AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯನ್ ಗೇಮ್ಸ್​ ಫೈನಲ್​ನಲ್ಲಿ ದಾಖಲೆಯ ಮೊತ್ತ ಪೇರಿಸಿದ ಟೀಮ್ ಇಂಡಿಯಾ

ಏಷ್ಯನ್ ಗೇಮ್ಸ್ ಮಹಿಳಾ ಟಿ20 ಟೂರ್ನಿಯ ಫೈನಲ್​ನಲ್ಲಿ ಬರೋಬ್ಬರಿ 216 ರನ್ ಕಲೆಹಾಕುವ ಮೂಲಕ ಟೀಮ್ ಇಂಡಿಯಾ ಹೊಸ ದಾಖಲೆ ಬರೆದಿದೆ. ಅದು ಸಹ ತನ್ನದೇ ದಾಖಲೆಯನ್ನು ಅಳಿಸಿ ಹಾಕುವ ಮೂಲಕ ಎಂಬುದು ವಿಶೇಷ. ಅಂದರೆ ಈ ಹಿಂದೆ ಬಾಂಗ್ಲಾದೇಶ್ ವಿರುದ್ಧ ಬಾರಿಸಿದ್ದ 195 ರನ್​ಗಳ ದಾಖಲೆಯನ್ನು ಮುರಿದು ಭಾರತ ಹೊಸ ಇತಿಹಾಸ ನಿರ್ಮಿಸಿದೆ.

ಏಷ್ಯನ್ ಗೇಮ್ಸ್​ ಫೈನಲ್​ನಲ್ಲಿ ದಾಖಲೆಯ ಮೊತ್ತ ಪೇರಿಸಿದ ಟೀಮ್ ಇಂಡಿಯಾ
Team India Image Credit source: GettyImages
ಝಾಹಿರ್ ಯೂಸುಫ್
|

Updated on: Sep 22, 2026 | 12:25 PM

Share

ಜಪಾನ್‌ನ ಐಚಿ ಪ್ರಿಫೆಕ್ಚರಲ್ ಕೊರೊಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರ ಮಹಿಳಾ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡ 20 ಓವರ್​ಗಳಲ್ಲಿ 216 ರನ್ ಕಲೆಹಾಕಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕಿ ಹರ್ಮನ್​ಪ್ರೀತ್ ಕೌರ್ ಬೌಲಿಂಗ್ ಆಯ್ದುಕೊಂಡಿದ್ದರು.

ಸ್ಫೋಟಕ ಆರಂಭ:

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಜೋಡಿ ಸ್ಫೋಟಕ ಆರಂಭ ಒದಗಿಸಿದರು. ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಈ ಜೋಡಿ ಮೊದಲ ವಿಕೆಟ್‌ಗೆ ಕೇವಲ 11.2 ಓವರ್‌ಗಳಲ್ಲಿ 99 ರನ್‌ಗಳ ಭರ್ಜರಿ ಜೊತೆಯಾಟ ಪ್ರದರ್ಶಿಸಿತು. ಶಫಾಲಿ ವರ್ಮಾ 29 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 3 ಬೌಂಡರಿ ಒಳಗೊಂಡ 48 ರನ್ ಗಳಿಸಿ ಕೇವಲ 2 ರನ್‌ಗಳಿಂದ ಅರ್ಧಶತಕ ವಂಚಿತರಾಗಿ ಔಟಾದರು.

ಸ್ಮೃತಿ ಸಿಡಿಲಬ್ಬರ:

ಲಂಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಉಪನಾಯಕಿ ಸ್ಮೃತಿ ಮಂಧಾನ, ಕೇವಲ 45 ಎಸೆತಗಳಲ್ಲಿ 7 ಬೃಹತ್ ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ 79 ರನ್ ಚಚ್ಚಿ ಔಟಾದರು. ಮಂಧಾನ ಔಟಾದ ಬಳಿಕ ಕ್ರೀಸ್‌ಗೆ ಬಂದ ವಿಕೆಟ್‌ಕೀಪರ್ ಬ್ಯಾಟರ್ ರಿಚಾ ಘೋಷ್ ಮೈದಾನದಲ್ಲಿ ಅಕ್ಷರಶಃ ರುದ್ರತಾಂಡವವಾಡಿದರು.

ಕೇವಲ 22 ಎಸೆತಗಳನ್ನು ಎದುರಿಸಿದ ರಿಚಾ, 6 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್‌ಗಳೊಂದಿಗೆ ಅಜೇಯ 49 ರನ್* ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನು ನಾಯಕಿ ಹರ್ಮನ್‌ಪ್ರೀತ್ ಕೌರ್ 19 ರನ್‌ ಕೊಡುಗೆ ನೀಡಿದರು.

217 ರನ್​ಗಳ ಗುರಿ:

ಭಾರತ ತಂಡವು ಸಿಡಿಲಬ್ಬರದ ಬ್ಯಾಟಿಂಗ್​ ನೆರವಿನೊಂದಿಗೆ 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 216 ರನ್​ ಕಲೆಹಾಕಿದೆ. ಅದರಂತೆ ಶ್ರೀಲಂಕಾ ತಂಡವು 20 ಓವರ್​ಗಳಲ್ಲಿ 217 ರನ್​ಗಳಿಸಿದರೆ ಮಾತ್ರ ಚಿನ್ನದ ಪದಕ ಗೆಲ್ಲಬಹುದು. ಇತ್ತ ಪ್ರತಿ ಓವರ್‌ಗೆ 10.85ರ ರನ್ ರೇಟ್​ ಗುರಿ ನೀಡಿರುವ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟದೊಂದಿಗೆ ಬಂಗಾರದ ಪದಕಕ್ಕೆ ಕೊರೊಳೊಡ್ಡುವುದು ಬಹುತೇಕ ಖಚಿತ ಎನ್ನಬಹುದು.

ಭಾರತ ಪ್ಲೇಯಿಂಗ್ XI: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಗುಣಲನ್ ಕಮಲಿನಿ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ಶ್ರೇಯಾಂಕಾ ಪಾಟೀಲ್, ಶ್ರೀ ಚರಣಿ, ನಂದನಿ ಶರ್ಮಾ, ಕ್ರಾಂತಿ ಗೌಡ್.

ಇದನ್ನೂ ಓದಿ: 0.2 ಸೆಕೆಂಡ್ಸ್ ಅಂತರದಲ್ಲಿ ಫೈನಲ್ ಮಿಸ್ ಮಾಡಿಕೊಂಡ ನಟ ಮಾಧವನ್ ಪುತ್ರ!

ಶ್ರೀಲಂಕಾ ಪ್ಲೇಯಿಂಗ್ XI: ಇಮೇಶಾ ದುಲಾನಿ, ಚಾಮರಿ ಅಥಾಪತ್ತು (ನಾಯಕಿ), ಹಾಸಿನಿ ಪೆರೇರಾ, ಹರ್ಷಿತಾ ಸಮರವಿಕ್ರಮ, ಕವಿಶಾ ದಿಲ್ಹಾರಿ, ಹನ್ಸಿಮಾ ಕರುಣಾರತ್ನೆ, ಕೌಶಾನಿ ನುತ್ಯಂಗನಾ(ಪ), ಮಿಥಾಲಿ ಅಯೋಧ್ಯಾ, ಕಾವ್ಯಾ ಕವಿಂದಿ, ಚಾಮುಡಿ ಪ್ರಬೋದಾ, ಸುಗಂದಿಕಾ ಕುಮಾರಿ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More