AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ಒಬ್ಬರೇ ಇರುವಾಗ ಹೃದಯಾಘಾತವಾದರೆ ಏನು ಮಾಡಬೇಕು?

Heart Attack Alone at Home: ಮನೆಯಲ್ಲಿ ಒಬ್ಬರೇ ಇರುವಾಗ ಹೃದಯಾಘಾತದ ಅನುಮಾನ ಬಂದರೆ ಗಾಬರಿಯಾಗದೆ ತಕ್ಷಣ ತುರ್ತು ವೈದ್ಯಕೀಯ ನೆರವು ಪಡೆಯುವುದು ಮುಖ್ಯ. ಬಾಗಿಲು ಅನ್‌ಲಾಕ್ ಮಾಡುವುದು, ಸುರಕ್ಷಿತವಾಗಿ ಕುಳಿತುಕೊಳ್ಳುವುದು ಅಥವಾ ಮಲಗುವುದು ಮತ್ತು ಕುಟುಂಬದವರಿಗೆ ಮಾಹಿತಿ ನೀಡುವುದು ಸೇರಿದಂತೆ ಹೃದಯ ಶಸ್ತ್ರಚಿಕಿತ್ಸಕರ ಸಲಹೆಗಳನ್ನು ತಿಳಿದುಕೊಳ್ಳಿ.

ಮನೆಯಲ್ಲಿ ಒಬ್ಬರೇ ಇರುವಾಗ ಹೃದಯಾಘಾತವಾದರೆ ಏನು ಮಾಡಬೇಕು?
Home Alone Heart Attack
ಮಾಲಾಶ್ರೀ ಅಂಚನ್​
| Edited By: |

Updated on:Sep 22, 2026 | 12:16 PM

Share

ಮುಖ್ಯಾಂಶಗಳು

  • ಮನೆಯಲ್ಲಿ ಒಬ್ಬರೇ ಇರುವಾಗ ಹೃದಯಾಘಾತವಾದರೆ ಏನು ಮಾಡಬೇಕು?
  • ಹೃದಯಾಘಾತದ ಅನುಮಾನ ಬಂದಾಗ ಬಾಗಿಲು ಅನ್‌ಲಾಕ್ ಮಾಡುವುದು ಏಕೆ ಮುಖ್ಯ?
  • ಎದೆ ನೋವು ಬಂದಾಗ ಒಬ್ಬರೇ ಇದ್ದರೆ ಈ 4 ಕ್ರಮಗಳನ್ನು ನೆನಪಿನಲ್ಲಿಡಿ.

ಹೃದಯಾಘಾತದ (Heart Attack) ಲಕ್ಷಣಗಳು ಕಾಣಿಸಿಕೊಂಡಾಗ ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಅತ್ಯಂತ ಮುಖ್ಯ. ಆದರೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಹೃದಯಾಘಾತವಾದರೆ ಏನು ಮಾಡಬೇಕು ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಇಂತಹ ತುರ್ತು ಪರಿಸ್ಥಿತಿಯಲ್ಲಿ ಗಾಬರಿಯಾಗದೆ ಕೆಲವು ಸರಳ ಕ್ರಮಗಳನ್ನು ಕೈಗೊಳ್ಳುವುದು ನೆರವು ಬರುವವರೆಗೆ ಸುರಕ್ಷಿತವಾಗಿರಲು ಸಹಾಯ ಮಾಡಬಹುದು.

25 ವರ್ಷಕ್ಕೂ ಹೆಚ್ಚು ಅನುಭವ ಹೊಂದಿರುವ ಅಮೆರಿಕದ ಹೃದಯ ಶಸ್ತ್ರಚಿಕಿತ್ಸಕ ಡಾ. ಜೆರೆಮಿ ಲಂಡನ್, ಮನೆಯಲ್ಲಿ ಒಬ್ಬರೇ ಇರುವಾಗ ಹೃದಯಾಘಾತದ ಅನುಮಾನ ಬಂದರೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಸಲಹೆಗಳನ್ನು ಆಧರಿಸಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಮೊದಲು ತುರ್ತು ಸೇವೆಗೆ ಕರೆ ಮಾಡಿ

