AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯನ್ ಗೇಮ್ಸ್​: ಪದಕಗಳ ಸಂಖ್ಯೆ ಆರಕ್ಕೇರಿಸಿದ ಭಾರತ

ಐಚಿ-ನಗೋಯಾ ಏಷ್ಯನ್ ಗೇಮ್ಸ್‌ನ ಆರಂಭದಲ್ಲೇ ಭಾರತೀಯ ಕ್ರೀಡಾಪಟುಗಳು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಈ ಪ್ರದರ್ಶನದೊಂದಿಗೆ ಶೂಟಿಂಗ್‌ನಲ್ಲಿ ಬೆಳ್ಳಿ ಹಾಗೂ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ಕ್ರೀಡೆಯಲ್ಲಿ ಐತಿಹಾಸಿಕ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಪ್ರಸ್ತುತ ಭಾರತವು ಒಟ್ಟು 6 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನಗಳಲ್ಲಿ ಗುರುತಿಸಿಕೊಂಡಿದೆ.

ಏಷ್ಯನ್ ಗೇಮ್ಸ್​: ಪದಕಗಳ ಸಂಖ್ಯೆ ಆರಕ್ಕೇರಿಸಿದ ಭಾರತ
ಭಾರತ ಏರ್ ರೈಫಲ್ಸ್ ಮಹಿಳಾ ತಂಡ
ಝಾಹಿರ್ ಯೂಸುಫ್
|

Updated on:Sep 21, 2026 | 11:05 AM

Share

ಜಪಾನ್‌ನ ಐಚಿ-ನಗೋಯಾದಲ್ಲಿ ಆರಂಭಗೊಂಡಿರುವ 2026ರ ಏಷ್ಯನ್ ಗೇಮ್ಸ್‌ನ ಕ್ರೀಡಾಕೂಟದ ಮೊದಲ ಎರಡು ದಿನಗಳಲ್ಲಿ ಭಾರತದ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈ ಪ್ರದರ್ಶನದೊಂದಿಗೆ ಭಾರತವು ಈವರೆಗೆ ಒಟ್ಟು 6 ಪದಕಗಳನ್ನು (4 ಬೆಳ್ಳಿ ಮತ್ತು 2 ಕಂಚು) ಗೆದ್ದಿದ್ದಾರೆ.

ಶೂಟಿಂಗ್‌ನಲ್ಲಿ ಭಾರತದ ಪಾರುಪತ್ಯ:

ಭಾರತದ ಪದಕದ ಬೇಟೆಗೆ ನಿರೀಕ್ಷೆಯಂತೆಯೇ ಶೂಟಿಂಗ್ (ರೈಫಲ್ಸ್) ವಿಭಾಗವು ಭದ್ರ ಬುನಾದಿ ಹಾಕಿಕೊಟ್ಟಿದೆ. ಶೂಟಿಂಗ್‌ನಲ್ಲಿ ಭಾರತಕ್ಕೆ ಈವರೆಗೆ ಒಟ್ಟು 5 ಪದಕಗಳು ಲಭಿಸಿವೆ:

  • ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡ: ಇಲಾವೆನಿಲ್ ವಲರಿವನ್, ಸೋನಮ್ ಮಾಸ್ಕರ್ ಮತ್ತು ವಿದರ್ಸಾ ಕೆ. ವಿನೋದ್ ಅವರನ್ನೊಳಗೊಂಡ ಭಾರತ ತಂಡವು ಅಮೋಘ ಪ್ರದರ್ಶನ ನೀಡಿ ದೇಶಕ್ಕೆ ಮೊದಲ ಬೆಳ್ಳಿ ಪದಕ ತಂದುಕೊಟ್ಟಿತು.
  • ಮಹಿಳೆಯರ 10 ಮೀಟರ್ ಏರ್ ರೈಫಲ್ ವೈಯಕ್ತಿಕ: ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯದಲ್ಲಿ ಇಲಾವೆನಿಲ್ ವಲರಿವನ್ ವೈಯಕ್ತಿಕ ವಿಭಾಗದಲ್ಲೂ ಬೆಳ್ಳಿ ಪದಕ ಮುಡಿಗೇರಿಸಿಕೊಂಡರು.
  • ಪುರುಷರ 10 ಮೀಟರ್ ಏರ್ ರೈಫಲ್ ತಂಡ ಹಾಗೂ ವೈಯಕ್ತಿಕ: ಪುರುಷರ ವಿಭಾಗದಲ್ಲೂ ಭಾರತೀಯ ಶೂಟರ್‌ಗಳು ಮಿಂಚಿದ್ದು, ತಂಡದ ವಿಭಾಗದಲ್ಲಿ ಬೆಳ್ಳಿ ಪದಕ ಲಭಿಸಿದೆ. ವೈಯಕ್ತಿಕ ವಿಭಾಗದಲ್ಲಿ ಹಿಮಾಂಶು ಧಿಲ್ಲೋನ್ ಬೆಳ್ಳಿ ಪದಕ ಗೆದ್ದರೆ, ರುದ್ರಾಕ್ಷ್ ಬಾಲಾಸಾಹೇಬ್ ಪಾಟೀಲ್ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.

ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ (MMA) ನಲ್ಲಿ ಐತಿಹಾಸಿಕ ಸಾಧನೆ:

ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಅತ್ಯಂತ ಹೆಮ್ಮೆಯ ಕ್ಷಣವೆಂದರೆ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ (MMA) ಕ್ರೀಡೆಯಲ್ಲಿ ಲಭಿಸಿದ ಚಾರಿತ್ರಿಕ ಪದಕ. ಮಹಿಳೆಯರ ಟ್ರೆಡಿಷನಲ್ 60 ಕೆಜಿ ವಿಭಾಗದಲ್ಲಿ ಭಾರತದ ಸುಚಿಕಾ ತರಿಯಾಲ್ ಅವರು ಕಂಚಿನ ಪದಕ ಗೆಲ್ಲುವ ಮೂಲಕ ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಎಂಎಂಎ ವಿಭಾಗದಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಕೀರ್ತಿಗೆ ಪಾತ್ರರಾಗಿದ್ದಾರೆ.

ಏಷ್ಯನ್ ಗೇಮ್ಸ್​ ಟಾಪ್-10 ದೇಶಗಳ ಪದಕ ಪಟ್ಟಿ ಇಲ್ಲಿದೆ: (ಸೆ.21)

ಶ್ರೇಣಿ ದೇಶ ಚಿನ್ನ ಬೆಳ್ಳಿ ಕಂಚು ಒಟ್ಟು
1 ಚೀನಾ 13 6 3 22
2 ಜಪಾನ್ 6 8 7 21
3 ಸೌತ್ ಕೊರಿಯ 4 3 9 16
4 ಕಝಾಕಸ್ತಾನ್ 4 0 3 7
5 ಥೈಲ್ಯಾಂಡ್ 3 1 0 4
6 ಹಾಂಗ್ ಕಾಂಗ್ 1 2 2 5
7 ಮ್ಯಾನ್ಮಾರ್ 1 1 1 3
8 ಮಕಾವೊ 1 1 0 2
9 ಕುವೈತ್ 1 0 1 2
10 ಭಾರತ 0 4 2 6

ಇದನ್ನೂ ಓದಿ: ಸೆಂಚುರಿ ಮೇಲೆ ಸೆಂಚುರಿ: ಹೊಸ ಇತಿಹಾಸ ಬರೆದ ಮಾಝ್ ಸದಾಕತ್!

ಮುಂದಿನ ದಿನಗಳ ಮೇಲೆ ಭಾರತದ ಕಣ್ಣು:

ಚಿನ್ನದ ಪದಕದ ಖಾತೆ ಇನ್ನೂ ತೆರೆಯಬೇಕಾಗಿದ್ದರೂ, ಭಾರತೀಯ ಕ್ರೀಡಾಪಟುಗಳ ಈ ಆರಂಭಿಕ ಉತ್ಸಾಹವು ದೇಶದ ಕ್ರೀಡಾಭಿಮಾನಿಗಳಲ್ಲಿ ಭರವಸೆ ಮೂಡಿಸಿದೆ. ಮುಂದಿನ ದಿನಗಳಲ್ಲಿ ಅಥ್ಲೆಟಿಕ್ಸ್, ಕ್ರಿಕೆಟ್, ಹಾಕಿ, ಕಬಡ್ಡಿ ಮತ್ತು ಬ್ಯಾಡ್ಮಿಂಟನ್‌ನಂತಹ ಪ್ರಮುಖ ಕ್ರೀಡೆಗಳು ಆರಂಭವಾಗಲಿದ್ದು, ಭಾರತವು ಪದಕ ಪಟ್ಟಿಯಲ್ಲಿ ಮತ್ತಷ್ಟು ಮೇಲಕ್ಕೇರುವುದು ಖಚಿತವಾಗಿದೆ.

Published On - 11:01 am, Mon, 21 September 26

Follow Us