ಮಂಡ್ಯ: ಪ್ರತಿಷ್ಠಿತ ಕಂಪನಿ ಹೆಸರಲ್ಲಿ ನಕಲಿ ಮದ್ಯ ತಯಾರಿಕೆ, ಮನೆ ಮೇಲೆ ಅಬಕಾರಿ ಇಲಾಖೆ ದಾಳಿ
ಮೆಕ್ ಡೊನಾಲ್ಡ್, ಬ್ಲ್ಯಾಕ್ ಆ್ಯಂಡ್ ವೈಟ್, ಟೀಚರ್ಸ್ ಸ್ಕಾಚ್, ಇಂಪಿರಿಯಲ್ ಬ್ಲ್ಯೂ, ಒಂದೆರಡಲ್ಲ... ಎಲ್ಲವೂ ಬ್ರ್ಯಾಂಡೆಡ್. ಎಣ್ಣೆ ಪ್ರಿಯರಿಗೆ ಇವುಗಳು ಹೆಸರು ಕೇಳುತ್ತಿದ್ದರೇ ಕಿಕ್ಕು ಏರುತ್ತದೆ. ಆದರೆ, ಅಸಲಿ ವಿಚಾರ ತಿಳಿದರೆ ಏರಿರುವ ಕಿಕ್ ಇಳಿಯುವುದು ಗ್ಯಾರಂಟಿ! ಮೇಲೆ ಬ್ರ್ಯಾಂಡೆಟ್ ಸ್ಟಿಕ್ಕರ್ ಅಂಟಿಸಿ ಒಳಗೆ ನಕಲಿ ಮದ್ಯ ಮಾರಾಟ ಮಾಡುತ್ತಿರುವ ದಂಧೆ ಮಂಡ್ಯದಲ್ಲಿ ಬಯಲಾಗಿದೆ.
ಮಂಡ್ಯ, ಡಿಸೆಂಬರ್ 16: ಈಗಂತೂ ಯಾವುದು ನಕಲಿಯೋ ಯಾವುದೋ ಅಸಲಿಯೋ ಒಂದೂ ಗೊತ್ತಾಗುವುದಿಲ್ಲ. ಇನ್ಮುಂದೆ ಮದ್ಯಪ್ರಿಯರು ಬಾರ್ ಇಲ್ಲವೇ ವೈನ್‌ಶಾಪ್‌ಗಳಲ್ಲಿ ಮದ್ಯ ಖರೀದಿಸುವುದಕ್ಕೂ ಮುನ್ನ ಸ್ವಲ್ಪ ಯೋಚನೆ ಮಾಡುವುದು ಒಳ್ಳೆಯದು. ಯಾಕಂದರೆ, ಅಲ್ಲಿ ಕೊಡುವ ಮದ್ಯ ಅಸಲಿಯೋ ನಕಲಿಯೋ ಎಂಬುದೇ ಅನುಮಾನವಾಗಿದೆ. ಮಂಡ್ಯ ಜಿಲ್ಲೆಯ ಬಿಟಿ ಲಲಿತಾ ನಾಯಕ್ ಬಡಾವಣೆಯಲ್ಲಿ ಭಾನುವಾರ ಅಬಕಾರಿ ಇಲಾಖೆ ನಡೆಸಿದ ರೇಡ್‌ನಲ್ಲಿ ಬೃಹತ್ ನಕಲಿ ಲಿಕ್ಕರ್ ದಂಧೆ ಬಯಲಾಗಿದೆ. ಸಾಲು ಸಾಲಾಗಿ ಜೋಡಿಸಿಟ್ಟಿರುವ ಸ್ಪಿರಿಟ್ ತುಂಬಿರುವ ಕ್ಯಾನ್‌ಗಳು, ಮತ್ತೊಂದೆಡೆ ದುಬಾರಿ ಮದ್ಯದ ಬಾಟಲ್‌ಗಳು ಪತ್ತೆಯಾಗಿವೆ.