ಹೃದಯಾಘಾತದ ಅನುಮಾನ ಬಂದ ತಕ್ಷಣ ಮಾಡಬೇಕಾದ ಮೊದಲ ಕೆಲಸ ತುರ್ತು ವೈದ್ಯಕೀಯ ಸೇವೆಗೆ ಕರೆ ಮಾಡುವುದು. ಭಾರತದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿಗೆ 112 ಅಥವಾ 108 ಸಂಖ್ಯೆಗೆ ಕರೆ ಮಾಡಬಹುದು. ಸಹಾಯಕ್ಕಾಗಿ ಕಾಯುತ್ತಾ ಸಮಯ ಕಳೆಯದೆ ಸಾಧ್ಯವಾದಷ್ಟು ಬೇಗ ತುರ್ತು ಸೇವೆಯನ್ನು ಸಂಪರ್ಕಿಸುವುದು ಮುಖ್ಯ.

ಮನೆಯ ಬಾಗಿಲು ತೆರೆದಿಡಿ

ತುರ್ತು ಸೇವೆಗೆ ಕರೆ ಮಾಡಿದ ನಂತರ ಮನೆಯ ಮುಖ್ಯ ಬಾಗಿಲನ್ನು ಅನ್‌ಲಾಕ್ ಮಾಡಿ ಅಥವಾ ಸಾಧ್ಯವಾದರೆ ತೆರೆದಿಡಿ. ವಿಶೇಷವಾಗಿ ರಾತ್ರಿ ಸಮಯವಾಗಿದ್ದರೆ ಮನೆಯ ಹೊರಗಿನ ದೀಪಗಳನ್ನು ಆನ್ ಮಾಡುವುದು ಸಹಾಯ ಮಾಡಬಹುದು. ಇದರಿಂದ ವೈದ್ಯಕೀಯ ಸಿಬ್ಬಂದಿಗೆ ಮನೆ ಗುರುತಿಸಲು ಸುಲಭವಾಗುತ್ತದೆ.

ನೀವು ಪ್ರಜ್ಞೆ ಕಳೆದುಕೊಂಡರೆ ಅಥವಾ ನಡೆಯಲು ಸಾಧ್ಯವಾಗದ ಸ್ಥಿತಿ ಬಂದರೆ, ಬಾಗಿಲು ಒಳಗಿನಿಂದ ಲಾಕ್ ಆಗಿದ್ದರೆ ವೈದ್ಯಕೀಯ ಸಿಬ್ಬಂದಿಗೆ ಮನೆಯೊಳಗೆ ಪ್ರವೇಶಿಸಲು ತೊಂದರೆಯಾಗಬಹುದು. ಆದ್ದರಿಂದ ಸಾಧ್ಯವಾದಷ್ಟು ಬೇಗ ಬಾಗಿಲನ್ನು ಅನ್‌ಲಾಕ್ ಮಾಡುವುದು ಮುಖ್ಯ ಎಂದು ಡಾ. ಜೆರೆಮಿ ಸಲಹೆ ನೀಡಿದ್ದಾರೆ.

ಅಗರಬತ್ತಿ, ಸೊಳ್ಳೆ ಕಾಯಿಲ್ ಹೊಗೆಯಿಂದ ಕ್ಯಾನ್ಸರ್ ಬರುತ್ತದೆಯೇ? ವೈದ್ಯರು ಹೇಳುವುದೇನು?

