ಇರಬೇಕಿದ್ದ ಆತ ಆಸ್ಪತ್ರೆಯ ವಿಶೇಷ ಕೊಠಡಿಯಲ್ಲಿ ಇರುವುದನ್ನು ನ್ಯಾಯಾಧೀಶರ ತಪಾಸಣೆ ವೇಳೆ ಗಮನಿಸಲಾಗಿದೆ. ಈ ವೇಳೆ ಆರೋಪಿಗೆ ಏನಾಗಿದೆ ಎಂದು ವೈದ್ಯಾಧಿಕಾರಿಯನ್ನು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ.

ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವಷ್ಟು ಗಂಭೀರ ಕಾಯಿಲೆ ಆತನಿಗಿಲ್ಲ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ ಎನ್ನಲಾಗಿದೆ. ಇದರಿಂದ ಅಸಮಾಧಾನಗೊಂಡ ನ್ಯಾಯಾಧೀಶರು, ಅನಾರೋಗ್ಯ ಇಲ್ಲದಿದ್ದರೂ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿರುವುದೇಕೆ ಎಂದು ಜೈಲಾಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ಆರೋಪಿಯೊಂದಿಗೆ ಯುವತಿ ಪತ್ತೆ

ಪರಿಶೀಲನೆ ವೇಳೆ ಆರೋಪಿ ಮೊಹಮ್ಮದ್ ಹುಸೇನ್ ಜೊತೆ ಯುವತಿಯೊಬ್ಬರು ಕೊಠಡಿಯಲ್ಲಿ ಇರುವುದು ಕೂಡ ಪತ್ತೆಯಾಗಿದೆ. ಆಕೆಯ ಬಗ್ಗೆ ವಿಚಾರಿಸಿದಾಗ, ತಾನು ಆರೋಪಿಯ ಗೆಳತಿ ಎಂದು ಯುವತಿ ತಿಳಿಸಿದ್ದಾಳೆ ಎನ್ನಲಾಗಿದೆ. ಆರೋಪಿಗೆ ವಿಶೇಷ ಕೊಠಡಿಯಲ್ಲಿ ಚಿಕಿತ್ಸೆ ನೀಡುತ್ತಿರುವುದು, ಜೊತೆಗೆ ಯುವತಿ ಆತನೊಂದಿಗೆ ಇರುವುದನ್ನು ಗಮನಿಸಿದ ನ್ಯಾಯಾಧೀಶರು ಜೈಲಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನ್ಯಾಯಾಲಯದ ಗಮನಕ್ಕೆ ತಂದಿದ್ದೀರಾ?

ಮೊಹಮ್ಮದ್ ಹುಸೇನ್​ನನ್ನು ಜೈಲಿನ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜೈಲಾಧಿಕಾರಿಗಳು ನ್ಯಾಯಾಧೀಶರಿಗೆ ತಿಳಿಸಿದ್ದಾರೆ. ಆದರೆ ಅವರನ್ನು ಆಸ್ಪತ್ರೆಗೆ ದಾಖಲಿಸಿರುವ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದೀರಾ ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ಇಲ್ಲ, ಇನ್ನು ಮುಂದೆ ನ್ಯಾಯಾಲಯದ ಗಮನಕ್ಕೆ ತರುತ್ತೇವೆ ಎಂದು ಜೈಲಾಧಿಕಾರಿ ಉತ್ತರಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ಪ್ರಕರಣದ ಕುರಿತು ತಕ್ಷಣ ವರದಿ ಸಲ್ಲಿಸುವಂತೆ ಜೈಲಾಧಿಕಾರಿ ಹಾಗೂ ಮಿಮ್ಸ್ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಮಂಡ್ಯ: ಇಡಿ ಊರಿಗೂರೇ ಶಾಕ್! ಮೃತ ಭಿಕ್ಷುಕಿ ಮನೆಯಲ್ಲಿ​ ಮೂಟೆಗಟ್ಟಲೆ ನಾಣ್ಯ, ನೋಟುಗಳು ಪತ್ತೆ

ವರದಿ ಪರಿಶೀಲಿಸಿದ ಬಳಿಕ ಅಗತ್ಯವಿದ್ದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ನ್ಯಾಯಾಧೀಶರು ಎಚ್ಚರಿಕೆ ನೀಡಿದ್ದಾರೆ. ಈ ಘಟನೆ ಮಿಮ್ಸ್ ಆಸ್ಪತ್ರೆ ಹಾಗೂ ಜೈಲು ವ್ಯವಸ್ಥೆಯಲ್ಲಿನ ಆರೋಪಿಗೆ ನೀಡಲಾದ ಸೌಲಭ್ಯಗಳ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:51 am, Tue, 25 August 26

Follow Us