ಗ್ಯಾಂಗೊಂದು ಮನೆಯೊಂದನ್ನು ಬಾಡಿಗೆ ಪಡೆದು ‘ಕಾಮಧೇನು ಕಂಫರ್ಟ್ಸ್’ ಅನ್ನೋ ಹೆಸರಲ್ಲಿ ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ನಕಲಿ ಮದ್ಯ ತಯಾರಿಕೆ ದಂಧೆ ನಡೆಸುತ್ತಿತ್ತು. ಮನೆಯಲ್ಲೇ ಮದ್ಯದ ಸ್ಯಾಚೆಟ್, ಸ್ಟಿಕ್ಕರ್ ತಯಾರಿಸುವ ಯಂತ್ರ ಇಟ್ಟುಕೊಂಡಿದ್ದರು. ಕರ್ನಾಟಕ ಸರ್ಕಾರದ ಲಾಂಛನ, ಅಬಕಾರಿ ಇಲಾಖೆ ಚಿಹ್ನೆಯನ್ನೂ ಬಳಕೆ ಮಾಡುತ್ತಿದ್ದರು ಎಂದು ಅಬಕಾರಿ ಡಿವೈಎಸ್‌ಪಿ ಸೋಮಶೇಖರ್ ತಿಳಿಸಿದ್ದಾರೆ.
590 ಲೀಟರ್ ಸ್ಪಿರಿಟ್, 30 ಲೀಟರ್ ನಕಲಿ ಮದ್ಯ ಜಪ್ತಿ
ಪಕ್ಕಾ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಹಂಡ್ರೆಡ್ ಪೈಪರ್ಸ್, ಎಂಸಿ ವಿಸ್ಕಿ, ಬ್ಲಾಕ್ ಆ್ಯಂಡ್ ವೈಟ್, ಟೀಚರ್ಸ್ ಸ್ಕಾಚ್, ಇಂಪೀರಿಯಲ್ ಬ್ಲೂ, ಹಂಡ್ರೆಡ್ ಪೈಪರ್ಸ್, ಎಂಸಿ ವಿಸ್ಕಿ, ಸಿಲ್ವರ್ ಕಪ್ ಸ್ಯಾಚೆಟ್ ಪತ್ತೆಯಾಗಿವೆ. ದಾಳಿ ವೇಳೆ 35 ಲೀಟರ್ ನಕಲಿ ಮದ್ಯದ ಸ್ಯಾಚೆಟ್ಗಳು ಸಿಕ್ಕಿವೆ. 590 ಲೀಟರ್ ಸ್ಪಿರಿಟ್, 30 ಲೀಟರ್ ನಕಲಿ ಮದ್ಯ. ಸ್ಟಿಕ್ಕರ್ ತಯಾರಿಸುವ ಯಂತ್ರ, ಕಚ್ಚಾ ಸಾಮಗ್ರಿಯನ್ನ ಸೀಜ್ ಮಾಡಲಾಗಿದೆ. ಒಬ್ಬ ಆರೋಪಿ ಸೆರೆಸಿಕ್ಕಿದ್ದು ಉಳಿದವರು ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಶ್ರೀರಂಗಪಟ್ಟಣದಲ್ಲಿ ಸಂಕೀರ್ತನ ಯಾತ್ರೆ: ಜಾಮಿಯಾ ಮಸೀದಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ
ಮದ್ಯಪ್ರಿಯರ ಜೀವದ ಜತೆ ಚೆಲ್ಲಾಟ ಆಡುತ್ತಿರುವ ಈ ದಂಧೆ ಹಿಂದೆ ದೊಡ್ಡ ಜಾಲವೇ ಇದೆ. ಖದೀಮರ ಗ್ಯಾಂಗ್ ನಕಲಿ ಮದ್ಯವನ್ನು ಯಾವ್ಯಾವ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಿಗೆ ಪೂರೈಕೆ ಮಾಡುತ್ತಿತ್ತು ಎಂಬುದು ತನಿಖೆಯಿಂದ ತಿಳಿಯಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