ಕುಳಿತುಕೊಳ್ಳಿ ಅಥವಾ ಮಲಗಿಕೊಳ್ಳಿ

ಬಾಗಿಲು ಅನ್‌ಲಾಕ್ ಮಾಡಿದ ನಂತರ ಸುರಕ್ಷಿತವಾದ ಸ್ಥಳದಲ್ಲಿ ಕುಳಿತುಕೊಳ್ಳಿ ಅಥವಾ ಮಲಗಿಕೊಳ್ಳಿ. ಉಸಿರಾಟಕ್ಕೆ ಅನುಕೂಲವಾಗುವ ಭಂಗಿಯನ್ನು ಆಯ್ಕೆ ಮಾಡಿಕೊಳ್ಳಿ. ವೈದ್ಯರ ಪ್ರಕಾರ, ಕೆಲವರಿಗೆ ಮಲಗಿ ಕಾಲುಗಳನ್ನು ಸ್ವಲ್ಪ ಎತ್ತರದಲ್ಲಿಡುವುದು ಆರಾಮ ನೀಡಬಹುದು. ಮುಖ್ಯವಾಗಿ, ನಡೆಯುತ್ತಾ ಅಥವಾ ನಿಂತುಕೊಂಡೇ ಇರಬೇಡಿ. ತಲೆ ಸುತ್ತಿ ಪ್ರಜ್ಞೆ ತಪ್ಪಿದರೆ ಕೆಳಗೆ ಬಿದ್ದು ಮತ್ತೊಂದು ಗಾಯವಾಗುವ ಅಪಾಯವಿರುತ್ತದೆ. ಆದ್ದರಿಂದ ಸುರಕ್ಷಿತವಾದ ಸ್ಥಿರ ಭಂಗಿಯಲ್ಲಿ ಇರುವುದು ಉತ್ತಮ.

ಕುಟುಂಬದವರು ಅಥವಾ ಸ್ನೇಹಿತರಿಗೆ ತಿಳಿಸಿ

ತುರ್ತು ಸೇವೆಗೆ ಕರೆ ಮಾಡಿದ ಬಳಿಕ ಕುಟುಂಬದವರು ಅಥವಾ ಆಪ್ತ ಸ್ನೇಹಿತರಿಗೆ ಕರೆ ಮಾಡಿ ಪರಿಸ್ಥಿತಿಯನ್ನು ತಿಳಿಸಿ. ನೀವು ಒಬ್ಬರೇ ಇದ್ದೀರಿ ಮತ್ತು ಆಸ್ಪತ್ರೆಗೆ ಕರೆದೊಯ್ಯುವ ಪರಿಸ್ಥಿತಿ ಎದುರಾಗಿರುವ ಸಾಧ್ಯತೆಯಿದೆ ಎಂಬುದನ್ನು ಅವರಿಗೆ ತಿಳಿಸುವುದು ಸಹಾಯವಾಗಬಹುದು.

ಆಸ್ಪಿರಿನ್ ಬಗ್ಗೆ ಏನು?

ಡಾ. ಜೆರೆಮಿ ಅವರ ಸಲಹೆಯಂತೆ, ತುರ್ತು ನೆರವು ಬರುವವರೆಗೆ ಎಂಟೆರಿಕ್-ಲೇಪನವಿಲ್ಲದ ಆಸ್ಪಿರಿನ್ 162-325 ಮಿ.ಗ್ರಾಂ ಅನ್ನು ಜಗಿಯುವ ಸಲಹೆ ನೀಡಲಾಗಿದೆ. ಆದರೆ ಆಸ್ಪಿರಿನ್‌ಗೆ ಅಲರ್ಜಿ ಇರುವವರು, ಸಕ್ರಿಯ ರಕ್ತಸ್ರಾವ ಇರುವವರು ಅಥವಾ ವೈದ್ಯರು ಆಸ್ಪಿರಿನ್ ತೆಗೆದುಕೊಳ್ಳಬಾರದು ಎಂದು ಈಗಾಗಲೇ ಸೂಚಿಸಿರುವವರು ಇದನ್ನು ತೆಗೆದುಕೊಳ್ಳಬಾರದು. ಇಂತಹ ಸಂದರ್ಭದಲ್ಲಿ ತುರ್ತು ವೈದ್ಯಕೀಯ ಸಿಬ್ಬಂದಿಯ ಸೂಚನೆಗೆ ಆದ್ಯತೆ ನೀಡಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:16 pm, Tue, 22 September 26

Follow Us